ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರುದ್ಧದ ಕ್ರಿಕೆಟ್‌ ಸರಣಿ: ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಏಕದಿನ ತಂಡಕ್ಕೆ ಮರ್ಕರಂ ನಾಯಕ
Published 4 ಡಿಸೆಂಬರ್ 2023, 16:00 IST
Last Updated 4 ಡಿಸೆಂಬರ್ 2023, 16:00 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್: ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ತೆಂಬಾ ಬವುಮಾ ಅವರು ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಿಂದ ಹೊರಗೆ ಉಳಿದಿದ್ದಾರೆ. ಅನುಭವಿ ಆಟಗಾರ ಏಡನ್ ಮರ್ಕರಂ ತಂಡದ ಸಾರಥ್ಯ ವಹಿಸಲಿದ್ದಾರೆ.

ಭಾರತ ವಿರುದ್ಧದ ಮೂರು ಮಾದರಿಯ ಕ್ರಿಕೆಟ್‌ ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಡಿ.26ರಂದು ಸೆಂಚುರಿಯನ್‌ನಲ್ಲಿ ಆರಂಭವಾಗುವ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಂದ್ಯಗಳಿಗೆ ಸಿದ್ಧರಾಗುವ ಸಲುವಾಗಿ ಸೀಮಿತ ಓವರ್‌ಗಳ ಸರಣಿಗೆ ಬವುಮಾ ಮತ್ತು ವೇಗದ ಬೌಲರ್‌ ಕಗಿಸೊ ರಬಾಡ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಟೆಸ್ಟ್‌ ಸರಣಿಯಲ್ಲಿ ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ.

ವೇಗದ ಬೌಲರ್‌ಗಳಾದ ಜೆರಾಲ್ಡ್ ಕೋಝಿ, ಲುಂಗಿ ಗಿಡಿ ಮತ್ತು ಮಾರ್ಕೊ ಯಾನ್ಸನ್ ಅವರು ಟಿ20 ಸರಣಿಯ ಮೂರು ಪಂದ್ಯಗಳ ಪೈಕಿ ಮೊದಲ ಎರಡರಲ್ಲಿ ಆಡಿ, ನಂತರ ದೇಶಿಯ ನಾಲ್ಕು ದಿನಗಳ ಕ್ರಿಕೆಟ್‌ನಲ್ಲಿ ತಮ್ಮ ಫ್ರಾಂಚೈಸಿಗಳಿಗೆ ಆಡುವರು. ನಂತರ ಟೆಸ್ಟ್‌ ಸರಣಿಗೆ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಟೆಸ್ಟ್ ತಂಡದ ಕೋಚ್ ಶುಕ್ರಿ ಕಾನ್ರಾಡ್ ಅವರೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏಕದಿನ ತಂಡದ ಕೋಚ್ ರಾಬ್ ವಾಲ್ಟರ್ ತಿಳಿಸಿದ್ದಾರೆ.

‘ಭಾರತ ವಿರುದ್ಧದ ಟಿ20, ಏಕದಿನ ಸರಣಿಯೊಂದಿಗೆ ನಾವು ಮುಂದೆ ಬಿಡುವಿಲ್ಲದ ವೇಳಾಪಟ್ಟಿ ಹೊಂದಿದ್ದೇವೆ. ಆದ್ದರಿಂದ ಈ ಸರಣಿಗೆ ನಾವು ಹಲವು ಹಿರಿಯ ಆಟಗಾರರನ್ನು ಕೈಬಿಡುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ವಾಲ್ಟರ್ ಹೇಳಿದ್ದಾರೆ.

‘ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿನ್‌ನ ಹೊಸ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಎದುರು ನೋಡುತ್ತಿದ್ದೇವೆ. ಈ ಸರಣಿಯನ್ನು ನಮ್ಮ ತವರಿನಲ್ಲೇ ಪ್ರಬಲ ತಂಡದೊಂದಿಗೆ ಆರಂಭಿಸುತ್ತಿರುವುದು ಖುಷಿ ವಿಚಾರ’ ಎಂದು ಕಾನ್ರಾಡ್‌ ತಿಳಿಸಿದ್ದಾರೆ.

ಡರ್ಬನ್‌ನಲ್ಲಿ ಭಾನುವಾರ ಮೊದಲ ಟಿ20 ಪಂದ್ಯ ನಡೆಯಲಿದೆ. ಮೂರು ಪಂದ್ಯಗಳ ಈ ಸರಣಿ ಮುಕ್ತಾಯವಾದ ಬಳಿಕ ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳ ಸರಣಿ ನಡೆಯಲಿವೆ.

ಸರಣಿಗೆ ಭಾರತ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಸೀಮಿತ ಓವರ್‌ಗಳ ಪಂದ್ಯಗಳಿಗೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಏಕದಿನ ತಂಡವನ್ನು ಕನ್ನಡಿಗ ಕೆ.ಎಲ್‌. ರಾಹುಲ್‌, ಟಿ20 ತಂಡವನ್ನು ಸೂರ್ಯಕುಮಾರ್‌ ಯಾದವ್‌ ಮತ್ತು ಟೆಸ್ಟ್‌ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ತಂಡ: ಏಡನ್ ಮರ್ಕರಂ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಝಿ, ಡೊನೊವನ್ ಫೆರೀರಾ, ರೀಜಾ ಹೆನ್ರಿಕ್ಸ್, ಮಾರ್ಕೊ ಯಾನ್ಸನ್, ಹೆನ್ರಿಚ್ ಕ್ಲಾಸನ್ (ವಿಕೆಟ್‌ ಕೀಪರ್‌), ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಆ್ಯಂಡಿಲೆ ಪಿಶುವಾಯೊ, ತಬ್ರೇಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ಲಿಜಾದ್ ವಿಲಿಯಮ್ಸ್.

ಏಕದಿನ ತಂಡ:
ಏಡನ್ ಮರ್ಕರಂ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್‌ಕೆ, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸನ್ (ವಿಕೆಟ್‌ ಕೀಪರ್‌), ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆ್ಯಂಡಿಲೆ ಪಿಶುವಾಯೊ, ತಬ್ರೇಜ್ ಶಮ್ಸಿ, ರಸಿ ವ್ಯಾನ್ ಡೆರ್ ಡಸೆ, ಕೈಲ್ ವೆರಿನ್ನೆ (ವಿಕೆಟ್‌ ಕೀಪರ್‌), ಲಿಜಾದ್ ವಿಲಿಯಮ್ಸ್.

ಟೆಸ್ಟ್‌ ತಂಡ: ತೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಝಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಯಾನ್ಸನ್, ಕೇಶವ್ ಮಹಾರಾಜ್, ಏಡನ್ ಮರ್ಕರಂ, ವಿಯಾನ್ ಮುಲ್ಡರ್, ಲುಂಗಿ ಗಿಡಿ, ಕೀಗನ್ ಪೀಟರ್‌ಸನ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರಿನ್ನೆ (ವಿಕೆಟ್‌ ಕೀಪರ್‌).

ಸರಣಿಯ ವೇಳಾಪಟ್ಟಿ: ಟಿ–20 ಸರಣಿಯ ಪಂದ್ಯಗಳು ಡಿ.10 (ಡರ್ಬನ್‌), ಡಿ.12 (ಗ್ಕೆಬರ್ಹಾ), ಡಿ.14 (ಜೋಹಾನ್ಸ್‌ಬರ್ಗ್)ರಂದು ನಡೆಯಲಿವೆ. ಏಕದಿನ ಸರಣಿಯ ಪಂದ್ಯಗಳು ಡಿ.17 (ಜೋಹಾನ್ಸ್‌ಬರ್ಗ್), ಡಿ.19 (ಗ್ಕೆಬರ್ಹಾ), ಡಿ.21 (ಪರ್ಲ್) ಮತ್ತು ಟೆಸ್ಟ್ ಸರಣಿಯ ಪಂದ್ಯಗಳು ಡಿ.26ರಿಂದ 30 (ಸೆಂಚುರಿಯನ್), ಜ.3ರಿಂದ 7ರವರೆಗೆ (ಕೇಪ್‌ಟೌನ್‌) ಆಯೋಜಿಸಲಾಗಿದೆ.

ತೆಂಬಾ ಬವುಮಾ
ತೆಂಬಾ ಬವುಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT