ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಪಾಕ್‌ನಲ್ಲಿ ಚೆನ್ನೈಗೆ ಮೊದಲ ಸೋಲು

ನಾಲ್ಕು ವಿಕೆಟ್‌ ಉರುಳಿಸಿದ ಲಸಿತ್‌ ಮಾಲಿಂಗ: ಕೃಣಾಲ್‌ ಬೌಲಿಂಗ್‌ ಮೋಡಿ: 46ರನ್‌ಗಳಿಂದ ಗೆದ್ದ ಮುಂಬೈ
Last Updated 26 ಏಪ್ರಿಲ್ 2019, 20:03 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಚೆಪಾಕ್‌ ಅಂಗಳದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಗೆಲುವಿನ ಓಟಕ್ಕೆ ಶುಕ್ರವಾರ ತಡೆ ಬಿದ್ದಿದೆ.

ಮುಂಬೈ ಇಂಡಿಯನ್ಸ್‌ ತಂಡ 46ರನ್‌ಗಳಿಂದ ಆತಿಥೇಯರ ವಿರುದ್ಧ ಜಯಭೇರಿ ಮೊಳಗಿಸಿದೆ. ಇದರೊಂದಿಗೆ ರೋಹಿತ್‌ ಶರ್ಮಾ ಬಳಗ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಚೆನ್ನೈ ತಂಡ ಈ ಸಲ ತವರಿನ ಅಂಗಳದಲ್ಲಿ ಸೋತ ಮೊದಲ ಪಂದ್ಯ ಇದು. ಹಿಂದಿನ ಐದು ಪಂದ್ಯಗಳಲ್ಲೂ ಮಹೇಂದ್ರ ಸಿಂಗ್‌ ಧೋನಿ ಬಳಗ ಜಯದ ಸಿಹಿ ಸವಿದಿತ್ತು. ಈ ಪಂದ್ಯದಲ್ಲಿ ಧೋನಿ ಕಣಕ್ಕಿಳಿದಿರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಅವರು ವಿಶ್ರಾಂತಿ ಪಡೆದರು. ಹೀಗಾಗಿ ಸುರೇಶ್‌ ರೈನಾ ತಂಡವನ್ನು ಮುನ್ನಡೆಸಿದ್ದರು. ಅಂಬಟಿ ರಾಯುಡು ವಿಕೆಟ್‌ ಕೀಪರ್‌ ಜವಾಬ್ದಾರಿ ನಿಭಾಯಿಸಿದ್ದರು.

ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರೈನಾ ಪಡೆಯ ಬೌಲರ್‌ಗಳ ಬಿಗಿ ದಾಳಿಯಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 155 ರನ್‌ಗಳಿಸಿತು. ಗುರಿ ಬೆನ್ನಟ್ಟಿದ ಆತಿಥೇಯರು 17.4 ಓವರ್‌ಗಳಲ್ಲಿ 109ರನ್‌ಗಳಿಗೆ ಆಲೌಟ್‌ ಆದರು. ಚೆನ್ನೈ ತಂಡದ ಬ್ಯಾಟ್ಸ್‌ಮನ್‌ಗಳು ಶ್ರೀಲಂಕಾದ ಲಸಿತ್‌ ಮಾಲಿಂಗ (37ಕ್ಕೆ4) ಅವರ ಶರವೇಗದ ದಾಳಿಗೆ ತರಗೆಲೆಗಳ ಹಾಗೆ ಉದುರಿ ಹೋದರು.

ಆತಿಥೇಯ ತಂಡಕ್ಕೆ ಮೊದಲ ಓವರ್‌ನಲ್ಲೇ ಮಾಲಿಂಗ, ಆಘಾತ ನೀಡಿದರು. ಅವರು ಐದನೇ ಎಸೆತದಲ್ಲಿ ಶೇನ್‌ ವ್ಯಾಟ್ಸನ್‌ (8) ವಿಕೆಟ್‌ ಉರುಳಿಸಿದರು. ರೈನಾ, ರಾಯುಡು (0), ಕೇದಾರ್‌ ಜಾಧವ್‌ (6) ಮತ್ತು ಧ್ರುವ ಶೋರೆ (5) ಪೆವಿಲಿಯನ್‌ ಪರೇಡ್‌ ನಡೆಸಿದರು. ಈ ಸಲದ ಲೀಗ್‌ನಲ್ಲಿ ಮೊದಲ ಪಂದ್ಯ ಆಡಿದ ಮುರಳಿ ವಿಜಯ್‌ 38ರನ್‌ ಗಳಿಸಿದರು. ಡ್ವೇನ್‌ ಬ್ರಾವೊ (20; 17ಎ, 2ಬೌಂ) ಮತ್ತು ಮಿಷೆಲ್‌ ಸ್ಯಾಂಟನರ್‌ (22; 20ಎ, 2ಸಿ) ಅವರ ಹೋರಾಟ ಸಾಕಾಗಲಿಲ್ಲ.

ಬ್ಯಾಟಿಂಗ್‌ ಆರಂಭಿಸಿದ ಮುಂಬೈಗೆ ನಾಯಕ ರೋಹಿತ್ (67; 48ಎ, 6ಬೌಂ, 3ಸಿ) ಮತ್ತು ಕ್ವಿಂಟನ್‌ ಡಿ ಕಾಕ್ (16; 9ಎ, 1ಬೌಂ, 1ಸಿ) ಉತ್ತಮ ಆರಂಭ ನೀಡಲಿಲ್ಲ. ಮೂರನೇ ಓವರ್‌ನಲ್ಲಿ ದೀಪಕ್ ಚಾಹರ್ ಮುಂಬೈಗೆ ಮೊದಲ ಆಘಾತ ನೀಡಿದರು. ಅವರು ಕ್ವಿಂಟನ್ ವಿಕೆಟ್ ಕಬಳಿಸಿದರು. ರೋಹಿತ್ ಜೊತೆಗೂಡಿದ ಎವಿನ್ ಲೂಯಿಸ್ (32; 30ಎ, 3ಬೌಂ, 1ಸಿ) ತಾಳ್ಮೆಯ ಆಟವಾಡಿದರು. ಅವಸರದ ಹೊಡೆತಗಳಿಗೆ ಇಬ್ಬರೂ ಕೈ ಹಾಕಲಿಲ್ಲ. ಆದರಿಂದಾಗಿ ರನ್‌ ಗಳಿಕೆಯ ವೇಗ ಕಡಿಮೆಯಾಯಿತು.

ಇವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 75 ರನ್‌ ಗಳಿಸಿದರು. 13ನೇ ಓವರ್‌ನಲ್ಲಿ ಲೂಯಿಸ್ ಅವರು ಮಿಷೆಲ್ ಸ್ಯಾಂಟನರ್ ಎಸೆತದ ತಿರುವು ಅರಿಯದೇ ಆಡಿದರು. ಬ್ಯಾಟ್‌ ಮೇಲಂಚಿಗೆ ಬಡಿದು ಗಾಳಿಯಲ್ಲಿ ಎಗರಿದ ಚೆಂಡನ್ನು ಫೀಲ್ಡರ್‌ ಡ್ವೇನ್ ಬ್ರಾವೊ ಬೊಗಸೆ ತುಂಬಿಕೊಂಡರು. ಹಾರ್ದಿಕ್ ಪಾಂಡ್ಯ (23; 18ಎ, 1ಬೌಂ, 1ಸಿ) ಮತ್ತು ರೋಹಿತ್ ಒಂದಿಷ್ಟು ರನ್‌ ಗಳಿಸುವ ಪ್ರಯತ್ನ ಮಾಡಿದರು. 17ನೇ ಓವರ್‌ನಲ್ಲಿ ರೋಹಿತ್ ಕೂಡ ಸ್ಯಾಂಟನರ್‌ ಎಸೆತವನ್ನು ಆಡುವ ಭರದಲ್ಲಿ ಮುರಳಿ ವಿಜಯ್‌ಗೆ ಕ್ಯಾಚಿತ್ತರು. ಹಾರ್ದಿಕ್ ಮತ್ತು ಕೀರನ್ ಪೊಲಾರ್ಡ್‌ (ಔಟಾಗದೆ 13) ಅವರು ಕೊನೆಯ ಹಂತದ ಓವರ್‌ಗಳಲ್ಲಿ ಹೆಚ್ಚು ಅಬ್ಬರಿಸದಂತೆ ಆತಿಥೇಯ ಬೌಲರ್‌ಗಳು ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT