ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಪಂದ್ಯಗಳ ಮುಂದೂಡಿಕೆ: ಬಿಸಿಸಿಐಗೆ ಅಪಾರ ಆದಾಯ ನಷ್ಟ

Last Updated 4 ಮೇ 2021, 16:18 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಪಿಎಲ್ ಮುಂದೂಡಿಕೆಯಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಎರಡು ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ.

‘ಎರಡರಿಂದ ಎರಡೂವರೆಸಾವಿರ ಕೋಟಿಯವರೆಗೂ ನಮಗೆ ನಷ್ಟವಾಗಲಿದೆ. ಪ್ರಾಯೋಜಕತ್ವ ಮತ್ತು ಅಧಿಕೃತ ಪ್ರಸಾರಕರಿಂದ ಬರಬೇಕಾದ ಆದಾಯದಲ್ಲಿ ಖೋತಾ ಆಗಲಿದೆ‘ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಾರಿಯ ಟೂರ್ನಿಯ ವೇಳಾಪಟ್ಟಿಯ ಪ್ರಕಾರ 52 ದಿನಗಳಲ್ಲಿ 60 ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದರೆ, ಈಗ 24 ದಿನಗಳಲ್ಲಿ 29 ಪಂದ್ಯಗಳು ಮಾತ್ರ ಪೂರ್ಣಗೊಂಡಿವೆ.

ಅಧಿಕೃತ ಪ್ರಸಾರಕ ಸಂಸ್ಥೆಯಾದ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯೊಂದಿಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿರುವ ಬಿಸಿಸಿಐ ₹ 16,347 ಕೋಟಿ (ವಾರ್ಷಿಕ ₹ 3269.4ಕೋಟಿ) ಪಡೆಯುತ್ತದೆ. ಆದರೆ 60 ಪಂದ್ಯಗಳಿಗೆ ಈ ಲೆಕ್ಕಾಚಾರ ಇದೆ. ಅಂದರೆ ಪ್ರತಿಯೊಂದು ಪಂದ್ಯಕ್ಕೂ ಅಂದಾಜು ₹54.5 ಕೋಟಿ ನೀಡಲಿದೆ. ಆದರೆ ಈಗ ನಡೆದಿರುವ ಪಂದ್ಯಗಳಿಗೆ ₹ 1580 ಕೋಟಿ ಲಭಿಸಲಿದೆ. ₹1690 ಕೋಟಿ ಕೈಬಿಟ್ಟು ಹೋಗಲಿದೆ.

ಟೈಟಲ್‌ ಪ್ರಾಯೋಜಕತ್ವ ಹಕ್ಕು ಪಡೆದಿರುವ ವಿವೊ ₹440 ಕೋಟಿಯನ್ನು ಪ್ರತಿ ಆವೃತ್ತಿಗೆ ನೀಡುತ್ತದೆ. ಈಗ ಈ ಮೊತ್ತದಲ್ಲಿ ಅರ್ಧದಷ್ಟು ಮಾತ್ರ ದಕ್ಕಲಿದೆ. ಸಹಪ್ರಾಯೋಜಕತ್ವ ವಹಿಸಿರುವ ಅನ್‌ಅಕಾಡೆಮಿ, ಡ್ರೀಮ್‌ ಇಲೆವನ್, ಸಿರೆಡ್, ಅಪ್‌ಸ್ಟಾಕ್ಸ್ ಮತ್ತು ಟಾಟಾ ಮೋಟರ್ಸ್‌ ಕಂಪೆನಿಗಳು ಅಂದಾಜು ₹ 120 ಕೋಟಿ ನೀಡುತ್ತವೆ. ಈಗ ಅದರಲ್ಲೂ ಅರ್ಧ ಭಾಗವಷ್ಟೇ ಲಭಿಸಬಹುದು.

‘2200 ಕೋಟಿ ರೂಪಾಯಿ ನಷ್ಟವೆನ್ನುವುದು ಅಂದಾಜು ಲೆಕ್ಕಾಚಾರವಷ್ಟೇ. ಆದರೆ ಅದಕ್ಕಿಂತಲೂ ಹೆಚ್ಚು ಮೊತ್ತದ ನಷ್ಟವನ್ನೇ ಭರಿಸಬೇಕಾಗುತ್ತದೆ. ಮಂಡಳಿಯು ಬೇರೆ ಬೇರೆ ಖರ್ಚುಗಳಿಗೆ ಹಣ ನೀಡಬೇಕಾಗುತ್ತದೆ. ಫ್ರ್ಯಾಂಚೈಸ್‌ಗಳು ತಮ್ಮ ಆಟಗಾರರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ವೇತನವನ್ನು ನೀಡುತ್ತವೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT