ಭಾನುವಾರ, ನವೆಂಬರ್ 17, 2019
24 °C
ಆಸ್ಟ್ರೇಲಿಯಾಕ್ಕೆ 10 ವಿಕೆಟ್‌ ಗೆಲುವು, 2–0 ಯಿಂದ ಸರಣಿ ಜಯ;

ಕಾಂಗರೂಗಳ ಆಟಕ್ಕೆ ಪಾಕ್‌ ಕಂಗಾಲು

Published:
Updated:

ಪರ್ತ್‌: ವೇಗದ ಬೌಲರ್‌ಗಳ ಉತ್ತಮ ಪ್ರದರ್ಶನದ ನಂತರ ಆಸ್ಟ್ರೇಲಿಯಾದ ಆರಂಭ ಆಟಗಾರರು ಪಾರಮ್ಯ ಮೆರೆದರು. ಇದರಿಂದ ಶುಕ್ರವಾರ ಇಲ್ಲಿ ನಡೆದ ಮೂರನೇ ಟಿ–20 ಪಂದ್ಯದಲ್ಲೂ ಪ್ರವಾಸಿ ಪಾಕಿಸ್ತಾನ ತಂಡ ಹತ್ತು ವಿಕೆಟ್‌ಗಳ ಅಂತರದಿಂದ ಮುಖಭಂಗ ಅನುಭವಿಸಿತು.

ಮೂರು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 2–0ಯಿಂದ ಗೆದ್ದುಕೊಂಡಿತು. ಮಳೆಯಿಂದ ಒಂದು ಪಂದ್ಯ ಸ್ಥಗಿತಗೊಂಡಿತ್ತು.

ಮೊದಲು ಆಡಿದ ಪಾಕಿಸ್ತಾನ 20 ಓವರುಗಳಲ್ಲಿ 8 ವಿಕೆಟ್‌ಗೆ 106 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇಫ್ತಿಕಾರ್‌ ಅಹಮದ್‌ (37 ಎಸೆತಗಳಲ್ಲಿ 6 ಬೌಂಡರಿಗಳಿದ್ದ 45) ಬಿಟ್ಟರೆ ಉಳಿದ ಯಾರೂ 20ರ ಗಡಿ ದಾಟಲಿಲ್ಲ. ಬಿದ್ದ ಎಂಟರಲ್ಲಿ ಏಳು ವಿಕೆಟ್‌ಗಳನ್ನು ಪೇಸ್‌ ಬೌಲರ್‌ಗಳು ಪಡೆದರು. ಕೇನ್‌ ರಿಚರ್ಡ್‌ಸನ್‌ 18 ರನ್ನಿಗೆ 3 ವಿಕೆಟ್‌ ಪಡೆದು ವೈಯಕ್ತಿಕ ಶ್ರೇಷ್ಠ ಪ್ರದರ್ಶನ ದಾಖಲಿಸಿದರು.

ಪಾಕ್‌ ಗಳಿಸಿದ ಮೊತ್ತ ಆಸ್ಟ್ರೇಲಿಯಾಕ್ಕೆ ಯಾವ ರೀತಿಯಲ್ಲೂ ಸವಾಲೆನಿಸಲಿಲ್ಲ. ಕೇವಲ 11.5 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 109 ರನ್‌ ಬಾರಿಸಿತು. ಡೇವಿಡ್‌ ವಾರ್ನರ್‌ 35 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರೆ, ಆರನ್‌ ಫಿಂಚ್‌ 36 ಎಸೆತಗಳಲ್ಲಿ ಔಟಾಗದೇ 52 ರನ್‌ ಬಾರಿಸಿದರು.

ಇದು ಪರ್ತ್‌ ಮೈದಾನದಲ್ಲಿ 9 ವರ್ಷಗಳಲ್ಲಿ ನಡೆದ ಮೊದಲ ಟಿ–20 ಪಂದ್ಯ ಎನಿಸಿತು.

ಇವೆರಡು ತಂಡಗಳು ಇನ್ನು ಮೂರು ಟೆಸ್ಟ್‌ಗಳ ಸರಣಿಯನ್ನು ಆಡಲಿವೆ. ಮೊದಲ ಟೆಸ್ಟ್‌ ನ. 21ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

ಸ್ಕೋರುಗಳು
ಪಾಕಿಸ್ತಾನ:
20 ಓವರುಗಳಲ್ಲಿ 8 ವಿಕೆಟ್‌ಗೆ 106 (ಇಫ್ತಿಕಾರ್‌ ಅಹಮದ್‌ 45; ಸ್ಟಾರ್ಕ್ 29ಕ್ಕೆ2, ಅಬಾಟ್‌ 14ಕ್ಕೆ2, ರಿಚರ್ಡ್‌ಸನ್‌ 18ಕ್ಕೆ3)
ಆಸ್ಟ್ರೇಲಿಯಾ: 11.5 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 109 (ವಾರ್ನರ್‌ ಔಟಾಗದೇ 48, ಫಿಂಚ್‌ ಔಟಾಗದೇ 52).

ಪ್ರತಿಕ್ರಿಯಿಸಿ (+)