ಬುಧವಾರ, ಮಾರ್ಚ್ 29, 2023
32 °C
ಭಾರತ ಕ್ರಿಕೆಟ್ ತಂಡಕ್ಕೆ ‘ಗೋಡೆ’ ಮುಖ್ಯ ಕೋಚ್

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿರುವುದು ದೊಡ್ಡ ಗೌರವ: ದ್ರಾವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವುದು ಬಹುದೊಡ್ಡ ಗೌರವ. ಇದಕ್ಕೆ ಪ್ರತಿಯಾಗಿ ಉತ್ತಮ ಕೆಲಸ ಮಾಡುವತ್ತ ಚಿತ್ತ ನೆಟ್ಟಿರುವುದಾಗಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ರಾಹುಲ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಈ ಕುರಿತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಬುಧವಾರ ಪ್ರಕಟಣೆ ನೀಡಿದೆ.

‘ಸುಲಕ್ಷಣಾ ನಾಯ್ಕ ಮತ್ತು ಆರ್‌.ಪಿ. ಸಿಂಗ್ ಅವರಿದ್ದ ಕ್ರಿಕೆಟ್ ಸಲಹಾ ಸಮಿತಿಯು ರಾಹುಲ್ ದ್ರಾವಿಡ್ ಅವರನ್ನು ಅವಿರೋಧವಾಗಿ ಮುಖ್ಯ ಕೋಚ್  ಆಗಿ ನೇಮಕ ಮಾಡಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ದ್ರಾವಿಡ್ ಕೋಚ್ ಆಗಿ ಕಾರ್ಯಾರಂಭ ಮಾಡಲಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

 ಸದ್ಯ ನಡೆಯುತ್ತಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿಯವರ ಕಾರ್ಯಾವಧಿಯು ಮುಕ್ತಾಯಗೊಳ್ಳಲಿದೆ. ಈ ಸ್ಥಾನಕ್ಕಾಗಿ ಅಭ್ಯರ್ಥಿಯ ಆಯ್ಕೆಗಾಗಿ  ಅಕ್ಟೋಬರ್‌ 26ರಂದು ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು.

ದುಬೈನಲ್ಲಿ ಹೋದ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ನಡೆಯುವ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ದ್ರಾವಿಡ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಕೋಚ್ ಹುದ್ದೆ ಸ್ವೀಕರಿಸಲು ದ್ರಾವಿಡ್ ಅವರನ್ನು ಮನವೊಲಿಸಿದ್ದರು.

ಮಂಡಳಿಯ ನಿಯಮಾವಳಿಯಂತೆ  ಆಯ್ಕೆಯನ್ನು ಸಂದರ್ಶನ ಮೂಲಕ ನಡೆಸಲು ದ್ರಾವಿಡ್ ಅವರು ಅರ್ಜಿ ಹಾಕಿದ್ದರು.

‘ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ತಂಡವು ಹಲವು ಮಹತ್ವದ ಸಾಧನೆಗಳನ್ನು ಮಾಡಿದೆ. ಇದೇ ಉತ್ತಮ ಕಾರ್ಯವನ್ನು ಮುಂದುವರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ದ್ರಾವಿಡ್ ಹೇಳಿದ್ದಾರೆ.

ದ್ರಾವಿಡ್ 164 ಟೆಸ್ಟ್, 344 ಅಂತರರಾಷ್ಟ್ರೀಯ ಏಕದಿನ ಮತ್ತು 298 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಭಾರತ ಕ್ರಿಕೆ್ಟ್ ತಂಡದ ನಾಯಕರೂ ಆಗಿದ್ದರು. ನಿವೃತ್ತಿಯ ನಂತರ ಭಾರತ ಎ, 19 ವರ್ಷದೊಳಗಿನವರ ತಂಡಗಳಿಗೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 

ಇದನ್ನೂ ಓದಿ... ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್ ನೇಮಕ: ಬಿಸಿಸಿಐ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು