ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ವಾರ್ಷಿಕ ಲೆಕ್ಕಪರಿಶೋಧನೆ: 2016ರ ಆದೇಶ ಪರಿಷ್ಕರಣೆಗೆ ಸಿಎಜಿ ಮನವಿ

Last Updated 9 ಜುಲೈ 2020, 6:52 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಲೆಕ್ಕಪರಿಶೋಧನೆಗೆ 2016ರಲ್ಲಿ ನೀಡಿರುವ ಆದೇಶವನ್ನು ಪರಿಷ್ಕರಿಸುವಂತೆ ಕೋರಿ ನಿಯಂತ್ರಣ ಮತ್ತು ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ಸುಪ್ರೀಂ ಕೋರ್ಟ್‌ ಮೇಟ್ಟಿಲೇರಿದ್ದಾರೆ.

’ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಲೆಕ್ಕಪತ್ರಗಳ ವಿಷಯದಲ್ಲಿ ಮಾತ್ರ ಸಿಎಜೆ ಹಸ್ತಕ್ಷೇಪ ಇದೆ. ವಾರ್ಷಿಕ , ದ್ವೈವಾರ್ಷಿಕ ಅಥವಾ ನ್ಯಾಯಾಲಯವು ಸೂಚಿಸುವ ರೀತಿಯಲ್ಲಿ ಲೆಕ್ಕಪರಿಶೋಧನೆ ಮಾಡಲು ಅನುಮತಿ ನೀಡಬೇಕು‘ ಎಂದು ಮನವಿ ಮಾಡಿದ್ದಾರೆ.

ಬಿಸಿಸಿಐನಲ್ಲಿ ಆಡಳಿತ ಸುಧಾರಣೆಯ ಶಿಫಾರಸುಗಳನ್ನು ರಚಿಸಲು ನೇಮಕವಾಗಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿ ವರದಿಯಲ್ಲಿ ಸಿಎಜೆ ಪಾತ್ರದ ಕುರಿತ ಅಂಶಗಳನ್ನು ನ್ಯಾಯಾಲಯವು ಒಪ್ಪಿ ಜಾರಿಗೆ ಆದೇಶ ನೀಡಿತ್ತು. ಆ ಪ್ರಕಾರ ಬಿಸಿಸಿಐನ ಅಪೆಕ್ಸ್‌ ಕೌನ್ಸಿಲ್ ಮತ್ತು ಐಪಿಎಲ್ ಆಡಳಿತ ಸಮಿತಿಯಲ್ಲಿ ಸಿಎಜೆಯ ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಲಾಗಿದೆ.

ಆದರೆ 35 ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪೈಕಿ 18 ಸಂಸ್ಥೆಗಳು ಮಾತ್ರ ಸಿಎಜಿ ಪ್ರತಿನಿಧಿಗಳ ನಾಮನಿರ್ದೇಶನಕ್ಕೆ ಮನವಿ ಸಲ್ಲಿಸಿವೆ. ಇನ್ನೂ 17 ಸಂಸ್ಥೆಗಳು ಮುಂದೆ ಬಂದಿಲ್ಲ.

2019ರ ಡಿಸೆಂಬರ್ 4 ರಿಂದ ಇಲ್ಲಿಯವರೆಗೆ ಎರಡು ಅಪೆಕ್ಸ್‌ ಕೌನ್ಸಿಲ್ ಸಭೆ ಮತ್ತ ಮೂರು ಐಪಿಎಲ್ ಆಡಳಿತ ಸಮಿತಿ ಸಭೆಗಳಲ್ಲಿ ತಮ್ಮ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಸಿಎಜಿ ಹೇಳಿಕೊಂಡಿದೆ.

’ಲೋಧಾ ಸಮಿತಿಯ ಶಿಫಾರಸುಗಳ ಪರಿಣಾಮಕಾರಿ ಜಾರಿಗಾಗಿ ಆಡಿಟ್ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶದಲ್ಲಿ ಪರಿಷ್ಕರಣೆ ಅಗತ್ಯವಾಗಿದೆ. ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಲೆಕ್ಕಪರಿಶೋಧನೆಯ ವೆಚ್ಚಗಳನ್ನು ಮಂಡಳಿಯೇ ಸರ್ಕಾರಕ್ಕೆ ಪಾವತಿಸಬೇಕು. ಆದರೆ, ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತಹ ಸಾರ್ವಜನಿಕ ಸಂಸ್ಥೆಗಳ ಲೆಕ್ಕಪರಿಶೋಧನೆಯನ್ನು ಸಿಎಜಿ ವಹಿಸಿಕೊಳ್ಳುತ್ತದೆ‘ ಎಂದು ತಿಳಿಸಿದೆ.

2015ರಲ್ಲಿ ಲೋಧಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ನೇಮಕ ಮಾಡಿತ್ತು. ಆಡಳಿತ ಸುಧಾರಣೆಗೆ ಕೆಲವು ಪ್ರಮುಖ ಶಿಫಾರಸುಗಳನ್ನು ಸಮಿತಿ ಮಾಡಿತ್ತು. ಅದರ ಆಧಾರದಲ್ಲಿ ಬಿಸಿಸಿಐಗೆ ನೂತನ ನಿಯಮಾವಳಿಯನ್ನೂ ರಚಿಸಿ, ಜಾರಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT