ಶುಕ್ರವಾರ, ಅಕ್ಟೋಬರ್ 22, 2021
21 °C
ಎರಡನೇ ಪಂದ್ಯದಲ್ಲೂ ಭಾರತಕ್ಕೆ ಸೋಲು

ಸ್ಮೃತಿ ಮಂದಾನ ಅರ್ಧಶತಕ ವ್ಯರ್ಥ; ಆಸ್ಟ್ರೇಲಿಯಾ ಮಹಿಳೆಯರಿಗೆ ಟಿ20 ಸರಣಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗೋಲ್ಡ್ ಕೋಸ್ಟ್‌: ಅರ್ಧಶತಕ ಗಳಿಸಿದ ಸ್ಮೃತಿ ಮಂದಾನ ಅವರ ಅಮೋಘ ಆಟ ವ್ಯರ್ಥವಾಯಿತು. ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲೂ ಭಾರತ ಮಹಿಳಾ ತಂಡ ಸೋತಿತು. 14 ರನ್‌ಗಳಿಂದ ಜಯ ಗಳಿಸಿದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯನ್ನು 2–0 ಅಂತರದಿಂದ ತನ್ನದಾಗಿಸಿಕೊಂಡಿತು. 

ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಆತಿಥೇಯರು ಭರ್ಜರಿ ಜಯ ಗಳಿಸಿದ್ದರು. ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ 150 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಹರ್ಮನ್‌ಪ್ರೀತ್ ಕೌರ್ ಬಳಗಕ್ಕೆ ಆರು ವಿಕೆಟ್ ಕಳೆದುಕೊಂಡು 135 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಏಕದಿನ ಸರಣಿಯಲ್ಲಿ 1–2 ಸೋಲು ಕಂಡಿದ್ದ ಭಾರತ ಏಕೈಕ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿತ್ತು. 

ಸ್ಮೃತಿ ಮಂದಾನ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ತಂಡದ ಮೊತ್ತ ಮೂರು ರನ್ ಆಗಿದ್ದಾಗ ವಾಪಸಾದರು. ಸ್ಮೃತಿ ಮತ್ತು ಜೆಮಿಮಾ ರಾಡ್ರಿಗಸ್ ಎರಡನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟವಾಡಿ ನಿರೀಕ್ಷೆ ಮೂಡಿಸಿದರು. ಜೆಮಿಮಾ ಔಟಾದ ನಂತರ ಸ್ಮೃತಿ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಉತ್ತಮ ಜೊತೆಯಾಟ ಆಡಿದರು. ಸ್ಮೃತಿ 46 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. ಆದರೆ 52 ರನ್‌ ಗಳಿಸಿದ್ದಾಗ ಔಟಾದರು.

ಕೊನೆಯ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ಗೆಲುವಿಗೆ ಪ್ರಯತ್ನ ನಡೆಸಿದರು. ಆದರೆ ಕರಾರುವಾಕ್ ದಾಳಿಯ ಮೂಲಕ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು.

ಬೇಥ್ ಮೂನಿ–ಮೆಗ್ರಾ ಮಿಂಚಿನ ಬ್ಯಾಟಿಂಗ್

ಟಾಸ್ ಗೆದ್ದ ಭಾರತ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ಬ್ಯಾಟರ್ ಬೇಥ್ ಮೂನಿ ಈ ಪಂದ್ಯದಲ್ಲೂ ಅಮೋಘ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದರು. ಹಿಂದಿನ ಪಂದ್ಯದಲ್ಲಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದ ತಹಲಿಯಾ ಮೆಗ್ರಾ ಅವರು ಕೊನೆಯ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಒಂದು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದ ಅವರು 31 ಎಸೆತಗಳಲ್ಲಿ 44 ರನ್ ಗಳಿಸಿ ಸವಾಲಿನ ಮೊತ್ತ ಪೇರಿಸಲು ನೆರವಾದರು.  

ಐದು ರನ್ ಗಳಿಸುವಷ್ಟರಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತ್ತು. ಮೂನಿ ಮತ್ತು ನಾಯಕಿ ಮೆಗ್‌ ಲ್ಯಾನಿಂಗ್ ಎರಡನೇ ವಿಕೆಟ್‌ಗೆ 39 ರನ್ ಸೇರಿಸಿದರು. ಲ್ಯಾನಿಂಗ್‌, ಗಾರ್ಡನರ್ ಮತ್ತು ಎಲಿಸ್ ಪೆರಿ ಔಟಾದ ನಂತರ ಮೂನಿ–ತಹಿಲಾ ಜೊತೆಗೂಡಿ ಭರ್ಜರಿ ಆಟವಾಡಿದರು. ಕೊನೆಯ 19 ಎಸೆತಗಳಲ್ಲಿ ತಂಡ 40 ರನ್ ಗಳಿಸಿ ಭಾರತ ಬೌಲರ್‌ಗಳ ಬೆವರಿಳಿಸಿತು. ಮುರಿಯದ ಆರನೇ ವಿಕೆಟ್‌ಗೆ ಮೆಗ್ರಾ ಮತ್ತು ಜಾರ್ಜಿಯಾ ವಾರೆಹಂ 32 ರನ್‌ಗಳನ್ನು ಸೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು