ಐಪಿಎಲ್ ಫೈನಲ್ ಅಕ್ಟೋಬರ್ 15ಕ್ಕೆ ಮುಂದೂಡುವ ಸಾಧ್ಯತೆ

ನವದೆಹಲಿ: ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಮುಂದುವರಿಸಲು ನಿರ್ಧರಿಸಲಾಗಿದ್ದು, ಫೈನಲ್ ಪಂದ್ಯವನ್ನು ಅಕ್ಟೋಬರ್ 15ಕ್ಕೆ ಮುಂದೂಡುವ ಸಾಧ್ಯತೆಯಿದೆ. ಸೆಪ್ಟೆಂಬರ್‌ನಲ್ಲಿ ಆ ದೇಶದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿರುವ ಕಾರಣ ಡಬಲ್ ಹೆಡರ್‌ಗಳನ್ನು ಕಡಿತಗೊಳಿಸುವ ಉದ್ದೇಶ ಈ ಚಿಂತನೆಯ ಹಿಂದಿದೆ.
ಈ ಹಿಂದಿನ ವರದಿಯಂತೆ ಟೂರ್ನಿಯು ಸೆಪ್ಟೆಂಬರ್ 19ರ ಭಾನುವಾರ ಪ್ರಾರಂಭವಾಗಿ, ಫೈನಲ್ ಪಂದ್ಯವನ್ನು ಅಕ್ಟೋಬರ್ 10ಕ್ಕೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗಳು ಟಿ–20 ಟೂರ್ನಿಯನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸುವ ಸಾಧ್ಯತೆ ಇದೆ.
‘ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಟೂರ್ನಿಯನ್ನು ನಡೆಸುವ ಆಯ್ಕೆಯಿದೆ. ಹತ್ತು ಡಬಲ್ ಹೆಡರ್‌ಗಳನ್ನು (ದಿನದಲ್ಲಿ ಎರಡು ಪಂದ್ಯಗಳು) ನಡೆಸಲು ಬಿಸಿಸಿಐ ಈ ಮೊದಲು ಯೋಚಿಸಿತ್ತು. ಸೆಪ್ಟೆಂಬರ್ ತಿಂಗಳ ಮೂರು ಮತ್ತು ನಾಲ್ಕನೇ ವಾರಗಳಲ್ಲಿ 10 ಮಧ್ಯಾಹ್ನದ ಪಂದ್ಯಗಳನ್ನು ಆಯೋಜಿಸಿದರೆ ಆಟಗಾರರು ದೈಹಿಕವಾಗಿ ಬಳಲಬಹುದು‘ ಎಂದು ಬಿಸಿಸಿಐ ಮೂಲಗಳು ಹೇಳಿವೆ.
‘ಅಕ್ಟೋಬರ್ 15 ಶುಕ್ರವಾರ ಭಾರತ ಮತ್ತು ದುಬೈನಲ್ಲಿ ವಾರಾಂತ್ಯದ ಪ್ರಾರಂಭವಾಗಿದೆ. ಇದು ರಜಾದಿನ ಕೂಡ. ಹೀಗಾಗಿ ಪಂದ್ಯವನ್ನು ಆಸ್ವಾದಿಸಲು ಅಭಿಮಾನಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ಡಬಲ್ ಹೆಡರ್‌ಗಳ ಸಂಖ್ಯೆಯನ್ನು 10ರ ಬದಲು ಐದು ಅಥವಾ ಆರಕ್ಕೆ ಇಳಿಸಬಹುದು‘ ಎಂದು ಮೂಲಗಳು ತಿಳಿಸಿವೆ.
ಟೂರ್ನಿಯ ಸಿದ್ಧತೆಗಳನ್ನು ಅಂತಿಮಗೊಳಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಹಂಗಾಮಿ ಕಾರ್ಯನಿರ್ವಹಣಾಧಿಕಾರಿ ಹೇಮಂಗ್ ಅಮಿನ್, ಖಜಾಂಚಿ ಅರುಣ್ ಧುಮಾಲ್, ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಮತ್ತು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಅವರು ಸದ್ಯ ಯುಎಇಯಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.