ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS Test: ಭಾರತ ತಿರುಗೇಟು; ಟೀ ವಿರಾಮಕ್ಕೆ ಆಸೀಸ್ 92/5

Last Updated 18 ಡಿಸೆಂಬರ್ 2020, 8:51 IST
ಅಕ್ಷರ ಗಾತ್ರ

ಅಡಿಲೇಡ್: ಇಲ್ಲಿನ ಅಡಿಲೇಡ್ ಓವಲ್ ಮೈದಾನಲ್ಲಿ ಸಾಗುತ್ತಿರುವ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಒಡ್ಡಿರುವ 244 ರನ್‌ಗಳಿಗೆ ಉತ್ತರ ನೀಡಲಾರಂಭಿಸಿರುವ ಆಸ್ಟ್ರೇಲಿಯಾ, ಎರಡನೇ ದಿನದಾಟದ ಟೀ ವಿರಾಮದ ಹೊತ್ತಿಗೆ 48 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ. ಈಗ ಇನ್ನು ಐದು ವಿಕೆಟ್ ಬಾಕಿ ಉಳಿದಿರುವಂತೆಯೇ ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ 152 ರನ್ ಗಳಿಸಬೇಕಾದ ಅಗತ್ಯವಿದೆ. ಇನ್ನೊಂದೆಡೆ ಭಾರತ ತಂಡವು ಎದುರಾಳಿಗಳನ್ನು ಆದಷ್ಟು ಬೇಗ ಕಟ್ಟಿಹಾಕುವ ಇರಾದೆಯಲ್ಲಿದೆ.

ಅಲ್ಪ ಮೊತ್ತ ಪೇರಿಸಿದರೂ ಎದೆಗುಂದದ ಭಾರತೀಯ ಬೌಲರ್‌ಗಳು ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಬೆವರಿಳಿಸುವಲ್ಲಿ ಯಶಸ್ವಿಯಾದರು. 29 ರನ್ ಗಳಿಸುವಷ್ಟರಲ್ಲಿಓಪನರ್‌ಗಳಾದ ಮ್ಯಾಥ್ಯೂ ವೇಡ್ ಹಾಗೂ ಜೋ ಬರ್ನ್ಸ್ ಪೆವಿಲಿಯನ್‌ಗೆ ಮರಳಿಸಿದ ಬಲಗೈ ವೇಗಿ ಜಸ್‌ಪ್ರೀತ್ ಬೂಮ್ರಾ ಡಬಲ್ ಆಘಾತ ನೀಡಿದರು. ವೇಡ್ ಹಾಗೂ ಬರ್ನ್ಸ್ ತಲಾ ಎಂಟು ರನ್ ಗಳಿಸಿ ಬೂಮ್ರಾ ದಾಳಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಡಿನ್ನರ್ ವಿರಾಮದ ಹೊತ್ತಿಗೆ ಆಸೀಸ್ ಎರಡು ವಿಕೆಟ್‌ ನಷ್ಟಕ್ಕೆ 35 ರನ್ ಗಳಿಸಿತ್ತು. ವಿರಾಮದ ಬಳಿಕ ಅಪಾಯಕಾರಿ ಸ್ಟೀವನ್ ಸ್ಮಿತ್ (1) ಹಾಗೂ ಟ್ರಾವಿಸ್ ಹೆಡ್ (7) ಹೊರದಬ್ಬಿದ ರವಿಚಂದ್ರನ್ ಅಶ್ವಿನ್ ಆಘಾತ ನೀಡಿದರು.

ಈ ನಡುವೆ ಮಾರ್ನಸ್ ಲಾಬುಷೇನ್ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಪೃಥ್ವಿ ಶಾ ಟೀಕೆಗೆ ಗುರಿಯಾದರು. ಇನ್ನೊಂದೆಡೆ ನಿಖರ ದಾಳಿ ಮುಂದುವರಿಸಿದ ಅಶ್ವಿನ್, ಡೆಬ್ಯು ಆಟಗಾರ ಕ್ಯಾಮರೂನ್ ಗ್ರೀನ್ (11) ಅವರಿಗೂ ಪೆವಿಲಿಯನ್ ಹಾದಿ ತೋರಿಸಿದರು.

ಇದರೊಂದಿಗೆ 79 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಆಸೀಸ್ ಸಂಕಷ್ಟಕ್ಕೆ ಸಿಲುಕಿತ್ತು. ಇನ್ನೊಂದೆಡೆ ಜೀವದಾನಗಳ ಸ್ಪಷ್ಟ ಲಾಭವೆತ್ತಿದ ಲಾಬುಷೇನ್, ಅತ್ಯುತ್ತಮವಾಗಿ ಆಡುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು.

ಇದೀಗ ಕ್ರೀಸಿನಲ್ಲಿರುವ ಮಾರ್ನಸ್ ಲಾಬುಷೇನ್ (46*) ಹಾಗೂ ನಾಯಕ ಟಿಮ್ ಪೇನ್ (9*) ದಿನದಾಟದ ಅಂತಿಮ ಅವಧಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ 244ಕ್ಕೆ ಆಲೌಟ್...
ಈ ಮೊದಲು 233/6 ಎಂಬಲ್ಲಿದ್ದ ಎರಡನೇ ದಿನದಾಟ ಮುಂದುವರಿಸಿದ ಭಾರತ ತಂಡವು, 23 ನಿಮಿಷದೊಳಗೆ ಮತ್ತಷ್ಟು 11 ರನ್ ಪೇರಿಸುವುದರೊಳಗೆ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟ್ ಆಯಿತು.

25 ಎಸೆತಗಳಲ್ಲೇ ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಆಸೀಸ್ ವೇಗಿಗಳು ಕಬಳಿಸಿದರು. ವೃದ್ಧಿಮಾನ್ ಸಹಾ (9), ರವಿಚಂದ್ರನ್ ಅಶ್ವಿನ್ (15), ಉಮೇಶ್ ಯಾದವ್ (6) ಹಾಗೂ ಮೊಹಮ್ಮದ್ ಶಮಿ (0) ನಿರಾಸೆ ಮೂಡಿಸಿದರು. ಇನ್ನುಳಿದಂತೆ ಜಸ್‌ಪ್ರೀತ್ ಬುಮ್ರಾ (4*) ರನ್ ಗಳಿಸಿದರು. ಆಸೀಸ್ ಪರ ಮಿಚೆಲ್ ಸ್ಟಾರ್ಕ್ ನಾಲ್ಕು (53/4) ಮತ್ತು ಪ್ಯಾಟ್ ಕಮಿನ್ಸ್ ಮೂರು ವಿಕೆಟ್ (48/3) ಕಿತ್ತು ಮಿಂಚಿದರು.

ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಆದರೆ ರನೌಟ್ ಆಗಿರುವುದು ದೊಡ್ಡ ಮೊತ್ತ ಪೇರಿಸುವ ಭಾರತದ ಇರಾದೆಗೆ ಹಿನ್ನಡೆಯಾಯಿತು. 180 ಎಸೆತಗಳನ್ನು ಎದುರಿಸಿದ ವಿರಾಟ್ ಎಂಟು ಬೌಂಡರಿಗಳಿಂದ 74 ರನ್ ಗಳಿಸಿದರು.

ಚೇತೇಶ್ವರ ಪೂಜಾರ (43) ಹಾಗೂ ಅಜಿಂಕ್ಯ ರಹಾನೆ (42) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗಲಿಲ್ಲ. ಪೃಥ್ವಿ ಶಾ (0), ಮಯಂಕ್ ಅಗರವಾಲ್ (17), ಹನುಮ ವಿಹಾರಿ (16) ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT