ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup 2022| ಅಫ್ಗನ್‌ ವಿರುದ್ಧ ಪಾಕ್‌ಗೆ ಜಯ: ಭಾರತದ ಫೈನಲ್‌ ಕನಸು ಭಗ್ನ

ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ; ಫೈನಲ್‌ಗೆ ಬಾಬರ್‌ ಆಜಂ ಪಡೆ: ಭಾರತದ ಕನಸು ಭಗ್ನ
Last Updated 7 ಸೆಪ್ಟೆಂಬರ್ 2022, 18:21 IST
ಅಕ್ಷರ ಗಾತ್ರ

ಶಾರ್ಜಾ: ಪಾಕಿಸ್ತಾನದ ನಸೀಂ ಶಾ ಹೊಡೆದ ಎರಡು ಸಿಕ್ಸರ್‌ಗಳು ಅಫ್ಗಾನಿಸ್ತಾನ ತಂಡದ ದಿಟ್ಟ ಹೋರಾಟವನ್ನು ವ್ಯರ್ಥಗೊಳಿಸಿ
ದವು. ಇನ್ನೊಂದೆಡೆ ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್‌ ಪ್ರವೇಶಿಸುವ ಭಾರತದ ಸಣ್ಣ ಆಸೆಯೂ ಕಮರಿತು.

1 ವಿಕೆಟ್‌ ಅಂತರದಿಂದ ರೋಚಕ ಜಯ ಸಾಧಿಸಿದ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿತು.

ಬುಧವಾರ ರಾತ್ರಿ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿ 129 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಆದರೆ ಬೌಲರ್‌ಗಳು ತೋರಿದ ಅಮೋಘ ಆಟಕ್ಕೆ ಪಾಕಿಸ್ತಾನ ತಂಡವು ಜಯಗಳಿಸಲು ಹರಸಾಹಸ ಪಡಬೇಕಾಯಿತು. ತಲಾ ಮೂರು ವಿಕೆಟ್ ಗಳಿಸಿದ ಫಜಲ್‌ಹಕ್ ಫಾರೂಖಿ ಹಾಗೂ ಫರೀದ್ ಅಹಮದ್ ಮಲಿಕ್ ಅಫ್ಗನ್ ತಂಡವನ್ನು ಜಯದ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರು.

ಆದರೆ, ಕೊನೆಯ ಓವರ್‌ನಲ್ಲಿ ಪಾಕ್ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು. ಫಾರೂಖಿ ಬೌಲಿಂಗ್‌ ಮಾಡಿದ 20ನೇ ಓವರ್‌ನ ಮೊದಲ ಎರಡೂ ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ ನಸೀಂ ಶಾ ಪಾಕ್ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಪಾಕ್ ಆಟಗಾರರು ಸಂಭ್ರಮಿಸಿದರೆ, ಅಫ್ಗನ್ ಆಟಗಾರರು ಕಣ್ಣೀರಿಟ್ಟರು.

ರವೂಫ್ ಬೌಲಿಂಗ್: ಟಾಸ್ ಗೆದ್ದ ಪಾಕಿಸ್ತಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರವೂಫ್ (26ಕ್ಕೆ2) ಬೌಲಿಂಗ್ ಮುಂದೆ ಅಫ್ಗನ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 129 ರನ್‌ ಗಳಿಸಿತು.ಆರಂಭಿಕ ಬ್ಯಾಟರ್‌ಗಳಾದ ಹಜರತ್‌ಉಲ್ಲಾ ಝಝೈ (21ರನ್) ಹಾಗೂ ಗುರ್ಬಾಜ್ (17 ರನ್) ಉತ್ತಮ ಆರಂಭ ನೀಡಿದರು. ಮೂರು ಓವರ್‌ ಗಳಲ್ಲಿ 36 ರನ್‌ ಸೇರಿಸಿದರು.

ಆದರೆ ನಾಲ್ಕನೇ ಓವರ್‌ನಲ್ಲಿ ಹ್ಯಾರಿಸ್‌ ಸ್ವಿಂಗ್‌ಗೆ ಗುರ್ಬಾಜ್ ಕ್ಲೀನ್‌ಬೌಲ್ಡ್ ಆದರು. ನಂತರದ ಓವರ್‌ನಲ್ಲಿ ಮೊಹಮ್ಮದ್ ಹಸನೈನ್ ಬೌಲಿಂಗ್‌ನಲ್ಲಿ ಝಝೈ ಕೂಡ ಔಟಾದರು. ಈ ಹಂತದಲ್ಲಿ ಇಬ್ರಾಹಿಂ ಜದ್ರಾನ್ (35; 37ಎ) ತಾಳ್ಮೆಯ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಬ್ಯಾಟರ್‌ಗಳು ಕಾಲೂರಲು ಪಾಕ್ ಬೌಲರ್‌ಗಳು ಬಿಡಲಿಲ್ಲ.

ಸಂಕ್ಷಿಪ್ತ ಸ್ಕೋರು

ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 6ಕ್ಕೆ129 (ಹಜರತ್‌ಉಲ್ಲಾ ಝಝೈ 21, ರೆಹಮಾನುಲ್ಲಾ ಗುರ್ಬಾಜ್ 17, ಇಬ್ರಾಹಿಂ ಜದ್ರಾನ್ 35, ರಶೀದ್ ಖಾನ್ ಔಟಾಗದೆ 18, ಹ್ಯಾರಿಸ್ ರವೂಫ್ 26ಕ್ಕೆ2, ನಸೀಂ ಶಾ 19ಕ್ಕೆ1, ಮೊಹಮ್ಮದ್ ಹುಸೇನ್ 34ಕ್ಕೆ1).

ಪಾಕಿಸ್ತಾನ: 19.2 ಓವರ್‌ಗಳಲ್ಲಿ 9ಕ್ಕೆ 131 (ಮೊಹಮ್ಮದ್ ರಿಜ್ವಾನ್ 20, ಇಫ್ತಿಕಾರ್ ಅಹಮದ್ 30, ಶಾದಾಬ್ ಖಾನ್ 36, ಫಜಲ್‌ಹಕ್ ಫಾರೂಕಿ 31ಕ್ಕೆ3, ಫರೀದ್ ಅಹಮದ್ ಮಲಿಕ್ 31ಕ್ಕೆ3, ರಶೀದ್ ಖಾನ್ 25ಕ್ಕೆ2) ಫಲಿ ತಾಂಶ: ಪಾಕಿಸ್ತಾನಕ್ಕೆ 1 ವಿಕೆಟ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT