ಗುರುವಾರ , ಮೇ 26, 2022
24 °C

ಬಿಸಿಸಿಐ ಕೇಂದ್ರ ಗುತ್ತಿಗೆ: ರಾಹುಲ್, ಪಂತ್‌ಗೆ ಬಡ್ತಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಶೀಘ್ರದಲ್ಲಿ ಪ್ರಕಟಿಸಲಿರುವ  ಕೇಂದ್ರಿಯ ಗುತ್ತಿಗೆಯಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಎ ಪ್ಲಸ್‌ ದರ್ಜೆಗೆ ಬಡ್ತಿ ಪಡೆಯುವ ಸಾಧ್ಯತೆ ಇದೆ.

ಇದು ಅಗ್ರದರ್ಜೆಯಾಗಿದ್ದು, ಈಗಾಗಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಇದ್ದಾರೆ.  ಆದರೆ ಎ ದರ್ಜೆಯಲ್ಲಿಉವ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರು ತಮ್ಮ ಸ್ಥಾನ ಉಳಿಸಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕು.

ಕೇಂದ್ರ ಗುತ್ತಿಗೆಯಲ್ಲಿ ಒಟ್ಟು ನಾಲ್ಕು ವಿಭಾಗಗಳಿವೆ. ಎ ಪ್ಲಸ್ (₹ 7ಕೋಟಿ), ಎ (₹ 5 ಕೋಟಿ), ಬಿ (₹ 3 ಕೋಟಿ) ಹಾಗೂ ಸಿ (₹ 1 ಕೋಟಿ) ವಿಭಾಗಗಳಲ್ಲಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಬಿಸಿಸಿಐನ ಮೂವರು ಪದಾಧಿಕಾರಿಗಳು, ಆಯ್ಕೆ ಸಮಿತಿಯ ಐವರು ಮತ್ತು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಸೇರಿ ಈ ಆಟಗಾರರನ್ನು ಆಯ್ಕೆ ಮಾಡುತ್ತಾರೆ.

ಸದ್ಯದ ಪಟ್ಟಿಯಲ್ಲಿರುವ 28  ಆಟಗಾರರೂ ತಮ್ಮ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅವರಲ್ಲಿಯೇ ಬಡ್ತಿ ಮತ್ತು ಹಿಂಬಡ್ತಿಯ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

‘ಆಟಗಾರರು ಹೋದ ಋತುವಿನಲ್ಲಿ ಮಾಡಿರುವ ಒಟ್ಟಾರೆ ಸಾಧನೆಯನ್ನು ಪರಿಗಣಿಸಿ  ಕೇಂದ್ರ ಗುತ್ತಿಗೆ ನೀಡಲಾಗುತ್ತದೆ. ಈ ಬಾರಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಕೂಡ ವರದಿ ನೀಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ವೇಗಿ ಇಶಾಂತ್ ಶರ್ಮಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗಾಯದಿಂದಾಗಿ ತಮ್ಮ ಪ್ರದರ್ಶನದಲ್ಲಿ ಇಳಿಮುಖ ಕಂಡಿದ್ದಾರೆ. ಬಿ ಗುಂಪಿನಲ್ಲಿರುವ ಅವರು ತಮ್ಮ ಸ್ಥಾನದಿಂದ ಕೆಳಗೆ ಜಾರುವ ಸಾಧ್ಯತೆ ಹೆಚ್ಚಿದೆ. ಆದರೆ ಸಿ ಗುಂಪಿನಲ್ಲಿರುವ ಬೌಲರ್ ಮೊಹಮ್ಮದ್ ಸಿರಾಜ್, ಬಿ ಗುಂಪಿನಲ್ಲಿರುವ ಶಾರ್ದೂಲ್ ಠಾಕೂರ್ ಈ ವರ್ಷ ಉತ್ತಮವಾಗಿ ಆಡಿದ್ದು, ಬಡ್ತಿ ಗಳಿಸುವ ಸಾಧ್ಯತೆಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು