ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕ ಸಾಧನೆಗೆ ಆಸೆಪಡದ ಆರಂಭಿಕ ಚೇತನ್ ಚೌಹಾಣ್

Last Updated 17 ಆಗಸ್ಟ್ 2020, 4:47 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್‌ನಲ್ಲಿ ಯಾವುದೇ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗೆ ಶತಕ ಹೊಡೆಯುವ ಅವಕಾಶ ಹೆಚ್ಚಿರುತ್ತದೆ. ಆದರೆ, ಭಾರತದ ಟೆಸ್ಟ್‌ ಆಟಗಾರ ಚೇತನ್ ಚೌಹಾಣ್ ಈ ಮಾತಿಗೆ ಅಪವಾದ.

ಸುನಿಲ್ ಗಾವಸ್ಕರ್ ಜೊತೆಗೆ ಹತ್ತಾರು ಸ್ಮರಣೀಯ ಜೊತೆಯಾಟಗಳನ್ನು ಆಡಿರುವ ಚೇತನ್ ಅವರ ಹೆಸರಿನಲ್ಲಿ ಒಂದೂ ಶತಕ ದಾಖಲಾಗಿಲ್ಲ. ಒಂದೂ ಶತಕ ಬಾರಿಸದೇ ಎರಡು ಸಾವಿರ ರನ್‌ ಕಲೆಹಾಕಿದ ಮೊದಲ ಬ್ಯಾಟ್ಸ್‌ಮನ್ ಎಂಬ ‘ಹೆಗ್ಗಳಿಕೆ’ಯೂ ಅವರದ್ದು.

40 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದ ಚೇತನ್ ಚೌಹಾಣ್ ಅವರು 80 ಮತ್ತು 97 ರನ್‌ಗಳ ನಡುವಿನ ಸ್ಕೋರ್‌ಗಳನ್ನು ಒಂಬತ್ತು ಬಾರಿ ಗಳಿಸಿದ್ದಾರೆ.

ಹಿಂದೊಮ್ಮೆ ಈ ಕುರಿತು ಕೇಳಿದ್ದ ಪ್ರಶ್ನೆಗೆ ಅವರು, ‘ಬಹುಶಃ ಆ ರೀತಿಯಾಗಿರುವುದು ಅದೃಷ್ಟದ ಆಟವಾಗಿತ್ತು. ನಾನು ಶತಕ ಗಳಿಸದಿರುವುದಕ್ಕೆ ನನಗಿಂತಲೂ ಹೆಚ್ಚಾಗಿ ಜನರು ಚಿಂತೆ ಯೋಚಿಸುತ್ತಾರೆ. ಆ ಬಗ್ಗೆ ನನಗೆ ಯಾವುದೇ ರೀತಿಯ ಬೇಸರವಿಲ್ಲ. ಭಾರತ ತಂಡಕ್ಕಾಗಿ 40 ಟೆಸ್ಟ್ ಆಡಿದ್ದೇನೆ. ಸುನಿಲ್ ಗಾವಸ್ಕರ್‌ಗೆ ಆರಂಭಿಕ ಜೊತೆಗಾರನಾಗಿದ್ದೆ ಎನ್ನುವುದೇ ಹೆಮ್ಮೆ’ ಎಂದಿದ್ದರು.

ಟಿವಿ, ನೇರಪ್ರಸಾರಗಳಿಲ್ಲದ ಕಾಲದಲ್ಲಿಯೂ ಚೇತನ್ ಆಟವು ಜನಪ್ರಿಯವಾಗಿತ್ತು. ಆ ಕಾಲದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಮೊದಲ ಸಲ ಹೆಲ್ಮೆಟ್‌ ಧರಿಸಿ ಆಡಿದ ಭಾರತೀಯ ಆಟಗಾರರಲ್ಲಿ ಅವರೂ ಒಬ್ಬರು.

1877 ರಿಂದ 1981ರ ಅವಧಿಯಲ್ಲಿ ಅವರ ಬ್ಯಾಕ್‌ಫುಟ್‌ ಪಾದಚಲನೆ ಮತ್ತು ಹೊಡೆತಗಳು ಜನಜನಿತವಾಗಿದ್ದವು. ಇಂಗ್ಲೆಂಡ್‌ನ ಬಾಬ್ ವಿಲ್ಲಿಸ್, ಮೈಕ್ ಹೆನ್ರಿಕ್ಸ್‌ ಮತ್ತು ಇಯಾನ್ ಬಾಥಮ್ ಅವರನ್ನು ಅವರ ನೆಲದಲ್ಲಿಯೇ ದಿಟ್ಟತನದಿಂದ ಎದುರಿಸುತ್ತಿದ್ದರು. 1979ರಲ್ಲಿ ಆಸ್ಟ್ರೇಲಿಯಾದ ಬೌನ್ಸಿ ಪಿಚ್‌ಗಳಲ್ಲಿ ಡೆನಿಸ್ ಲಿಲ್ಲಿ, ಲೆನ್ ಪಾಸ್ಕೊ ಮತ್ತು ರಾಡ್ನಿ ಹಾಗ್ ಅವರ ಎಸೆತಗಳನ್ನು ದಂಡಿಸುತ್ತಿದ್ದ ರೀತಿ ಅನನ್ಯವಾಗಿತ್ತು.

‘ನಾನು ಎರಡು ಸಾವಿರ ರನ್‌ ಹೊಡೆಯಲು ಎಷ್ಟು ಕಷ್ಟಪಟ್ಟಿದ್ದೇನೆಂದು ನನಗೇ ಗೊತ್ತು. ಅಂತಹದ್ದರಲ್ಲಿ ಸನ್ನಿ (ಗಾವಸ್ಕರ್) ಹತ್ತು ಸಾವಿರ ರನ್‌ ಗಳಿಸಿದ್ದಾರೆಂದರೆ ಸಣ್ಣ ಮಾತೇ. ಅವರು ಬಹಳ ದೊಡ್ಡ ಆಟಗಾರ. ಈಗಿನ ಪೀಳಿಗೆಯ ಹುಡುಗರಿಗೆ ಅದು ಅರ್ಥವಾಗುವುದಿಲ್ಲ’ ಎನ್ನುತ್ತಿದ್ದರು ಚೇತನ್.

ಆಟದಿಂದ ನಿವೃತ್ತರಾದ ನಂತರ ದೆಹಲಿ ಡಿಸ್ಟ್ರಿಕ್ಟ್ಸ್‌ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಂತರ ರಾಜಕೀಯಕ್ಕೆ ಧುಮುಕಿದ ಅವರು ಭಾರತೀಯ ಜನತಾ ಪಕ್ಷದಿಂದ ಸಂಸದರಾಗಿದ್ದರು. ಸದ್ಯ ಉತ್ತರ ಪ್ರದೇಶ ಸರ್ಕಾರದಲ್ಲಿ ಸೈನಿಕ್ ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಗೃಹ ಭದ್ರತಾ ಇಲಾಖೆಗಳ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT