ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ನಮ್ಮ ಮೇಲೆ ಯಾವ ಒತ್ತಡವೂ ಇಲ್ಲ: ಭುವನೇಶ್ವರ್

ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯ ಕುರಿತು ಭುವನೇಶ್ವರ್ ಕುಮಾರ್ ಪ್ರತಿಕ್ರಿಯೆ
Last Updated 28 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಗಾಯಗೊಂಡಿರುವುದರಿಂದ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ. ಅದರಿಂದಾಗಿ ನಾವು ಹೆಚ್ಚುವರಿ ಅವಧಿ ಕಾರ್ಯನಿರ್ವಹಿಸಬೇಕಾದ ಒತ್ತಡವೇನಿಲ್ಲ ಎಂದು ಭಾರತ ತಂಡದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ನಡೆದ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಜಯಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೂಮ್ರಾ ಅವರು ಅಲಭ್ಯರಾಗಿರುವುದರಿಂದ ತಂಡಕ್ಕೆ ನಷ್ಟವಾಗಿದೆ ಅವರು ತಂಡದಲ್ಲಿದ್ದರೆ ನಮ್ಮ ಬೌಲಿಂಗ್ ವಿಭಾಗದ ಶಕ್ತಿ ಹೆಚ್ಚಿರುತ್ತದೆ. ಅದರಿಂದಾಗಿ ನಮ್ಮ ಹೊರೆಯೂ ಕಡಿಮೆಯಿರುತ್ತದೆ. ಅವರು ತಂಡದಲ್ಲಿ ಇಲ್ಲದಿದ್ದರೂ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮವಾಗಿ ಆಡುತ್ತಿದ್ದೇವೆ’ ಎಂದು ಹೇಳಿದರು.

ಏಷ್ಯಾ ಕಪ್ ಟೂರ್ನಿಯ ಪಂದ್ಯಗಳ ಡೆತ್‌ ಓವರ್‌ಗಳಲ್ಲಿ ತಮ್ಮ ವೈಫಲ್ಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇಷ್ಟು ವರ್ಷಗಳಲ್ಲಿ ಇದೊಂದು ಬಾರಿ ಈ ರೀತಿಯಾಗಿದೆ. ಆಯಿತು, ಹೋಯಿತು. ಅದರ ಬಗ್ಗೆ ಚಿಂತಿಸುತ್ತಿರಲು ಇದು ಸಮಯವಲ್ಲ. ಟೀಕಾಕಾರರು ಹಾಗೂ ಮಾಧ್ಯಮಗಳು ಡೆತ್‌ ಓವರ್‌ಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹೇಳುತ್ತವೆ. ಆದರೆ, ತಂಡದಲ್ಲಿರುವವರಿಗೆ ಆ ಹೊತ್ತಿನ ಏರಿಳಿತಗಳ ಅರಿವು ಚೆನ್ನಾಗಿರುತ್ತದೆ’ ಎಂದರು.

‘ವಿಶ್ವಕಪ್ ಮುಗಿಯುವವರಿಗೂ ನಾನು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುತ್ತೇನೆ. ಆದ್ದರಿಂದ ಮಾಧ್ಯಮಗಳಲ್ಲಿ ಏನು ಸುದ್ದಿಗಳು ಹರಿದಾಡುತ್ತಿವೆ ಎಂಬ ಅರಿವು ನನಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೆಲ್ಬರ್ನ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ನನ್ನ ಎಸೆತಗಳು ನಿರೀಕ್ಷೆಗೂ ಮೀರಿ ಉತ್ತಮವಾಗಿ ಸ್ವಿಂಗ್ ಆದವು. ಆರ್ಷದೀಪ್ ಸಿಂಗ್ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದರು. ಅವರೂ ಅವತ್ತು ಎರಡು ವಿಕೆಟ್ ಗಳಿಸಿದರು. ಆರ್ಷದೀಪ್ ತಮ್ಮ ಪದಾರ್ಪಣೆಯ ಪಂದ್ಯದಿಂದಲೂ ಅಮೋಘವಾಗಿ ಆಡುತ್ತಿದ್ದಾರೆ. ಮೊದಲ ವಿಶ್ವಕಪ್ ಟೂರ್ನಿ ಅಡುತ್ತಿರುವ ಅವರು ವಿರಾಟ್, ರೋಹಿತ್ ಹಾಗೂ ನನ್ನಿಂದ ಸಲಹೆ ಪಡೆದು ತಮ್ಮ ಕೌಶಲ ಉತ್ತಮಗೊಳಿಸಿಕೊಳ್ಳುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಭಾರತ ತಂಡವು ಸೂಪರ್ 12 ಹಂತದ 2ನೇ ಗುಂಪಿನ ಮೂರನೇ ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT