ಬುಧವಾರ, ಆಗಸ್ಟ್ 4, 2021
24 °C
ಇಂಗ್ಲೆಂಡ್‌ ತಂಡದ ಬೌಲರ್‌ ಹೇಳಿಕೆ

ತಂಡದಿಂದ ಕೈಬಿಟ್ಟಾಗ ಕೋಪಗೊಂಡಿದ್ದೆ: ಸ್ಟುವರ್ಟ್‌ ಬ್ರಾಡ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್‌: ‘ಆಡುವ ಹನ್ನೊಂದರ ಬಳಗದಿಂದ ಏಕಾಏಕಿ ಹೊರಗಿಟ್ಟಿದ್ದರಿಂದ ತುಂಬಾ ಸಿಟ್ಟು ಬಂದಿತ್ತು. ಜೊತೆಗೆ ಬೇಸರವೂ ಆಗಿತ್ತು’ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಶುಕ್ರವಾರ ತಿಳಿಸಿದ್ದಾರೆ.

ಬುಧವಾರದಿಂದ ಆರಂಭವಾಗಿರುವ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಜೇಮ್ಸ್‌ ಆ್ಯಂಡರ್ಸನ್‌, ಮಾರ್ಕ್‌ ವುಡ್‌ ಹಾಗೂ ಜೋಫ್ರಾ ಆರ್ಚರ್‌ ಅವರಿಗೆ ಅವಕಾಶ ನೀಡಲು ನಿರ್ಧರಿಸಿದ್ದ ತಂಡದ ಆಡಳಿತ ಮಂಡಳಿಯು ಬ್ರಾಡ್‌ ಅವರನ್ನು ಅಂತಿಮ ಹನ್ನೊಂದರ ಬಳಗದಿಂದ ಕೈಬಿಟ್ಟಿತ್ತು.

ಟೆಸ್ಟ್‌ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್‌ (485) ಪಡೆದ ಇಂಗ್ಲೆಂಡ್‌ನ‌ ಎರಡನೇ ಬೌಲರ್‌ ಎಂಬ ಹಿರಿಮೆ ಹೊಂದಿರುವ ಬ್ರಾಡ್‌ ಹೋದ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಆ್ಯಷಸ್‌ ಹಾಗೂ ಈ ವರ್ಷದ ಆರಂಭದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಗಳಲ್ಲಿ ಮಿಂಚಿದ್ದರು.

‘ಪಂದ್ಯ ಆರಂಭಕ್ಕೆ ಕೆಲವು ಗಂಟೆಗಳು ಬಾಕಿ ಇದ್ದಾಗ ಹಂಗಾಮಿ ನಾಯಕ ಬೆನ್‌ ಸ್ಟೋಕ್ಸ್‌ ಅವರು ತಂಡದಿಂದ ಹೊರಗಿಟ್ಟಿರುವ ವಿಷಯವನ್ನು ನನ್ನ ಗಮನಕ್ಕೆ ತಂದರು. ಆಗ ಏನು ಹೇಳಬೇಕೆಂದೇ ತಿಳಿಯಲಿಲ್ಲ’ ಎಂದಿದ್ದಾರೆ.

‘ನನ್ನ ಭವಿಷ್ಯದ ಬಗ್ಗೆ ಚಿಂತೆ ಕಾಡಿತ್ತು. ಹೀಗಾಗಿ ಗುರುವಾರ ರಾತ್ರಿ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಡ್‌ ಸ್ಮಿತ್‌ ಅವರ ಜೊತೆ ಮಾತನಾಡಿದೆ. ಸೌತಾಂಪ್ಟನ್‌ ಪಿಚ್‌ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆಮಾಡಲಾಗಿದೆ. ಉದ್ದೇಶಪೂರ್ವಕವಾಗಿ ನಿಮ್ಮನ್ನು ತಂಡದಿಂದ ಹೊರಗಿಟ್ಟಿಲ್ಲ. ಈ ಬಗ್ಗೆ ಹೆಚ್ಚು ಚಿಂತಿಸಬೇಡಿ ಎಂದು ಅವರು ಧೈರ್ಯ ತುಂಬಿದರು’ ಎಂದು 34 ವರ್ಷ ವಯಸ್ಸಿನ ಬ್ರಾಡ್‌ ಹೇಳಿದ್ದಾರೆ.

‘ಇದೇ ಮೊದಲ ಬಾರಿ ತಂಡದ ಎಲ್ಲಾ ವೇಗದ ಬೌಲರ್‌ಗಳು ಆಡಲು ಫಿಟ್‌ ಆಗಿದ್ದರು. ಹೀಗಾಗಿ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಆಡುವ ಬಳಗದಲ್ಲಿ ಅವಕಾಶ ಪಡೆಯಲು ನಾನು ಅರ್ಹನಿದ್ದೆ. ಸ್ಯಾಮ್‌ ಕರನ್‌ ಮತ್ತು ಕ್ರಿಸ್‌ ವೋಕ್ಸ್‌ ಅವರೂ ಉತ್ತಮ ಲಯದಲ್ಲಿದ್ದರು. ಅವರಿಗೂ ಸ್ಥಾನ ಸಿಗಬೇಕಿತ್ತು’ ಎಂದು ಅವರು ನುಡಿದಿದ್ದಾರೆ.

‘ನನ್ನ ಸಾಮರ್ಥ್ಯ ಏನೆಂಬುದು ಎಲ್ಲರಿಗೂ ಗೊತ್ತಿದೆ. ಆಯ್ಕೆ ಸಮಿತಿಯವರಿಗೂ ಇದರ ಅರಿವಿದೆ. ನಾನು ಮತ್ತೆ ತಂಡದಲ್ಲಿ ಅವಕಾಶ ಪಡೆಯುತ್ತೇನೆ. ಪರಿಣಾಮಕಾರಿಯಾಗಿ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು