ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಸ್ಬೆನ್ ಹೋಟೆಲ್‌ನಲ್ಲಿ ಸೌಕರ್ಯ ಕೊರತೆ: ಭಾರತ ತಂಡದ ಆಕ್ಷೇಪ

ಮಧ್ಯಪ್ರವೇಶಿಸಿದ ಬಿಸಿಸಿಐ; ಸಿಎ ಜೊತೆ ಮಾತುಕತೆ
Last Updated 12 ಜನವರಿ 2021, 15:50 IST
ಅಕ್ಷರ ಗಾತ್ರ

ನವದೆಹಲಿ: ಮಂಗಳವಾರ ಬ್ರಿಸ್ಬೆನ್‌ಗೆ ಬಂದಿಳಿದ ಭಾರತ ಕ್ರಿಕೆಟ್ ತಂಡದ ಆಟಗಾರರು ತಮಗೆ ವಸತಿ ಕಲ್ಪಿಸಿರುವ ಹೋಟೆಲ್‌ನಲ್ಲಿ ಸೌಕರ್ಯಗಳ ಕೊರತೆ ಇದೆ ಎಂದು ದೂರಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂಗ್ ಅಮಿನ್ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

‘ಆಟಗಾರರಿಗೆ ರೂಮ್ ಸರ್ವಿಸ್, ಸ್ವಚ್ಛತಾ ಸಿಬ್ಬಂದಿಯ ಸೇವೆಗಳನ್ನು ನೀಡಿಲ್ಲ. ಜಿಮ್ನಾಷಿಯಂ ಅತ್ಯಂತ ಕನಿಷ್ಠ ಸಲಕರಣೆಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ದರ್ಜೆಯ ಜಿಮ್ ಅಲ್ಲ. ಈಜುಕೊಳಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ನಾವು ಹೋಟೆಲ್‌ಗೆ ಪ್ರವೇಶಿಸುವ ಮುನ್ನ ಆಡಳಿತವು ಮಾಡಿದ್ದ ಯಾವ ವಾಗ್ದಾನವನ್ನೂ ಈಡೇರಿಸಿಲ್ಲ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತ ತಂಡವು ಇದೇ 15ರಿಂದ ಬ್ರಿಸ್ಟೆನ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಆಡಲಿದೆ. ಕ್ವಿನ್ಸ್‌ಲೆಂಡ್ ಪ್ರದೇಶದಲ್ಲಿ ಕೋವಿಡ್ –19 ಪ್ರಕರಣಗಳು ದಿನದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಂಡಗಳಿಗೆ ಕಡ್ಡಾಯ ಕ್ವಾರಂಟೈನ್ ಸೂಚಿಸಲಾಗಿದೆ.

’ತಂಡದ ಆಟಗಾರರು ಭೇಟಿಯಾಗಲು ಒಂದು ಟೀಮ್ ರೂಮ್‌ ಸೌಲಭ್ಯವನ್ನು ಹೋಟೆಲ್‌ನಲ್ಲಿ ಕೊಟ್ಟಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.

’ಸೌಕರ್ಯಗಳ ಕೊರತೆಯ ಕುರಿತು ವ್ಯವಸ್ಥಾಪಕರನ್ನು ಕೇಳಿದೆವು. ಆಗ ಅವರು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಇಲ್ಲಿಯ ನಿಯಮದ ಪ್ರಕಾರ ಸೌಲಭ್ಯಗಳನ್ನು ಕೊಡಲಾಗಿದೆ. ಕ್ವಾರಂಟೈನ್ ನಿಯಮಗಳಿಗೆ ಬದ್ಧರಾಗಿರುವುದಾಗಿ ಅವರು ಹೇಳಿದರು. ಈವಿಷಯವನ್ನು ಬಿಸಿಸಿಐ ಗಮನಕ್ಕೆ ತರಲಾಗಿದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT