ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs PAK Test: ಆಸ್ಟ್ರೇಲಿಯಾದ ಮೇಲುಗೈ

Published 27 ಡಿಸೆಂಬರ್ 2023, 14:14 IST
Last Updated 27 ಡಿಸೆಂಬರ್ 2023, 14:14 IST
ಅಕ್ಷರ ಗಾತ್ರ

ಮೆಲ್ಬರ್ನ್‌: ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್ (37ಕ್ಕೆ3) ಮತ್ತು ಆಫ್‌ ಸ್ಪಿನ್ನರ್‌ ನಥಾನ್ ಲಯನ್ (48ಕ್ಕೆ2) ಅವರು ಎರಡನೇ ಟೆಸ್ಟ್‌ನ ಎರಡನೇ ದಿನವಾದ ಬುಧವಾರ ಆಸ್ಟ್ರೇಲಿಯಾ ತಂಡಕ್ಕೆ ಮೇಲುಗೈ ದೊರಕಿಸಿಕೊಟ್ಟರು. ಆಸ್ಟ್ರೇಲಿಯಾದ 318 ರನ್‌ಗಳಿಗೆ ಉತ್ತರವಾಗಿ ದಿನದಾಟ ಮುಗಿದಾಗ ಪಾಕಿಸ್ತಾನ 6 ವಿಕೆಟ್‌ಗೆ 194 ರನ್‌ ಗಳಿಸಿ ಸಂಕಷ್ಟದಲ್ಲಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಪ್ರವಾಸಿ ತಂಡ, ಆಸ್ಟ್ರೇಲಿಯಾದ ಮೊತ್ತಕ್ಕಿಂತ ಇನ್ನೂ 124 ರನ್‌ಗಳಿಂದ ಹಿಂದೆಯಿದೆ.

ನಾಯಕ ಕಮಿನ್ಸ್‌ ಅವರು ಪಾಕಿಸ್ತಾನದ ಪ್ರಮುಖ ಆಟಗಾರರಾದ ಅಬ್ದುಲ್ಲಾ ಶಫೀಖ್ (62), ಬಾಬರ್‌ ಆಜಂ (1) ಮತ್ತು ಅಘಾ ಸಲ್ಮಾನ್‌ (5) ಅವರ ವಿಕೆಟ್‌ಗಳನ್ನು ಪಡೆದರು. ಮೊದಲ ಟೆಸ್ಟ್‌ನಲ್ಲಿ 500 ವಿಕೆಟ್‌ಗಳ ಮೈಲಿಗಲ್ಲನ್ನು ದಾಟಿದ್ದ ಲಯನ್‌ ಈ ಪಂದ್ಯದಲ್ಲಿ  ಇಮಾಮ್‌– ಉಲ್‌–ಹಖ್ (10) ಮತ್ತು ಶಾನ್‌ ಮಸೂದ್‌ (54) ವಿಕೆಟ್‌ಗಳನ್ನು ಗಳಿಸಿದರು.

ಇದರಿಂದಾಗಿ, 1995ರ ನಂತರ ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಸಲ ಟೆಸ್ಟ್‌ ಪಂದ್ಯ ಗೆಲ್ಲುವ ಪಾಕಿಸ್ತಾನದ ಆಸೆ ಕಮರಿಹೋಗುವಂತೆ ಕಾಣುತ್ತಿದೆ.

ಸೀಮ್‌ ಮತ್ತು ಸ್ವಿಂಗ್‌ಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಬೆಳಿಗ್ಗೆ 3 ವಿಕೆಟ್‌ಗೆ 187 ರನ್‌ಗಳೊಡನೆ ಆಟ ಮುಂದುವರಿಸಿದ ಆಸ್ಟ್ರೇಲಿಯಾ 318 ರನ್‌ ಗಳಿಸಿತು. ಅಮೀರ್‌ ಜಮಾಲ್ ಮೂರು ವಿಕೆಟ್‌ ಪಡೆದು ಆತಿಥೇಯರನ್ನು ನಿಯಂತ್ರಿಸಿದರು. ಮಾರ್ನಸ್‌ ಲಾಬುಷೇನ್‌ ತಂಡದ ಪರ ಅತ್ಯಧಿಕ ಎನಿಸಿದ 63 ರನ್‌ ಗಳಿಸಿದರು.

ಪಾಕ್‌ ಮೊತ್ತ 34 ಆಗುವಷ್ಟರಲ್ಲಿ ಇಮಾಮ್‌ ಉಲ್‌ ಹಕ್ ಅವರು ಲಯನ್‌ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಲಾಬುಷೇನ್‌ಗೆ ಕ್ಯಾಚಿತ್ತರು. ಆದರೆ ವಿಚಲಿತಾರಾಗದ ಪಾಕ್ ಆರಂಭ ಆಟಗಾರ ಅಬ್ದುಲ್ದಾ ಶಫೀಕ್ ಮತ್ತು ನಾಯಕ ಶಾನ್ ಮಸೂದ್ ರನ್ ವೇಗ ಹೆಚ್ಚಿಸಿದರು. ಎರಡನೇ ವಿಕೆಟ್‌ಗೆ 90 ರನ್‌ಗಳು ಬಂದವು. ಶಫೀಕ್ ಅವರಿಗೆ ಇದು ಐದನೇ ಅರ್ಧ ಶತಕ. ಆದರೆ ಈ ಜೊತೆಯಾಟ ಮುರಿದ ಕಮಿನ್ಸ್‌ ನಂತರ ತಮ್ಮ ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು. ಹೇಜಲ್‌ವುಡ್‌ ಅವರು ಸೌದ್‌ ಶಕೀಲ್ ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 96.5 ಓವರುಗಳಲ್ಲಿ 318 (ಲಾಬುಷೇನ್ 63, ಟ್ರಾವಿಸ್‌ ಹೆಡ್‌ 41; ಅಮೀರ್ ಜಮಾಲ್ 64ಕ್ಕೆ3); ಪಾಕಿಸ್ತಾನ: 55 ಓವರುಗಳಲ್ಲಿ 6 ವಿಕೆಟ್‌ಗೆ 194 (ಅಬ್ದುಲ್ಲಾ ಶಫೀಖ್ 62, ಶಾನ್‌ ಮಸೂದ್‌ 54, ಮೊಹಮ್ಮದ್ ರಿಜ್ವಾನ್ ಔಟಾಗದೇ 29; ಕಮಿನ್ಸ್‌ 37ಕ್ಕೆ3, ಲಯನ್‌ 48ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT