ಬೆಂಗಳೂರು: ‘ಜೀವನದಲ್ಲಿ ನನ್ನ ಸಾಧನೆ ಶೂನ್ಯ. ಸಾಧಿಸುವುದು ಬೇಕಾದಷ್ಟಿದೆ. ಇಲ್ಲಿಯವರೆಗೆ ಏನೂ ಸಾಧಿಸಿಲ್ಲ..’

ಕ್ರಿಕೆಟ್ ಅಂಕಿ ಅಂಶಗಳ ಲೋಕದ ‘ದಿಗ್ಗಜ’ರೇ ಆಗಿದ್ದ ಚನ್ನಗಿರಿ ಕೇಶವಮೂರ್ತಿಯವರು ಆಗಾಗ ಹೇಳುತ್ತಿದ್ದ ಮಾತುಗಳಿವು. ಆದರೆ ಕ್ರಿಕೆಟ್ ಲೋಕದ ಅದರಲ್ಲೂ ದೇಶಿ ಕ್ರಿಕೆಟ್ ಸಂಬಂಧಿತ ಅಂಕಿ ಅಂಶಗಳ ‘ವಿಶ್ವಕೋಶ’ವೇ ಅವರಾಗಿದ್ದರು. ಕಂಪ್ಯೂಟರ್ ತಂತ್ರಜ್ಞಾನವೇ ಇರದ ಕಾಲದಿಂದ ಇಂದಿನ ಕಾಲಘಟ್ಟದವರೆಗೂ ಪ್ರಸ್ತುತವಾಗಿ ಉಳಿದವರು ಕೇಶವಮೂರ್ತಿ. ಆಪ್ತ ವಲಯದಲ್ಲಿ ಸಿಕೆಎಂ ಎಂದೇ ಚಿರಪರಿಚಿತರಾಗಿದ್ದವರು.

ಮೃದುಭಾಷಿ, ಆದರೆ ನೇರನಿಷ್ಠುರ. ಸರಳ ಪೋಷಾಕುಧಾರಿಯಾಗಿದ್ದ ಅವರ ಹೆಗಲಿಗೆ ಜೋತುಬಿದ್ದಿರುತ್ತಿದ್ದ ಬಟ್ಟೆಯ ಚೀಲದಲ್ಲಿ ಸ್ವಾರಸ್ಯಕರ ಅಂಕಿ ಅಂಶಗಳ ಕಣಜವೇ ಇರುತ್ತಿತ್ತು. ಗೂಗಲ್ ಸರ್ಚ್ ಎಂಜಿನ್ಗೂ ಸಿಗದಂತಹ ರೋಚಕ ಅಂಶಗಳು ಅವರ ಬಳಿ ಇರುತ್ತಿದ್ದವು. ಸುಮಾರು 80 ವರ್ಷಗಳ ದೇಶಿ ಕ್ರಿಕೆಟ್ ಪರಂಪರೆಯ ಸಾಕ್ಷಿ ಪ್ರಜ್ಷೆಯಾಗಿದ್ದರು.

ಕ್ರಿಕೆಟಿಗರು ತಮ್ಮ ಆಟ ಮತ್ತು ಸಾಧನೆಗಳ ಮೂಲಕ ಜನರ ಅಭಿಮಾನ ಗಳಿಸುತ್ತಾರೆ. ಆದರೆ ಅಂತಹ ಕ್ರಿಕೆಟಿಗರ ಸಾಧನೆಗಳು ಅಂಕಿ ಅಂಶಗಳ ರೂಪದಲ್ಲಿ ಸದಾಕಾಲ ಉಳಿಯುವಂತೆ ದುಡಿದ ಮಹನೀಯರಲ್ಲಿ ಕೇಶವಮೂರ್ತಿ ಅಗ್ರಗಣ್ಯರು. ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದ ಸಿಕೆಎಂ ಅವರ ಆರೋಗ್ಯ ಸರಿಯಿರಲಿಲ್ಲ. ಉಸಿರಾಟದ ತೊಂದರೆ ಅವರನ್ನು ಘಾಸಿಗೊಳಿಸಿತ್ತು. ಆದರೆ ಅವರ ಕ್ರಿಕೆಟ್ ಪ್ರೀತಿ ಮಾತ್ರ ಎಳ್ಳಷ್ಟೂ ಕುಂಠಿತವಾಗಿರಲಿಲ್ಲ. ಪ್ರತಿದಿನವೂ ಕೃತಕ ಉಸಿರಾಟ ಯಂತ್ರದ ಮೂಲಕ ಅವರು ಉಸಿರಾಡಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿಯೂ ಕ್ರಿಕೆಟ್ ಅಂಕಿ ಅಂಶಗಳ ಹುಡುಕಾಟವನ್ನು ಬಿಟ್ಟಿರಲಿಲ್ಲ. ಕಳೆದ ರಣಜಿ ಋತುವಿನವರೆಗೂ ಅವರು ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಿದ್ದರು.

ಚಿತ್ರದುರ್ಗದ ಬಾಗೂರಿನಲ್ಲಿ ಎಂ. ಕೃಷ್ಣಾಚಾರ್ ಮತ್ತು ರಾಧಾಬಾಯಿ ದಂಪತಿಯ ಮಗನಾಗಿ ಜನಿಸಿದವರು ಕೇಶವಮೂರ್ತಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ನಂತರ ಬೆಂಗಳೂರು ಕಾಫಿ ಬೋರ್ಡ್ನಲ್ಲಿ ಸುಮಾರು 35 ವರ್ಷ ಕಾರ್ಯನಿರ್ವಹಿಸಿದ್ದರು. ತಮ್ಮ ವೃತ್ತಿಯ ಬದ್ಧತೆಗೆ ಚ್ಯುತಿ ಬರದಂತೆ ಪ್ರವೃತ್ತಿಯನ್ನು ಪೋಷಿಸಿಕೊಂಡು ಬೆಳೆದರು. ಅದರಲ್ಲೂ ಪ್ರಮುಖವಾಗಿ ಕ್ರಿಕೆಟ್ ಅಂಕಿ ಅಂಶ ಮತ್ತು ಸಾಹಿತ್ಯ ರಚನೆ ಅವರಿಗೆ ಹವ್ಯಾಸವಾಗಿದ್ದವು. ಅಲ್ಲದೇ ಕೀ ಬಂಚ್ (ಕೀಲಿಕೈ ಗುಚ್ಛಕ್ಕೆ ಬಳಸುವ ಬಂಚ್) ಸಂಗ್ರಹಣೆಯೂ ಅವರಿಗೆ ಅಚ್ಚುಮೆಚ್ಚಿನವಾಗಿದ್ದವು.

ಅವರ ಮನೆಯ ಮೊದಲ ಮಹಡಿಯಲ್ಲಿದ್ದ ಕೋಣೆಯ (ಗ್ರಂಥಾಲಯ) ತುಂಬ ಕ್ರಿಕೆಟ್ ಸಂಬಂಧಿತ ಪುಸ್ತಕಗಳು. ವಿದೇಶದಲ್ಲಿ ಪ್ರಕಟವಾದ ನಿಯತಕಾಲಿಕೆಗಳು, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಬಿ.ಎಸ್. ಚಂದ್ರಶೇಖರ್, ಯರ್ರಪಳ್ಳಿ ಪ್ರಸನ್ನ, ಬ್ರಿಜೇಶ್ ಪಟೇಲ್ ಮತ್ತಿತರ ದಿಗ್ಗಜ ಕ್ರಿಕೆಟಿಗರೊಂದಿಗಿನ ಭಾವಚಿತ್ರಗಳು ತುಂಬಿವೆ. ಅದರ ನಡುವೆ ವಾಮನ ಮೂರ್ತಿಯಂತೆ ನಿಂತು ರೋಚಕ ಅಂಕಿ ಅಂಶಗಳ ಕುರಿತು ಮಾತನಾಡುತ್ತಿದ್ದ ಸಿಕೆಎಂ ಅವರು ಮಾತ್ರ ಈಗ ಅಲ್ಲಿಲ್ಲ.

ಸಿಕೆಎಂ ಪುಸ್ತಕಗಳು

ಭಾರತೀಯ ಕ್ರಿಕೆಟ್ ಇತಿಹಾಸ, ಭಾರತದ ಕ್ರಿಕೆಟ್ ನಾಯಕರು, ಇರಾನಿ ಕಪ್, ವಿಶ್ವ ಕ್ರಿಕೆಟ್ನಲ್ಲಿ ಕರ್ನಾಟಕದ ಆಟಗಾರರು, ಭಾರತರತ್ನ ಸಚಿನ್ ತೆಂಡೂಲ್ಕರ್ (ಕ್ರೀಡೆ ಕೃತಿಗಳು)

ವಿಲ್ಲಿನ ರಹಸ್ಯ (ಪತ್ತೇದಾರಿ ನಾಟಕ), ಬಯಲಾಗದ ರಹಸ್ಯ, ಆ ಸುಂದರ ತರುಣಿ, ವಿಷಸರ್ಪ, ಅವಳೇಕೆ ಸತ್ತಳು, ಗುರುತು ಸಿಗದ ಶವ, ನೀಲಿ ಕುಪ್ಪಸ, ಅವಳ ಅಂತರಂಗ, ಮುದುಡಿದ ಮೊಗ್ಗು, ನಿಗೂಡ ಪ್ರೇಮ, ಅವನಲ್ಲ ಅಪರಾಧಿ, ಪತ್ತೇದಾರ ರಮೇಶ್, ಒಂದು ನಿಧಿಯ ಸುತ್ತ, ಬೆದರಿಕೆ ಪತ್ರ (ಪತ್ತೇದಾರಿ ಕಾದಂಬರಿಗಳು)

ಅಭಿಲಾಷೆ, ಚಿನ್ನದ ಸರ, ಪರಿವರ್ತನೆ (ಸಾಮಾಜಿಕ ಕಾದಂಬರಿಗಳು)

ಯಾಂತ್ರಿಕ ಶಕ್ತಿಗಳೊಡನೆ ವಿನೋದ, ಸಾಮಾನ್ಯ ವಿಜ್ಞಾನ (ವಿಜ್ಞಾನ ಪುಸ್ತಕಗಳು)

ನೆಹರು ನುಡಿಮುತ್ತುಗಳು, ನೆಹರು ಕಾಲದ ಪ್ರಮುಖ ಘಟನೆಗಳು

ಸಾಹಿತ್ಯವೇ ಹಸಿರು, ಕ್ರಿಕೆಟೇ ಉಸಿರು (ಅಭಿನಂದನಾ ಗ್ರಂಥ)

‘ಹಲೋ, ಐ ಆ್ಯಮ್ ಸಚಿನ್ ತೆಂಡೂಲ್ಕರ್..‘

ಸಿಕೆಎಂ ಅವರು ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. 2003ರಲ್ಲಿ ಬರೆದಿದ್ದ ‘ಭಾರತೀಯ ಕ್ರಿಕೆಟ್ ಇತಿಹಾಸ’ ಪುಸ್ತಕಕ್ಕೆ ಸಚಿನ್ ಅವರ ಹಸ್ತಾಕ್ಷರ ಪಡೆಯುವ ಉತ್ಕಟವಾದ ಆಸೆ ಸಿಕೆಎಂ ಅವರಿಗೆ ಇತ್ತು.

ಆ ವರ್ಷ ಭಾರತ ತಂಡವು ಬೆಂಗಳೂರಿನಲ್ಲಿ ತಾಲೀಮು ನಡೆಸಿತ್ತು. ಆ ತಂಡದಲ್ಲಿದ್ದ ಸಚಿನ್ ಅವರನ್ನು ಭೇಟಿಯಾಗುವುದು ಸುಲಭವಾಗಿರಲಿಲ್ಲ. ಭದ್ರತೆಯನ್ನು ಮೀರಿ ಹೋಗುವುದು ಅಸಾಧ್ಯವೂ ಆಗಿತ್ತು. ಆದರೂ ಸಿಕೆಎಂ ಎದೆಗುಂದಲಿಲ್ಲ. ಸಚಿನ್ ತಂಗಿದ್ದ ಪಂಚತಾರಾ ಹೋಟೆಲ್ ವಿಳಾಸಕ್ಕೆ ಒಂದು ಪತ್ರ ಬರೆದರು.

‘ನಾನು ಬರೆದಿರುವ ಭಾರತೀಯ ಕ್ರಿಕೆಟ್ ಇತಿಹಾಸ ಪುಸ್ತಕಕ್ಕೆ ತಮ್ಮ ಹಸ್ತಾಕ್ಷರ ಬೇಕು. ನಾನು ನಿಮ್ಮ ಕಟ್ಟಾ ಅಭಿಮಾನಿ ಭೇಟಿಯಾಗಬೇಕು’ ಎಂದು ಇಂಗ್ಲಿಷ್ನಲ್ಲಿ ಬರೆದು, ಹೋಟೆಲ್ ರಿಸೆಪ್ಷನ್ ವಿಳಾಸಕ್ಕೆ ಪೋಸ್ಟ್ ಮಾಡಿಬಿಟ್ಟರು. ಅದು ಸಚಿನ್ಗೆ ತಲುಪುವ ಖಚಿತತೆ ಸಿಕೆಎಂ ಅವರಿಗೂ ಇರಲಿಲ್ಲ.

ಆದರೆ ಒಂದೆರಡು ದಿನಗಳ ನಂತರ ರಾತ್ರಿ ಕೇಶವಮೂರ್ತಿಯವರ ಮನೆಯ ಲ್ಯಾಂಡ್ಲೈನ್ಗೆ ಕರೆಯೊಂದು ಬಂತು, ‘ಹಲೋ ಐ ಆ್ಯಮ್ ಸಚಿನ್ ತೆಂಡೂಲ್ಕರ್ ಸ್ಪೀಕಿಂಗ್..’ ಎಂಬ ಧ್ವನಿ ಕೇಳಿಬಂದಾಗ ಸಿಕೆಎಂ ಸಂತಸ ಮುಗಿಲುಮುಟ್ಟಿತ್ತು. ಮರುದಿನ ಬೆಳಿಗ್ಗೆ ತಾವು ಉಳಿದುಕೊಂಡಿದ್ದ ಹೋಟೆಲ್ಗೆ ಬರುವಂತೆ ಕೇಶವಮೂರ್ತಿಯವರನ್ನು ಸಚಿನ್ ಆಹ್ವಾನಿಸಿದರು. ಅಲ್ಲಿಗೆ ಹೋದ ಕೇಶವಮೂರ್ತಿಯವರ ಕನ್ನಡ ಪುಸ್ತಕಕ್ಕೆ ಹಸ್ತಾಕ್ಷರ ಹಾಕಿದರು. ಆತ್ಮೀಯವಾಗಿ ಮಾತನಾಡಿಸಿ, ಕೇಶವಮೂರ್ತಿ ಮತ್ತು ಕುಟುಂಬದವರೊಂದಿಗೆ ಚಿತ್ರ ತೆಗೆಸಿಕೊಂಡರು.

2019ರಲ್ಲಿ ಕೇಶವಮೂರ್ತಿಯವರು ‘ಭಾರತರತ್ನ ಸಚಿನ್ ತೆಂಡೂಲ್ಕರ್‘ ಎಂಬ ಕೃತಿಯನ್ನೂ ಬರೆದರು.

ನಿಧನ ವಾರ್ತೆ

ಕ್ರಿಕೆಟ್ ಸಂಖ್ಯೆಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ (85) ಅವರು ಅನಾರೋಗ್ಯದಿಂದಾಗಿ ಮಂಗಳವಾರ ನಿಧನರಾದರು. ಸಂಜೆ ಚಾಮರಾಜಪೇಟೆಯ ಮುಕ್ತಿಧಾಮದಲ್ಲಿ ಅವರ ಅಂತ್ಯ ಕ್ರಿಯೆ ನೇರವೇರಿಸಲಾಯಿತು. ಅವರಿಗೆ ಪತ್ನಿ ಮಗ ಮತ್ತು ಮಗಳು ಇದ್ದಾರೆ.

ವಿಲ್ಲಿನ ರಹಸ್ಯ... 1963ರಲ್ಲಿ ಪತ್ತೇದಾರಿ ನಾಟಕ ‘ವಿಲ್ಲಿನ ರಹಸ್ಯ’ ಬರೆದಿದ್ದರು. ಅಲ್ಲಿಂದ ಅವರ ಸಾಹಿತ್ಯದ ಕೃಷಿ ಆರಂಭವಾಗಿತ್ತು. ಹಲವು ಪತ್ತೇದಾರಿ ಕಾದಂಬರಿಗಳು ವಿಜ್ಞಾನ ಪುಸ್ತಕಗಳು ಸಾಮಾಜಿಕ ಕಾದಂಬರಿ ಮತ್ತು ಕ್ರಿಕೆಟ್ ಪುಸ್ತಕಗಳನ್ನು ಅವರು ಬರೆದಿದ್ದಾರೆ. ‘ಅವರು ತಮ್ಮ ಸಾವಿನಲ್ಲೂ ಸರಳತೆ ಮೆರೆದಿದ್ದಾರೆ. ತಾವು ನಿಧನರಾದಾಗ ಯಾವುದೇ ಆಡಂಬರ ಬೇಡ. ಸಾಧಾರಣ ಚಾಪೆಯ ಮೇಲೆ ತಮ್ಮ ಪಾರ್ಥಿವ ಶರೀರವನ್ನು ಮಲಗಿಸಬೇಕು. ಮನೆ ಮುಂದೆ ಶಾಮಿಯಾನಾ ಹಾಕಿಸಕೂಡದು. ಯಾರೂ ಹೂವು ಹಾರ ಹಾಕಬಾರದು. ಹೆಚ್ಚು ಜನಜಂಗುಳಿ ಬೇಡ. ಯಾರ ಧನಸಹಾಯವೂ ಬೇಡ. ಯಾರಿಗೂ ತೊಂದರೆಯಾಗಬಾರದು ಎಂದು ಉಯಿಲು ಬರೆದಿದ್ದಾರೆ. ನಾವೂ ಅವರ ಇಚ್ಛೆಯಂತೆಯೇ ಎಲ್ಲ ವಿಧಿ ವಿಧಾನಗಳನ್ನು ನೆರವೇರಿಸಿದ್ದೇವೆ’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.