ಭಾರತ- ಬಾಂಗ್ಲಾ ಪಂದ್ಯದ 'ಫ್ಯಾನ್ ಆಫ್ ದಿ ಮ್ಯಾಚ್' ಚಾರುಲತಾ!

ಬುಧವಾರ, ಜೂಲೈ 24, 2019
24 °C

ಭಾರತ- ಬಾಂಗ್ಲಾ ಪಂದ್ಯದ 'ಫ್ಯಾನ್ ಆಫ್ ದಿ ಮ್ಯಾಚ್' ಚಾರುಲತಾ!

Published:
Updated:

ಎಜ್‌ಬಾಸ್ಟನ್: ಮಂಗಳವಾರ ಇಲ್ಲಿ ನಡೆದ ಭಾರತ- ಬಾಂಗ್ಲಾದೇಶ ನಡುವಿನ ಪಂದ್ಯವನ್ನು ವೀಕ್ಷಿಸುತ್ತಾ, ಭಾರತ ತಂಡಕ್ಕೆ ಪ್ರೋತ್ಸಾಹ ನೀಡುತ್ತಿರುವ ಅಜ್ಜಿಯೊಬ್ಬರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು ಕೆನ್ನೆಯಲ್ಲಿ ತ್ರಿವರ್ಣ ಧ್ವಜದ ರಂಗು ಹಚ್ಚಿ ಪೀಪಿ ಊದುತ್ತಿದ್ದ ಈ ಹಿರಿಯ ಅಭಿಮಾನಿಯ ಹೆಸರು ಚಾರುಲತಾ ಪಟೇಲ್, ವಯಸ್ಸು 87!  

ಪಂದ್ಯದ ವೇಳೆ ಕ್ಯಾಮೆರಾ ಕಣ್ಣುಗಳಲ್ಲಿ ಸ್ಟಾರ್ ಆದ ಈ ಅಜ್ಜಿಯ ಜತೆ ಸೆಲ್ಫಿ ತೆಗೆದುಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಮುಗಿಬೀಳುತ್ತಿದ್ದರೆ, ಇವರ ಸಂದರ್ಶನಕ್ಕಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದರು ಪತ್ರಕರ್ತರು.

ವಿಶ್ವಕಪ್ ಕ್ರಿಕೆಟ್ ಅಧಿಕೃತ ಟ್ವಿಟರ್ ಪೇಜ್ ಸೇರಿದಂತೆ ಹಲವಾರು ಟ್ವಿಟರ್ ಖಾತೆಗಳಲ್ಲಿ ಮಂಗಳವಾರ ಚಾರುಲತಾ ಪಟೇಲ್ ಅವರ ಫೋಟೊ ರಾರಾಜಿಸಿದೆ.

ಎಎನ್‌ಐ ಸುದ್ದಿಸಂಸ್ಥೆ ಚಾರುಲತಾ ಅವರ ಸಂದರ್ಶನ ನಡೆಸಿದ್ದು, ಚಾರುಲತಾ ತಮ್ಮ ಕ್ರಿಕೆಟ್ ಅಭಿಮಾನದ ಬಗ್ಗೆ  ಹೇಳಿದ್ದು ಹೀಗೆ-
ನನ್ನ ಅಪ್ಪ ಅಮ್ಮ ಭಾರತೀಯರು, ನಾನು ಹುಟ್ಟಿದ್ದು  ತಾಂಜೇನಿಯಾದಲ್ಲಿ. ನನ್ನ ಮಕ್ಕಳಿಗೆ ಕ್ರಿಕೆಟ್ ಇಷ್ಟ. ಅವರು ಕ್ರಿಕೆಟ್ ಆಡುತ್ತಿರುವಾಗ ನೋಡುತ್ತಿದ್ದೆ. ಆಮೇಲೆ ಆಟ ಅರ್ಥವಾಗ ತೊಡಗಿತು. ಆಟ ಅರ್ಥವಾದರೆ ಅಲ್ಲವೇ ಅದನ್ನು ಆಸ್ವಾದಿಸುವುದಕ್ಕೆ ಆಗುವುದು? ಹಾಗೆ ನಾನು  ಕ್ರಿಕೆಟ್ ಪ್ರೇಮಿಯಾದೆ.

ಕಳೆದ 30 ವರ್ಷಗಳಿಂದ ನಾನು ಕ್ರಿಕೆಟ್ ನೋಡುತ್ತಿದ್ದೇನೆ. ಮೊದಲು ಕೆಲಸದಲ್ಲಿದ್ದೆ. ಆಗ ಟಿ.ವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದೆ. ನಿವೃತ್ತಿ ಆದ ನಂತರ ಹೀಗೆ ಕ್ರೀಡಾಂಗಣಕ್ಕೆ ಬಂದು ವೀಕ್ಷಿಸುತ್ತಿದ್ದೇನೆ. ಕಳೆದ 20 ವರ್ಷಗಳಿಂದ ನಾನು ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದು.

ನಾನು ಭಾರತದಲ್ಲಿ ಹುಟ್ಟಿಲ್ಲವಾದರೂ ನನ್ನ ಎದೆಯಲ್ಲಿ ಸದಾ ಭಾರತದ ಮೇಲೆ ಪ್ರೀತಿ ಇದೆ. ಇಲ್ಲಿ ಭಾರತೀಯರನ್ನು ಕಂಡಾಗ ನನಗೆ ಮಾತನಾಡಿಸಬೇಕು ಎಂದು ಅನಿಸುತ್ತಿರುತ್ತದೆ. ನಾನು ತುಂಬಾ ಫ್ರೆಂಡ್ಲೀ ಮಹಿಳೆ ಎಂದು ನಗುತ್ತಾರೆ ಈ ಅಜ್ಜಿ.

 1983ರಲ್ಲಿ ಕಪಿಲ್ ಪಾಜೀ  ವಿಶ್ವಕಪ್ ಗೆದ್ದಾಗ ನಾನು ಅಲ್ಲಿದ್ದೆ. ಇಂಗ್ಲೆಂಡ್‌ಗೆ ಭಾರತೀಯ ಕ್ರಿಕೆಟ್ ತಂಡ ಬಂದಾಗಲೆಲ್ಲಾ ನಾನು ಅವರಿಗಾಗಿ ಪ್ರಾರ್ಥಿಸುತ್ತೇನೆ. ನಾನು ದೇವರನ್ನು ನಂಬುವವಳು. ನಾನು ಗಣಪತಿಯ ಭಕ್ತೆ. ಭಾರತ ತಂಡ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ. ನಾನು ಆಟಗಾರರಿಗೆ ಇಲ್ಲಿಂದಲೇ ಹಾರೈಸುತ್ತೇನೆ. ಅವರು ಚೆನ್ನಾಗಿ ಆಡಲಿ, ಪಂದ್ಯ ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

 ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಜ್ಜಿ ಬಳಿ ಬಂದು ಮಾತನಾಡಿದ್ದಾರೆ.

 

 ನನ್ನ ಎಲ್ಲ ಅಭಿಮಾನಿಗಳಿಗೆ ಅವರ ಪ್ರೀತಿ ಮತ್ತು ಬೆಂಬಲಕ್ಕೆ ವಿಶೇಷವಾಗಿ ಚಾರುಲತಾ ಪಟೇಲ್‌ ಜೀ ಅವರಿಗೆ ನನ್ನ ಧನ್ಯವಾದಗಳು. ಅವರಿಗೆ 87 ವರ್ಷ, ಹೀಗೊಬ್ಬರು ಅಭಿಮಾನಿಯನ್ನು ನಾನು ಈವರೆಗೆ ನೋಡಿರಲಿಲ್ಲ. ವಯಸ್ಸು ಕೇವಲ ಸಂಖ್ಯೆ ಮಾತ್ರ ಆದರೆ ಉತ್ಸಾಹ ನಿಮ್ಮನ್ನು ಪುಟಿದೇಳುವಂತೆ ಮಾಡುತ್ತದೆ. ಅವರ ಆಶೀರ್ವಾದದೊಂದಿಗೆ ನಾವು ಮುಂದಿನ ಹಂತಕ್ಕೆ ಹೋಗುತ್ತಿದ್ದೇವೆ ಎಂದಿದ್ದಾರೆ ಕೊಹ್ಲಿ.

ಈ ಅಜ್ಜಿಯ ಉತ್ಸಾಹವನ್ನು ನೋಡಿ  ಖ್ಯಾತ ಉದ್ಯಮಿ ಆನಂದ್ ಮಹೇಂದ್ರ ಅವರು ಭಾರತದ ಇತರ ಪಂದ್ಯಗಳನ್ನು ವೀಕ್ಷಿಸಲು ಇವರಿಗೆ ಉಚಿತ  ಟಿಕೆಟ್ ಆಫರ್ ನೀಡಿದ್ದಾರೆ .

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !