ಬುಧವಾರ, ಜನವರಿ 27, 2021
28 °C
ಎಡಗೈ ಮಧ್ಯಮ ವೇಗಿ ಖಲೀಲ್ ಅಹಮ್ಮದ್ ಪ್ರಬಲ ದಾಳಿ; ಕೇನ್‌ ವಿಲಿಯಮ್ಸನ್ ಬಳಗಕ್ಕೆ ಸುಲಭ ಗೆಲುವು

ವಾರ್ನರ್‌–ಬೇಸ್ಟೊ ‘ಶತಕ’; ಸನ್‌ಗೆ ಜಯದ ಪುಳಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಮತ್ತೊಮ್ಮೆ ಶತಕದ ಜೊತೆಯಾಟವಾಡಿದ ಡೇವಿಡ್ ವಾರ್ನರ್ (67; 38 ಎಸೆತ, 5 ಸಿಕ್ಸರ್‌, 3 ಬೌಂಡರಿ) ಮತ್ತು ಜಾನಿ ಬೇಸ್ಟೊ (ಅಜೇಯ 80; 43 ಎಸೆತ, 4 ಸಿಕ್ಸರ್‌, 7 ಬೌಂಡರಿ) ಜೋಡಿ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಸುಲಭ ಜಯ ತಂದುಕೊಟ್ಟಿತು.

ಇಲ್ಲಿನ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ತಂಡ ನೀಡಿದ 160 ರನ್‌ಗಳ ಜಯದ ಗುರಿಯನ್ನು ದಾಟಲು ಸನ್‌ರೈಸರ್ಸ್‌ ತೆಗೆದುಕೊಂಡದ್ದು 15 ಓವರ್ ಮಾತ್ರ.

ಮೊದಲ ವಿಕೆಟ್‌ಗೆ ವಾರ್ನರ್ ಮತ್ತು ಬೇಸ್ಟೊ 12.2 ಓವರ್‌ಗಳಲ್ಲಿ 131 ರನ್‌ ಸೇರಿಸಿದರು. ವಾರ್ನರ್ ಔಟಾದರೂ ಬೇಸ್ಟೊ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಅವರಿಗೆ ನಾಯಕ ಕೇನ್ ವಿಲಿಯಮ್ಸನ್‌ ‘ತಾಳ್ಮೆ’ಯ ಸಹಕಾರ ನೀಡಿದರು.

ಕ್ರಿಸ್ ಲಿನ್‌ ಮಿಂಚು; ರಸೆಲ್‌ಗೆ ನಿರಾಸೆ: ಯುವ ಎಡಗೈ ಮಧ್ಯಮ ವೇಗಿ ಖಲೀಲ್ ಅಹಮ್ಮದ್ ಅವರ ಪ್ರಬಲ ದಾಳಿಗೆ ಪರದಾಡಿದ ಕೋಲ್ಕತ್ತ ನೈಟ್ ರೈಡರ್ಸ್‌ ಸಾಧಾರಣ ಮೊತ್ತಕ್ಕೆ ಕುಸಿಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್ ಲಿನ್‌ (51; 47 ಎಸೆತ, 1 ಸಿಕ್ಸರ್‌, 4 ಬೌಂಡರಿ) ಏಕಾಂಗಿ ಹೋರಾಟ ಮಾಡಿ ಅರ್ಧಶತಕದ ಕಾಣಿಕೆ ನೀಡಿದರು.

ಸುನಿಲ್‌ ನಾರಾಯಣ್ ಮತ್ತು ಕ್ರಿಸ್ ಲಿನ್‌ ಮೊದಲ ವಿಕೆಟ್‌ಗೆ 16 ಎಸೆತಗಳಲ್ಲಿ 42 ರನ್‌ ಸೇರಿಸಿದರು. ಈ ಸಂದರ್ಭದಲ್ಲಿ ದಾಳಿಗೆ ಇಳಿದ 21 ವರ್ಷದ ಖಲೀಲ್ ಮೂರು ವಿಕೆಟ್ ಉರುಳಿಸಿದರು. ಎಂಟು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿಗಳೊಂದಿಗೆ 25 ರನ್‌ ಗಳಿಸಿದ ಸುನಿಲ್ ನಾರಾಯಣ್‌ ಅವರು ಖಲೀಲ್‌ಗೆ ಮೊದಲ ಬಲಿಯಾದರು.

ಶುಭಮನ್ ಗಿಲ್‌, ನಿತೀಶ್‌ ರಾಣಾ ಮತ್ತು ನಾಯಕ ದಿನೇಶ್ ಕಾರ್ತಿಕ್ ಬೇಗನೇ ಡಗ್‌ಔಟ್ ಸೇರಿದರು. 73 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಕ್ರಿಸ್ ಲಿನ್ ಜೊತೆಗೂಡಿದ ರಿಂಕು ಸಿಂಗ್‌ 51 ರನ್‌ಗಳ ಜೊತೆಯಾಟ ಆಡಿ ತಂಡವನ್ನು ಮೂರಂಕಿ ಗಡಿ ದಾಟಿಸಿದರು. ಎರಡು ಸಿಕ್ಸರ್‌ ಮತ್ತು ಒಂದು ಬೌಂಡರಿ ಗಳಿಸಿದ ರಿಂಕು 25 ಎಸೆತಗಳಲ್ಲಿ 30 ರನ್ ಗಳಿಸಿದರು.

ಒಂಬತ್ತು ರನ್‌ಗಳ ಅಂತರದಲ್ಲಿ ರಿಂಕು ಮತ್ತು ಕ್ರಿಸ್ ಲಿನ್ ಔಟಾದರು. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಆ್ಯಂಡ್ರೆ ರಸೆಲ್ ಕ್ರೀಸ್‌ಗೆ ಬರುತ್ತಿದ್ದಂತೆ ಗ್ಯಾಲರಿಗಳಲ್ಲಿ ಸಂಚಲನವಾಯಿತು. ಆದರೆ 15 ರನ್‌ ಗಳಿಸುವಷ್ಟರಲ್ಲಿ ಅವರನ್ನು ಭುವನೇಶ್ವರ್ ಕುಮಾರ್‌ ಔಟ್ ಮಾಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು