ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಚೇಸ್ ಮಾಸ್ಟರ್; ಧೋನಿ ಫಿನಿಷರ್!

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ 
Last Updated 15 ಜನವರಿ 2019, 17:40 IST
ಅಕ್ಷರ ಗಾತ್ರ

ಅಡಿಲೇಡ್: ಸಂಕ್ರಾಂತಿಯ ಸಡಗರಕ್ಕೆ ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಧೋನಿ ರೋಚಕ ಗೆಲುವಿನ ಹೊಳಪು ತುಂಬಿದರು. ಆಸ್ಟ್ರೇಲಿಯಾ ನೆಲದಲ್ಲಿಯೂ ತಾವು ಶತಕವೀರ ಎಂದು ಕೊಹ್ಲಿ ಬೀಗಿದರು. ತಾವಿನ್ನೂ ಫಿನಿಷರ್ ಎಂದು ಧೋನಿ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದರು.

ಮಂಗಳವಾರ ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಓವರ್‌ನವರೆಗೂ ಲಂಬಿಸಿದ ಹೋರಾಟದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಗೆದ್ದಿತು. ಪಂದ್ಯದಲ್ಲಿ ಇನ್ನೂ ನಾಲ್ಕು ಎಸೆತಗಳು ಬಾಕಿಯಿದ್ದವು. ವಿರಾಟ್ ಬಳಗವು ‌ಸರಣಿಯಲ್ಲಿ 1–1ರ ಸಮಬಲ ಸಾಧಿಸಿದೆ. ಇದೇ 18ರಂದು ಮೆಲ್ಬರ್ನ್‌ನಲ್ಲಿ ನಡೆಯಲಿರುವ ಸರಣಿಯ ಕೊನೆಯ ಪಂದ್ಯವು ಈಗ ಕುತೂಹಲದ ಕೇಂದ್ರಬಿಂದುವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಶಾನ್ ಮಾರ್ಷ್ (131; 123ಎಸೆತ, 11ಬೌಂಡರಿ, 3 ಸಿಕ್ಸರ್) ಅಬ್ಬರದ ಶತಕದ ಬಲದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 298 ರನ್‌ಗಳ ಮೊತ್ತ ಗಳಿಸಿದರು. ಭಾರತ ತಂಡವು 49.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 299 ರನ್ ಪೇರಿಸಿತು. ಆದರೆ ಈ ಹಾದಿ ಸುಲಭವಾಗಿರಲಿಲ್ಲ.

ಚೇಸ್ ಮಾಸ್ಟರ್ ವಿರಾಟ್: ಕಠಿಣ ಗುರಿ ಬೆನ್ನಟ್ಟಿದ ಪಂದ್ಯಗಳಲ್ಲಿ ಮಹತ್ವದ ಆಟವಾಡಿ ಗೆಲುವಿನ ಕಾಣಿಕೆ ನೀಡುವ ವಿರಾಟ್ ಕೊಹ್ಲಿ (104;112ಎಸೆತ, 5ಬೌಂಡರಿ, 2ಸಿಕ್ಸರ್) ಮಂಗಳವಾರ ಮತ್ತೊಮ್ಮೆ ಮಿಂಚಿದರು. ಆಸ್ಟ್ರೇಲಿಯಾ ನೆಲದಲ್ಲಿ ಆರನೇ ಶತಕ ಹೊಡೆದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 39ನೇ ಸಲ ನೂರರ ಗಡಿ ದಾಟಿದರು. ಅವರು ರೋಹಿತ್ ಶರ್ಮಾ (43; 52ಎಸೆತ, 2ಬೌಂಡರಿ, 2ಸಿಕ್ಸರ್) ಜೊತೆಗೂಡಿ ಎರಡನೇ ವಿಕೆಟ್‌ಗೆ 54 ರನ್‌ಗಳನ್ನು ಸೇರಿಸಿದರು.

ಅಂಬಟಿ ರಾಯುಡು ಜೊತೆಯಲ್ಲಿ ಮೂರನೇ ವಿಕೆಟ್‌ಗೆ 59 ರನ್‌ ಸೇರಿಸಿದರು. ಈ ಜೊತೆಯಾಟದಲ್ಲಿ ವಿಕೆಟ್ ಪತನ ತಡೆಯುವ ಪ್ರಯತ್ನದಲ್ಲಿ ರನ್‌ ಗಳಿಕೆಯ ವೇಗ ಕುಂಠಿತವಾಗಿತ್ತು. ರಾಯುಡು ಔಟಾದ ನಂತರ ಕ್ರೀಸ್‌ಗೆ ಬಂದ ಧೋನಿ ಕೂಡ ಅಬ್ಬರದ ಆಟವಾಡಲಿಲ್ಲ. ಮೊದಲ ಪಂದ್ಯದಲ್ಲಿ 96 ಎಸೆತಗಳಲ್ಲಿ 51 ರನ್‌ ಗಳಿಸಿದ್ದ ಧೋನಿ ಟೀಕೆಗಳನ್ನು ಎದುರಿಸಿದ್ದರು. ‘ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟೀಕಾಸ್ತ್ರಗಳನ್ನು ಬಿಟ್ಟಿದ್ದರು. 112 ಎಸೆತಗಳಲ್ಲಿ 104 ರನ್‌ ಗಳಿಸಿದ ಕೊಹ್ಲಿ 44ನೇ ಓವರ್‌ನಲ್ಲಿ ಔಟಾದಾಗ ಪಂದ್ಯಕ್ಕೆ ನಿಜವಾದ ತಿರುವು ಲಭಿಸಿತು. ತಂಡಕ್ಕೆ 38 ಎಸೆತಗಳಲ್ಲಿ 56 ರನ್‌ಗಳ ಅಗತ್ಯವಿತ್ತು.

ಅಲ್ಲಿಯವರೆಗೂ ಮೆಲ್ಲಗೆ ಆಡುತ್ತಿದ್ದ ಧೋನಿ ಆಟದ ವೇಗ ಹೆಚ್ಚಿಸಿಕೊಂಡರು. ದಿನೇಶ್ ಕಾರ್ತಿಕ್ ಜೊತೆಗೆ ಅವರ ನಾಗಾಲೋಟ ಆರಂಭವಾಯಿತು. ಒಂದು ಮತ್ತು ಎರಡು ರನ್‌ಗಳನ್ನು ಅವರು ಕದಿಯುತ್ತಿದ್ದವೇಗ ನೋಡಿ ಫೀಲ್ಡರ್‌ಗಳು ದಂಗಾದರು. 37ನೇ ವಯಸ್ಸಿನಲ್ಲಿ ಅವರ ಚಿರತೆಯ ಓಟ, ದಿಟ್ಟೆದೆಯ ಓಟಕ್ಕೆ ಬೌಲರ್‌ಗಳ ಮುಖದಲ್ಲಿ ಬೆವರಿಳಿಯಿತು. ಧೋನಿ ಬಾರಿಸಿದ ಎರಡು ಭರ್ಜರಿ ಸಿಕ್ಸರ್‌ಗಳು ಭಾರತವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದವು. 53ನೇ ಎಸೆತದಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಇದು ಅವರು ಈ ಸರಣಿಯಲ್ಲಿ ಗಳಿಸಿದ ಸತತ ಎರಡನೇ ಅರ್ಧಶತಕ ಮತ್ತು ಒಟ್ಟಾರೆ 69ನೇಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT