ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್ ಟೆಸ್ಟ್ ಸರಣಿ: ಗಾಬಾದಲ್ಲಿ ರೂಟ್–ಪ್ಯಾಟ್‌ ಜಿದ್ದಾಜಿದ್ದಿ

ಆತಿಥೇಯರನ್ನು ಮಣಿಸುವ ಛಲದಲ್ಲಿ ಇಂಗ್ಲೆಂಡ್
Last Updated 7 ಡಿಸೆಂಬರ್ 2021, 14:52 IST
ಅಕ್ಷರ ಗಾತ್ರ

ಬ್ರಿಸ್ಬೇನ್ (ಎಪಿ): ಟೆಸ್ಟ್‌ ಕ್ರಿಕೆಟ್‌ನ ರೋಚಕ ಸರಣಿಗಳಲ್ಲಿ ಪ್ರಮುಖವಾಗಿರುವ ಆ್ಯಷಸ್ ಸರಣಿಯಲ್ಲಿ ಈ ಬಾರಿ ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿರುವ ಪ್ಯಾಟ್ ಕಮಿನ್ಸ್ ಮತ್ತು ಕಲಾತ್ಮಕ ಬ್ಯಾಟ್ಸ್‌ಮನ್ ಜೋ ರೂಟ್ ನಡುವೆ ಹಣಾಹಣಿ ನಡೆಯಲಿದೆ.

1950ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಇದೇ ಮೊದಲ ಸಲ ಆಸ್ಟ್ರೇಲಿಯಾ ತಂಡಕ್ಕೆ ಬೌಲರ್ ಸಾರಥ್ಯ ವಹಿಸಿರುವುದು ವಿಶೇಷ. ಕಳೆದೊಂದು ವರ್ಷದಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ರನ್‌ಗಳ ರಾಶಿ ಹಾಕುತ್ತಿರುವ ರೂಟ್ ಅವರ ನಾಯಕತ್ವಕ್ಕೆ ಈ ಸರಣಿ ಸವಾಲಾಗುವ ನಿರೀಕ್ಷೆ ಇದೆ.

‘ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಪರಿಣತರಾಗಿರುವ ಇಬ್ಬರು ನಾಯಕರ ಹಣಾಹಣಿ ಇದಾಗಿದೆ. ಅತ್ಯಂತ ಕುತೂಹಲಕಾರಿ ಹೋರಾಟ ನಡೆಯುವ ನಿರೀಕ್ಷೆ ಇದೆ’ ಎಂದು ಇಂಗ್ಲೆಂಡ್ ವಿಕೆಟ್‌ಕೀಪರ್ ಜೋಸ್ ಬಟ್ಲರ್ ಹೇಳಿದ್ದಾರೆ.

ಆದರೆ ಇಂಗ್ಲೆಂಡ್‌ನ ಅನುಭವಿ ಬೌಲರ್ ಜಿಮ್ಮಿ ಆ್ಯಂಡರ್ಸನ್ ಈ ಬಾರಿ ಲಭ್ಯರಿಲ್ಲ. ಇದರಿಂದಾಗಿ ರೂಟ್ ಸ್ವಲ್ಪ ಒತ್ತಡದಲ್ಲಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಭಾರತದ ಎದುರು ಇಂಗ್ಲೆಂಡ್ ತನ್ನ ತವರಿನಲ್ಲಿಯೇ ಸರಣಿಯಲ್ಲಿ ಹಿನ್ನಡೆ ಅನುಭವಿಸಿತ್ತು. ಆಸ್ಟ್ರೇಲಿಯಾ ಕೂಡ ಸತತ ಎರಡು ಬಾರಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಎದುರು ತನ್ನ ತವರಿನಲ್ಲಿಯೇ ಶರಣಾಗಿದೆ.

ಅದರಲ್ಲೂ ಗಾಬಾ ಪಂದ್ಯದಲ್ಲಿ ಹೋದ ಡಿಸೆಂಬರ್‌ನಲ್ಲಿ ಭಾರತ ತಂಡವು ಐತಿಹಾಸಿಕ ಜಯ ದಾಖಲಿಸಿತ್ತು. ರೂಟ್‌ ಬಳಗವೂ ಅಂತಹದ ಜಯವನ್ನು ಸಾಧಿಸುವತ್ತ ಚಿತ್ತ ನೆಟ್ಟಿದೆ.

ಟಿ20 ವಿಶ್ವಕಪ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ವಾರ್ನರ್, ಅನುಭವಿ ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್ ಮತ್ತು ಲಾಬುಷೇನ್ ಆತಿಥೇಯ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಕಮಿನ್ಸ್‌ಗೆ ಸ್ಟಾರ್ಕ್, ಸ್ಪಿನ್ನರ್ ಲಯನ್ ಮತ್ತು ವೇಗಿ ಹ್ಯಾಜಲ್‌ವುಡ್ ಅವರ ಜೊತೆ ಇದೆ.

ಇಂಗ್ಲೆಂಡ್‌ ಬೌಲಿಂಗ್‌ನಲ್ಲಿ ಮಾರ್ಕ್‌ ವುಡ್, ಒಲಿ ರಾಬಿನ್ಸನ್, ಕ್ರಿಸ್ ವೋಕ್ಸ್‌ ಮತ್ತು ಬ್ರಾಡ್ ಅವರ ಆಟವೇ ಪ್ರಮುಖವಾಗಲಿದೆ. ವೇಗಿಗಳ ನೆಚ್ಚಿನ ತಾಣವಾಗಿರುವ ಗಾಬಾದಲ್ಲಿ ಮೇಲುಗೈ ಸಾಧಿಸಲು ನಿಕಟ ಪೈಪೋಟಿಯ ನಿರೀಕ್ಷೆಯಂತೂ ಇದೆ.

ತಂಡಗಳು: ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಾಬುಷೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಶ್ ಹ್ಯಾಜಲ್‌ವುಡ್, ಉಸ್ಮಾನ್ ಖ್ವಾಜಾ, ಮಿಚೆಲ್ ನೆಸರ್, ಜೇ ರಿಚರ್ಡ್ಸನ್, ಮಿಚೆಲ್ ಸ್ವಿಪ್ಸನ್.

ಇಂಗ್ಲೆಂಡ್: ಜೋ ರೂಟ್ (ನಾಯಕ), ರೋರಿ ಬರ್ನ್ಸ್,ಹಸೀಬ್ ಹಮೀದ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಒಲಿ ಪೊಪ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಒಲಿ ರಾಬಿನ್ಸನ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್.

ಪಂದ್ಯ ಆರಂಭ: ಬೆಳಿಗ್ಗೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT