ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ನರ್‌, ಸ್ಮಿತ್‌ ಮೇಲಿನ ಶಿಕ್ಷೆ ಕಡಿತಗೊಳಿಸಿ: ಎಸಿಎ ಒತ್ತಾಯ

Last Updated 29 ಅಕ್ಟೋಬರ್ 2018, 16:15 IST
ಅಕ್ಷರ ಗಾತ್ರ

ಸಿಡ್ನಿ: ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರೂನ್‌ ಬ್ಯಾಂಕ್ರಾಫ್ಟ್‌ ಅವರ ಮೇಲಿನ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸುವಂತೆ ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಸ್ಥೆ (ಎಸಿಎ) ಕ್ರಿಕೆಟ್‌ ಆಸ್ಟ್ರೇಲಿಯಾವನ್ನು (ಸಿಎ) ಒತ್ತಾಯಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಜರುಗಿದ್ದ ಚೆಂಡು ವಿರೂಪ ‍ಪ್ರಕರಣದಲ್ಲಿ ಸ್ಮಿತ್‌, ವಾರ್ನರ್‌ ಮತ್ತು ಬ್ಯಾಂಕ್ರಾಫ್ಟ್‌ ಅವರು ಭಾಗಿಯಾಗಿದ್ದರು. ಹೀಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ವಾರ್ನರ್‌ ಮತ್ತು ಸ್ಮಿತ್‌ ಮೇಲೆ ಒಂದು ವರ್ಷ ಹಾಗೂ ಬ್ಯಾಂಕ್ರಾಫ್ಟ್‌ ಮೇಲೆ ಒಂಬತ್ತು ತಿಂಗಳು ನಿಷೇಧ ಹೇರಿತ್ತು. ಈ ಅವಧಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮತ್ತು ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಆಡುವಂತಿಲ್ಲ ಎಂದು ಸೂಚಿಸಿತ್ತು. ಆದರೆ ಮೂರನೇ ಡಿವಿಷನ್‌ ಮತ್ತು ವಿದೇಶಗಳಲ್ಲಿ ನಡೆಯುವ ಟ್ವೆಂಟಿ–20 ಟೂರ್ನಿಗಳಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು.

‘ಎಲ್ಲಾ ಪಂದ್ಯಗಳಲ್ಲೂ ಗೆಲ್ಲಲೇಬೇಕು ಎಂದು ಸಿಎ ಆಡಳಿತ ಮಂಡಳಿ ಆಟಗಾರರ ಮೇಲೆ ಅತಿಯಾದ ಒತ್ತಡ ಹೇರುತ್ತಿದೆ. ಹೀಗಾಗಿ ಆಟಗಾರರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಸ್ಮಿತ್‌, ವಾರ್ನರ್‌ ಮತ್ತು ಕ್ಯಾಮರೂನ್‌ ವಿಶ್ವ ಶ್ರೇಷ್ಠ ಆಟಗಾರರು. ಅವರಿಗೆ ಈಗ ತಪ್ಪಿನ ಅರಿವಾಗಿದೆ. ಚೆಂಡು ವಿರೂಪ ಪ್ರಕರಣದ ನಂತರ ಸಾಕಷ್ಟು ನೊಂದಿದ್ದಾರೆ. ಈಗ ಕ್ಲಬ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಹೀಗಾಗಿ ಅವರ ಮೇಲಿನ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು’ ಎಂದು ಎಸಿಎ ಅಧ್ಯಕ್ಷ ಗ್ರೆಗ್‌ ಡೇಯರ್‌ ಆಗ್ರಹಿಸಿದ್ದಾರೆ.

ನಿರ್ಧಾರಕ್ಕೆ ಬದ್ಧ: ‘ಸ್ಮಿತ್, ವಾರ್ನರ್‌ ಮತ್ತು ಬ್ಯಾಂಕ್ರಾಫ್ಟ್‌ ಅವರ ಮೇಲೆ ವಿಧಿಸಿರುವ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸುವುದು ಸಾಧ್ಯವಿಲ್ಲ’ ಎಂದು ಸಿಎ ಮುಖ್ಯಸ್ಥ ಡೇವಿಡ್‌ ಪೀವರ್‌ ತಿಳಿಸಿದ್ದಾರೆ.

‘ಸುದೀರ್ಘ ವಿಚಾರಣೆ ಮತ್ತು ಎಲ್ಲಾ ಆಯಾಮಗಳಿಂದ‌ ತನಿಖೆ ನಡೆಸಿದ ಬಳಿಕವೇ ಮೂವರ ಮೇಲೆ ಶಿಕ್ಷೆ ವಿಧಿಸಲಾಗಿದೆ. ಚೆಂಡು ವಿರೂಪ ಪ್ರಕರಣದಿಂದ ನಾವು ಸಾಕಷ್ಟು ಮುಜುಗರ ಅನುಭವಿಸಿದ್ದೇವೆ. ಸಿಎ ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ಮಾರ್ಪಾಡು ಮಾಡುವುದಿಲ್ಲ’ ಎಂದೂ ಅವರು ನುಡಿದಿದ್ದಾರೆ.

ನವೆಂಬರ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೂರು ಟ್ವೆಂಟಿ–20, ನಾಲ್ಕು ಪಂದ್ಯಗಳ ಟೆಸ್ಟ್‌ ಮತ್ತು ಐದು ಪಂದ್ಯಗಳ ಏಕದಿನ ಸರಣಿಗಳನ್ನು ಆಡಲಿದೆ. ಸ್ಮಿತ್‌ ಮತ್ತು ವಾರ್ನರ್‌ ಮೇಲಿನ ಶಿಕ್ಷೆಯ ಪ್ರಮಾಣ ಕಡಿತಗೊಳಿಸಿದರೆ ಅವರು ಈ ಸರಣಿಗಳಲ್ಲಿ ಆಡಬಹುದು. ಅವರ ಸೇರ್ಪಡೆಯಿಂದ ತಂಡದ ಶಕ್ತಿ ಹೆಚ್ಚಲಿದೆ ಎಂಬ ಮಾತುಗಳೂ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT