ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕ್ರಿಕೆಟ್ ತಂಡಕ್ಕೆ Dream11 ಪ್ರಾಯೋಜಕತ್ವ: ಬಿಸಿಸಿಐ ಘೋಷಣೆ

Published 1 ಜುಲೈ 2023, 5:32 IST
Last Updated 1 ಜುಲೈ 2023, 5:32 IST
ಅಕ್ಷರ ಗಾತ್ರ

ಮುಂಬೈ: ಆನ್‌ಲೈನ್‌ ಫ್ಯಾಂಟಸಿ ಗೇಮಿಂಗ್ ಫ್ಲಾಟ್‌ಫಾರ್ಮ್‌ 'ಡ್ರೀಮ್‌11' ಇನ್ನುಮುಂದೆ ಭಾರತ ಕ್ರಿಕೆಟ್‌ ತಂಡದ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ.

2023-25ರ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಭಾಗವಾಗಿ ಭಾರತ ತಂಡವು ವೆಸ್ಟ್‌ ಇಂಡೀಸ್‌ ವಿರುದ್ಧ ಇದೇ ತಿಂಗಳು ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಈ ಸರಣಿಯಿಂದಲೇ ಭಾರತ ತಂಡದ ಪೋಷಾಕಿನಲ್ಲಿ 'ಡ್ರೀಮ್‌11' ಕಾಣಿಸಿಕೊಳ್ಳಲಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, 'ಡ್ರೀಮ್‌11ಗೆ ಅಭಿನಂದನೆ ಹೇಳುತ್ತಾ ಮಂಡಳಿಗೆ ಸ್ವಾಗತಿಸುತ್ತೇನೆ. ಬಿಸಿಸಿಐನ ಅಧಿಕೃತ ಪ್ರಾಯೋಜಕತ್ವದಿಂದ ಪ್ರಮುಖ ಪ್ರಾಯೋಜಕತ್ವದ ವರೆಗೆ ಡ್ರೀಮ್‌11 ಬಲಿಷ್ಠವಾಗಿ ಬೆಳೆದಿದೆ. ಇದು ಭಾರತೀಯ ಕ್ರಿಕೆಟ್‌ನ ನಂಬಿಕೆ, ಮೌಲ್ಯ, ಸಾಮರ್ಥ್ಯ ಮತ್ತು ಬೆಳವಣಿಗೆಗೆ ನೇರ ಸಾಕ್ಷಿಯಾಗಿದೆ. ಈ ವರ್ಷಾಂತ್ಯದಲ್ಲಿ ಐಸಿಸಿ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿರುವ ಹೊತ್ತಿನಲ್ಲಿ ಅಭಿಮಾನಿಗಳ ಮನರಂಜನಾತ್ಮಕ ಅನುಭವವನ್ನು ಉತ್ತಮಪಡಿಸುವುದು ನಮ್ಮ ಆದ್ಯತೆಯಾಗಿದೆ. ಈ ಪ್ರಾಯೋಜಕತ್ವವು ಅದಕ್ಕೆ ಪೂರಕವಾಗಿರಲಿದೆ ಎಂಬ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಡ್ರೀಮ್‌11 ಸಂಸ್ಥಾಪಕ ಮತ್ತು ಸಿಇಒ ಆಗಿರುವ ಹರ್ಷ ಜೈನ್‌, 'ಬಿಸಿಸಿಐ ಹಾಗೂ ಟೀಂ ಇಂಡಿಯಾ ಜೊತೆಗಿನ ದೀರ್ಘಕಾಲಿಕ ಪಾಲುದಾರಿಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಡ್ರೀಮ್‌11 ಉತ್ಸುಕವಾಗಿದೆ. ಡ್ರೀಮ್‌11 ಮೂಲಕ ಭಾರತ ತಂಡದ ಕೋಟ್ಯಂತರ ಅಭಿಮಾನಿಗಳೊಂದಿಗೆ ಕ್ರಿಕೆಟ್‌ ಮೇಲಿನ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ. ರಾಷ್ಟ್ರೀಯ ತಂಡದ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿರುವುದು ಹೆಮ್ಮೆಯ ಮತ್ತು ಸುಯೋಗದ ಸಂಗತಿ. ಭಾರತ ಕ್ರೀಡಾ ವ್ಯವಸ್ಥೆಯನ್ನು ಬೆಂಬಲಿಸುವತ್ತ ಎದುರು ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಆನ್‌ಲೈನ್‌ ಕಲಿಕಾ ಆ್ಯಪ್‌ ‘ಬೈಜುಸ್‌’, 2019ರಿಂದ ಮೂರು ವರ್ಷಗಳ (2022ರ ವರೆಗೆ) ಅವಧಿಗೆ ಟೀಂ ಇಂಡಿಯಾದ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ತನ್ನ ಒಪ್ಪಂದವನ್ನು ಈವರೆಗೆ ಮುಂದುವರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT