ಗುರುವಾರ , ಆಗಸ್ಟ್ 22, 2019
27 °C
ಆ್ಯಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯ: ಆತಿಥೇಯರಿಗೆ 251 ರನ್‌ಗಳ ಸೋಲುಣಿಸಿದ ಪೇನ್ ಬಳಗ

ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ‘ಲಯನ್‌’

Published:
Updated:
Prajavani

ಬರ್ಮಿಂಗ್‌ ಹ್ಯಾಂ (ಎಎಫ್‌ಪಿ): ಆಫ್ ಸ್ಪಿನ್ನರ್‌ ನೇಥನ್ ಲಯನ್ ಘರ್ಜನೆಗೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ನಡುಗಿದರು. ಆರು ವಿಕೆಟ್‌ ಕಬಳಿಸಿದ ಲಯನ್‌ ಇಲ್ಲಿ ಸೋಮವಾರ ಮುಕ್ತಾಯಗೊಂಡ ಆ್ಯಷಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಜಯ ಗಳಿಸಿಕೊಟ್ಟರು. ಉಳಿದ ನಾಲ್ಕು ವಿಕೆಟ್‌ಗಳು ಮಧ್ಯಮ ವೇಗಿ ಪ್ಯಾಟ್ ಕಮಿನ್ಸ್ ಪಾಲಾದವು. 47.2 ಓವರ್‌ಗಳಲ್ಲಿ ಎದುರಾಳಿಗಳ ಎರಡನೇ ಇನಿಂಗ್ಸ್‌ಗೆ ತೆರೆ ಎಳೆದ ಪ್ರವಾಸಿ ತಂಡ 251 ರನ್‌ಗಳ ಗೆಲುವು ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ 90 ರನ್‌ಗಳ ಹಿನ್ನಡೆ ಅನುಭವಿಸಿದರೂ ಎದೆಗುಂದದೆ ಮುನ್ನುಗ್ಗಿದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿತು. ಮ್ಯಾಥ್ಯೂ ವೇಡ್ ಮತ್ತು ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಸ್ಟೀವ್ ಸ್ಮಿತ್ ಮೋಹಕ ಆಟದ ಬಲದಿಂದ 7 ವಿಕೆಟ್‌ಗಳಿಗೆ 487 ರನ್‌ ಗಳಿಸಿದ ಆಸ್ಟ್ರೇಲಿಯಾ ನಾಲ್ಕನೇ ದಿನವಾದ ಭಾನುವಾರ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. 398 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯರು ಭಾನುವಾರದ ಮುಕ್ತಾಯಕ್ಕೆ ವಿಕೆಟ್ ಕಳೆದುಕೊಳ್ಳದೆ 13 ರನ್‌ ಗಳಿಸಿದ್ದರು.

ಆದರೆ ಸೋಮವಾರ ಆರು ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಪ್ಯಾಟ್ ಕಮಿನ್ಸ್‌ಗೆ ಬರ್ನ್ಸ್‌ ಬಲಿಯಾದರು. ಲಯನ್‌ ದಾಳಿಗೆ ಇಳಿದದ್ದೇ ತಡ, ಇಂಗ್ಲೆಂಡ್‌ನ ಆಸೆ ಸಂಪೂರ್ಣವಾಗಿ ಕಮರಿ ಹೋಯಿತು. ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಒಳಗೊಂಡಂತೆ ಅಗ್ರ ಕ್ರಮಾಂಕದ ಮೂವರನ್ನು ಲಯನ್ ವಾಪಸ್ ಕಳುಹಿಸಿದರು. ಅಪಾಯಕಾರಿ ಜೋಸ್ ಬಟ್ಲರ್ ಮತ್ತು ಜಾನಿ ಬೇಸ್ಟೊ ಅವರ ವಿಕೆಟ್‌ ಕಮಿನ್ಸ್ ಪಾಲಾದರೆ ಬೆನ್‌ ಸ್ಟೋಕ್ಸ್‌, ಲಯನ್‌ಗೆ ಬಲಿಯಾದರು. ಐದರಿಂದ ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತವನ್ನೂ ದಾಟಲಾಗದೆ ಪೆವಿಲಿಯನ್ ಸೇರಿದರು. 97 ರನ್‌ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ ಪರವಾಗಿ ಒಂಬತ್ತನೇ ಕ್ರಮಾಂಕದ ಕ್ರಿಸ್ ವೋಕ್ಸ್ ಏಕಾಂಗಿ ಹೋರಾಟ ನಡೆಸಿದರು. ವೋಕ್ಸ್ ವಿಕೆಟ್‌ ಗಳಿಸುವುದರೊಂದಿಗೆ ಪಂದ್ಯಕ್ಕೆ ಕಮಿನ್ಸ್ ಕೊನೆ ಹಾಡಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 284; ಇಂಗ್ಲೆಂಡ್‌: 374; ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ: 7ಕ್ಕೆ 487; ಇಂಗ್ಲೆಂಡ್‌: 52.3 ಓವರ್‌ಗಳಲ್ಲಿ 146 (ರೋರಿ ಬರ್ನ್ಸ್‌ 11, ಜೇಸನ್ ರಾಯ್ 28, ಜೋ ರೂಟ್ 28, ಜೋ ಡೆನ್ಲಿ 11, ಜೋಸ್ ಬಟ್ಲರ್ 1, ಬೆನ್‌ ಸ್ಟೋಕ್ಸ್‌ 6, ಜಾನಿ ಬೇಸ್ಟೊ 6, ಮೊಯಿನ್ ಅಲಿ 4, ಕ್ರಿಸ್ ವೋಕ್ಸ್‌ 37, ಜೇಮ್ಸ್ ಆ್ಯಂಡರ್ಸನ್ 4; ನೇಥನ್ ಲಯನ್‌ 49ಕ್ಕೆ6, ಪ್ಯಾಟ್ ಕಮಿನ್ಸ್‌ 32ಕ್ಕೆ4). ಫಲಿತಾಂಶ: ಆಸ್ಟ್ರೇಲಿಯಾಗೆ 251 ರನ್‌ಗಳ ಜಯ; ಸರಣಿಯಲ್ಲಿ 1–0 ಮುನ್ನಡೆ.

Post Comments (+)