ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ವಾರ್ಷಿಕ ಸಭೆ: ದಕ್ಷಿಣ ಆಫ್ರಿಕಾ ಪ್ರವಾಸದ ನಿರ್ಣಯ ಸಾಧ್ಯತೆ

Last Updated 3 ಡಿಸೆಂಬರ್ 2021, 10:58 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ 90ನೇ ವಾರ್ಷಿಕ ಮಹಾಸಭೆಯು ಶನಿವಾರ ನಡೆಯಲಿದೆ. ಇದೇ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ಭಾರತ ತಂಡವು ಪ್ರವಾಸ ಮಾಡುವ ಕುರಿತು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಓಮೈಕ್ರಾನ್ ವೈರಾಣುವಿನ ಪ್ರಕರಣಗಳು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚುತ್ತಿವೆ. ಆದ್ದರಿಂದ ಡಿಸೆಂಬರ್ 17ರಿಂದ ಆಯೋಜಿಸಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ ಮುಂದೂಡುವ ಸಾಧ್ಯತೆಗಳಿವೆ. ಈ ಕುರಿತು ಬಿಸಿಸಿಐ ಇನ್ನೂ ತೀರ್ಮಾನ ಕೈಗೊಳ್ಳಬೇಕಿದೆ. ಮೂರು ಟೆಸ್ಟ್, ಮೂರು ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳ ಸರಣಿಯು ನಡೆಯಲಿದೆ. ಡಿಸೆಂಬರ್ 9ರಂದು ತಂಡವು ಪ್ರಯಾಣ ಮಾಡಬೇಕಿದೆ.

ಹೋದ ಸೆಪ್ಟೆಂಬರ್‌ನಲ್ಲಿ ಭಾರತವು ಇಂಗ್ಲೆಂಡ್ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ 2–1ರಿಂದ ಮುನ್ನಡೆ ಸಾಧಿಸಿತ್ತು. ಆದರೆ, ಸರಣಿಯ ಕೊನೆಯ ಪಂದ್ಯದ ಸಂದರ್ಭದಲ್ಲಿ ಬಯೋಬಬಲ್‌ನಲ್ಲಿದ್ದ ಆಟಗಾರರಿಗೆ ಕೊರೊನಾ ಸೋಂಕು ತಗುಲಿತ್ತು. ಆದ್ದರಿಂದ ಪಂದ್ಯವನ್ನು ಮುಂದೂಡಲಾಗಿತ್ತು. ಮುಂದಿನ ವರ್ಷದ ಜುಲೈನಲ್ಲಿ ಪಂದ್ಯ ನಡೆಯಲಿದೆ.

ಕೋಲ್ಕತ್ತದಲ್ಲಿ ನಡೆಯಲಿರುವ ಸಭೆಯಲ್ಲಿ ಒಟ್ಟು 24 ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗಾಗಿ ಮೇಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸೇರ್ಪಡೆಯಾಗಲಿರುವ ಲಖನೌ ಮತ್ತು ಅಹಮದಾಬಾದ್‌ ಫ್ರ್ಯಾಂಚೈಸಿಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಅಹಮದಾಬಾದ್ ಫ್ರ್ಯಾಂಚೈಸಿ ಖರೀದಿ ಮಾಡಿರುವ ಸಿವಿಸಿ ಕ್ಯಾಪಿಟಲ್ಸ್‌ ಸಂಸ್ಥೆಯ ವಿವಾದದ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

2022ರ ಟಿ20 ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಲಿರುವ ಭಾರತ ತಂಡದ ಸಿದ್ಧತೆಗಳ ಯೋಜನೆ ಬಗ್ಗೆಯೂ ಮಾತುಕತೆ ನಡೆಯಲಿದೆ. ಅಲ್ಲದೇ ಈಚೆಗೆ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೋಲು, ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇಮಕ ಮತ್ತು ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಭಾರತದ ಪ್ರದರ್ಶನ ಕುರಿತು ವಿಮರ್ಶೆ ಕೂಡ ನಡೆಯಲಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT