ಉದ್ಯಾನನಗರಿಯ ಕ್ರಿಕೆಟ್ ತೊಟ್ಟಿಲು ಬಿಯುಸಿಸಿ

ಸೋಮವಾರ, ಮಾರ್ಚ್ 18, 2019
31 °C
‘ಶತಕ’ ಸಂಭ್ರಮ ಹಂಚಿಕೊಂಡ ಶಾವೀರ್ ತಾರಾಪುರೆ

ಉದ್ಯಾನನಗರಿಯ ಕ್ರಿಕೆಟ್ ತೊಟ್ಟಿಲು ಬಿಯುಸಿಸಿ

Published:
Updated:
Prajavani

ಬೆಂಗಳೂರು: ‘ಇವತ್ತು ಕ್ರಿಕೆಟ್‌ರಂಗದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅಗಾಧ ಪೈಪೋಟಿಯ ಯುಗ ಇದು. ಆದರೂ ನೂರು ವರ್ಷಗಳಿಂದ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬೆಳೆದಿರುವುದು ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ) ಹೆಗ್ಗಳಿಕೆ’– ನಿವೃತ್ತ ಅಂತರರಾಷ್ಟ್ರೀಯ ಅಂಪೈರ್ ಮತ್ತು ಬಿಯುಸಿಸಿ ಕಾರ್ಯದರ್ಶಿ ಶಾವೀರ್ ತಾರಾಪುರೆ ಅವರ ಹೆಮ್ಮೆಯ ನುಡಿಗಳು ಇವು.  ಶುಕ್ರವಾರ ಬಿಯುಸಿಸಿ ಶತಮಾನದ ಸಂಭ್ರಮ ಆಚರಿಸಲಿದೆ. 

1919ರಲ್ಲಿ ಆರಂಭವಾದ ಈ ಕ್ಲಬ್ ಕರ್ನಾಟಕ ಮತ್ತು ಭಾರತದ ಕ್ರಿಕೆಟ್‌ಗೆ ಬಹಳಷ್ಟು ಮಹತ್ವದ ಕಾಣಿಕೆ ನೀಡಿದೆ. ಹಲವು ದಿಗ್ಗಜರು ಈ ಕ್ಲಬ್‌ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕ್ಲಬ್‌ನ ಸಾಧನೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಶಾವೀರ್ ಮಾತನಾಡಿದ್ದಾರೆ.

* ಬಿಯುಸಿಸಿ ಆರಂಭ, ಬೆಳೆದು ಬಂದ ದಾರಿಯ ಕುರಿತು ಹೇಳಿ
1919ರಲ್ಲಿ ಕ್ಲಬ್ ಆರಂಭವಾಯಿತು. ಬೆಂಗಳೂರಿನಲ್ಲಿ ಕ್ರಿಕೆಟ್‌ ಆಡುವವರನ್ನು ಒಂದೆಡೆ ಸೇರಿಸಲು ಈ ಕ್ಲಬ್ ವೇದಿಕೆಯಾಯಿತು. ಬೇರೆ ಬೇರೆ ಟೂರ್ನಿಗಳಲ್ಲಿ ಆಡಲು ಆರಂಭಿಸಿತು. ನನಗೆ ಲಭ್ಯವಿರುವ ದಾಖಲೆಗಳ ಪ್ರಕಾರ ಆರ್. ಬಾಲಸುಬ್ರಹ್ಮಣ್ಯ, ಸಿ.ವಿ. ಪಾಂಡುರಂಗಿ ಅವರು  ಈ ಕ್ಲಬ್‌ನ ಸಂಸ್ಥಾಪಕರಲ್ಲಿ ಪ್ರಮುಖರಾಗಿದ್ದಾರೆ.

ಆದರೆ, ಈ ಕ್ಲಬ್‌ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರ ದೊಡ್ಡ ಪಟ್ಟಿಯೇ ಇದೆ. ಅವರಲ್ಲಿ ಶಫಿ ದಾರಾಶಾ, ತಿಮ್ಮಪ್ಪಯ್ಯ, ಎಫ್‌.ಕೆ. ಇರಾನಿ ಅವರಿದ್ದಾರೆ.

* ಕರ್ನಾಟಕ ಮತ್ತು ಭಾರತದ ಕ್ರಿಕೆಟ್‌ಗೆ ಬಿಯುಸಿಸಿಯ ಕಾಣಿಕೆ ಏನು?
ಡಿವಿಷನ್ ಲೀಗ್ ಟೂರ್ನಿಗಳಲ್ಲಿ ನಮ್ಮ ಕ್ಲಬ್‌ನ ಎ ಮತ್ತು ಬಿ ತಂಡಗಳು ಆಡುತ್ತವೆ. ಕರ್ನಾಟಕ ರಣಜಿ ಮತ್ತು ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ದಿಗ್ಗಜರು ಅನೇಕರು ಈ ಕ್ಲಬ್‌ನ  ಆಟಗಾರರು ಎನ್ನುವುದು ಹೆಮ್ಮೆಯ ವಿಷಯ. ಪಿ.ಇ. ಪಾಲಿಯಾ ಈ ಕ್ಲಬ್‌ನಿಂದ ಭಾರತ ತಂಡಕ್ಕೆ ಹೋದ ಮೊದಲ ಆಟಗಾರ. 1983ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ ಕೂಡ ಇಲ್ಲಿಯವರೇ. ಸದಾನಂದ ವಿಶ್ವನಾಥ್, ರಾಹುಲ್ ದ್ರಾವಿಡ್, ಕೆ.ಎಲ್. ರಾಹುಲ್, ಸ್ಟುವರ್ಟ್‌ ಬಿನ್ನಿ, ಈ ವರ್ಷ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ ಶರತ್ ಶ್ರೀನಿವಾಸ್ ಮತ್ತು ಲಿಯಾನ್ ಖಾನ್ ಪ್ರಮುಖರು.

* ನಿಮ್ಮ  ಹಾಗೂ ಬಿಯುಸಿಸಿ ನಂಟಿನ ಬಗ್ಗೆ ಹೇಳಿ
ನನ್ನ ತಂದೆ ಕೇಕಿ ತಾರಾಪುರ ಅವರು ಇಲ್ಲಿ ಆಟಗಾರರಾಗಿ, ಕೋಚ್ ಆಗಿ ಬಹಳಷ್ಟು ಕಾರ್ಯನಿರ್ವಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಉತ್ತಮ ಆಟಗಾರರು ಹೊರಹೊಮ್ಮಿದ್ದಾರೆ. ನಾನು 1972–73 ಈ ಕ್ಲಬ್‌ನ ಬಿ ತಂಡವನ್ನು ಸೇರಿಕೊಂಡೆ. ನಾಲ್ಕನೇ ಡಿವಿಷನ್‌ನಲ್ಲಿ ಆಡುತ್ತಿದ್ದೆ. ನಂತರ  ಪ್ರಥಮ ಲೆವಲ್‌ಗೆ ಪ್ರಮೋಟ್ ಆದೆ.  ಆ ಸಂಯದಲ್ಲಿ ಇಮ್ತಿಯಾಜ್, ರೋಜರ್ ಅವ ರೊಂದಿಗೆ ಆಡಿದ್ದೆ.  ನಂತರ ಅಂಪೈರಿಂಗ್ ವೃತ್ತಿ ಆಯ್ಕೆ ಮಾಡಿಕೊಂಡು ಮುಂದುವರಿದೆ. ಹಲವಾರು ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಪ್ರಮುಖ ದಾಖಲೆ ಬರೆದ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ ಹೆಮ್ಮೆ ನನ್ನದು. ಅಂತಹ ಸಾಧನೆ ಮಾಡಲು ಈ ಕ್ಲಬ್‌ ಕಲಿಸಿದ ಶಿಸ್ತಿನ ಪಾಠವೇ ಕಾರಣ.

* ಇವತ್ತಿನ ಪೈಪೋಟಿಯ ಯುಗದ ಕ್ರಿಕೆಟ್‌ನಲ್ಲಿ ಕ್ಲಬ್‌ಗಳ ಪಾತ್ರವೇನು?
ಹಿಂದೆಂದಿಗಿಂತಲೂ ಇಂದು ಕ್ಲಬ್‌ ಗಳ ಪಾತ್ರ ಮಹತ್ವದ್ದಾಗಿದೆ. ಬಾಲ್ಯದ ಪ್ರತಿಭೆಗಳಿಗೆ ಕ್ರಿಕೆಟ್‌ನ ಮೂಲಪಾಠ ಸಿಗುವುದೇ ಕ್ಲಬ್‌ಗಳಲ್ಲಿ ಆದರೆ, ಇವತ್ತು ಕ್ಲಬ್‌ಗಳ ನಿರ್ವಹಣೆ ಕಷ್ಟವಾಗುತ್ತಿದೆ. ಬಹಳಷ್ಟು ಆಟಗಾರರು ಒಂದೇ ಕ್ಲಬ್‌ನಲ್ಲಿ ದೀರ್ಘ ಕಾಲ ದವರೆಗೆ ಆಡುವುದಿಲ್ಲ. ಬೇರೆ ಬೇರೆ ಕ್ಲಬ್‌ಗಳಿಗೆ ಹೋಗಿ ಸೇರುತ್ತಾರೆ. ಆದರೂ ಕ್ಲಬ್‌ಗಳೂ ಇವತ್ತಿಗೂ ಒಳ್ಳೆಯ ಕೋಚಿಂಗ್ ನೀಡುತ್ತಿವೆ. ಬೆಂಗಳೂರಿನಲ್ಲಿ ಹಲವಾರು ಕ್ಲಬ್‌ಗಳ ನಡುವೆಯೂ ನಮ್ಮ ಬಿಯುಸಿಸಿ ತನ್ನ  ಶ್ರೇಷ್ಠತೆ ಯನ್ನು ಉಳಿಸಿಕೊಂಡಿದೆ.  ಇದೇ ಪರಂಪರೆ ಮುಂದುವರಿಯುವುದು ಖಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !