ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಅಂಗಳದ ಮತ್ತೊಂದು ‘ಗೋಡೆ’ ಚೇತೇಶ್ವರ್ ಪೂಜಾರ

Last Updated 16 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಕಮಿಟ್‌ಮೆಂಟ್..ಕನ್ಸಿಸ್ಟೆನ್ಸಿ..ಕ್ಲಾಸ್..

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರದ ಪಕ್ಕ ಇರುವ ಗೋಡೆಯ ಮೇಲೆ ಈ ಮೂರು ಇಂಗ್ಲಿಷ್ ಪದಗಳಿವೆ. ಬದ್ಧತೆ, ಸ್ಥಿರತೆ ಮತ್ತು ಶ್ರೇಷ್ಠತೆ ಎಂಬುದು ಈ ಪದಗಳ ಅರ್ಥ. ಈ ಮೂರು ಗುಣಗಳನ್ನು ತಮ್ಮ ಆಟದ ಮೂಲಕ ಜಗತ್ತಿಗೆ ತೋರಿಸಿದ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಗೌರವಕ್ಕಾಗಿ ಕಟ್ಟಲಾಗಿರುವ ಗೋಡೆ ಇದು. ಎಂತಹದೇ ಸಂದರ್ಭದಲ್ಲಿಯೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಆಸರೆಯಾಗುತ್ತಿದ್ದ ರಾಹುಲ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಇಟ್ಟ ಹೆಸರು ‘ದ ವಾಲ್’.

ಇದೀಗ ಕ್ರಿಕೆಟ್‌ ಅಂಗಳದಲ್ಲಿ ಮತ್ತೊಂದು ‘ಗೋಡೆ’ ಎಂಬ ಹೆಗ್ಗಳಿಕೆಗೆ ಚೇತೇಶ್ವರ್ ಪೂಜಾರ ಪಾತ್ರರಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದು ಸಾವಿರ ರನ್‌ ಗಳಿಸಲು ರಾಹುಲ್ ಅವರಷ್ಟೇ ಇನಿಂಗ್ಸ್‌ಗಳಲ್ಲಿ (108) ಆಡಿದ್ದಾರೆ ಪೂಜಾರ. ಅದಕ್ಕಾಗಿಯೇ ಮಾಜಿ ಕ್ರಿಕೆಟಿಗ ಕರ್ಸನ್ ಘಾವ್ರಿ ಅವರು ಪೂಜಾರ ಅವರನ್ನು ’ಮತ್ತೊಬ್ಬ ಗೋಡೆ’ ಎಂದು ಶ್ಲಾಘಿಸಿದ್ಧಾರೆ. ಅವರು ಹಾಗೆ ಹೇಳಲು ಕೇವಲ ರನ್‌ ಗಳಿಕೆಯಷ್ಟೇ ಕಾರಣವಲ್ಲ. ಪೂಜಾರ ಆಟದ ಶೈಲಿ, ತಾಳ್ಮೆಯ ಸ್ವಭಾವ ಮತ್ತು ದಿಟ್ಟತನಗಳೂ ಕಾರಣ. ಈಚೆಗೆ ಅಡಿಲೇಡ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಜಯಿಸಿ ದಾಖಲೆ ಬರೆಯಲು ಅವರ ಆಟ ಕಾರಣವಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕಗಳು ಅವರ ಸ್ಥಿರತೆಯನ್ನು ತೋರಿಸಿತ್ತು. ಇದರೊಂದಿಗೆ ಅವರು ಟೆಸ್ಟ್‌ ಕ್ರಿಕೆಟ್‌ನ ಬ್ಯಾಟಿಂಗ್‌ನ ನೈಜ ಸೊಬಗನ್ನು ಉಣಬಡಿಸಿದರು. ಟ್ವೆಂಟಿ–20 ಕ್ರಿಕೆಟ್ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಕಲಾತ್ಮಕ ಬ್ಯಾಟಿಂಗ್‌ ಹೇಗಿರುತ್ತದೆ ಎಂದು ಈ ಕಾಲಘಟ್ಟದಲ್ಲಿಯೂ ತೋರಿಸಬಲ್ಲ ಏಕೈಕ ಬ್ಯಾಟ್ಸ್‌ಮನ್ ಪೂಜಾರ ಎಂದರೆ ತಪ್ಪಾಗಲಿಕ್ಕಿಲ್ಲ. ದಶಕದ ಹಿಂದೆ ವಿಶ್ವದ ಎಲ್ಲ ಕ್ರಿಕೆಟ್ ತಂಡಗಳಲ್ಲಿಯೂ ಕಲಾತ್ಮಕ ಆಟಗಾರರು ಇದ್ದರು. ಶ್ರೀಲಂಕಾದ ಮಹೇಲ ಜಯವರ್ಧನೆ, ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ಮೈಕೆಲ್ ಬೆವನ್, ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್, ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ ಅವರು ಪ್ರಮುಖರಾಗಿದ್ದರು. ಭಾರತ ತಂಡದಲ್ಲಿ ಸಚಿನ್, ದ್ರಾವಿಡ್, ಲಕ್ಷ್ಮಣ್ ಅವರಿದ್ದರು. ಈಗ ಅವರ ಹಾದಿಯಲ್ಲಿ ಪೂಜಾರ ಇದ್ದಾರೆ.

ಆಪ್ತವಲಯದಲ್ಲಿ ‘ಚಿಂಟೂ’ ಎಂದೇ ಕರೆಸಿಕೊಳ್ಳುವ ಸೌರಾಷ್ಟ್ರದ ಪೂಜಾರ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಬೆಂಗಳೂರಿನಲ್ಲಿ. 2010ರಲ್ಲಿ ಇಲ್ಲಿ ನಡೆದಿದ್ದ ಬಾರ್ಡರ್‌– ಗಾವಸ್ಕರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಎರಡನೇ ಟೆಸ್ಟ್‌ ಅವರಿಗೆ ಮೊದಲನೆಯದ್ದು. ದೇಶಿ ಕ್ರಿಕೆಟ್‌ನಲ್ಲಿ ದ್ವಿಶತಕ, ತ್ರಿಶತಕಗಳ ಮೂಲಕ ರನ್‌ಗಳ ರಾಶಿ ಪೇರಿಸಿದ್ದ ಪೂಜಾರ; ರಾಷ್ಟ್ರೀಯ ತಂಡಕ್ಕೆ ಕಾಲಿಟ್ಟಾಗ ದಿಗ್ಗಜರ ದೊಡ್ಡ ದಂಡು ಇತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ರನ್ ಗಳಿಸಿ ಔಟಾಗಿದ್ದರು. ಆದರೆ ಸಚಿನ್ ದ್ವಿಶತಕ ಬಾರಿಸಿ ರಾರಾಜಿಸಿದ್ದರು. ರಾಹುಲ್ ಮಿಂಚಿರಲಿಲ್ಲ. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಪೂಜಾರ (72 ರನ್) ಗಳಿಸಿದ್ದ ಅರ್ಧಶತಕ ಭಾರತದ ಗೆಲುವಿಗೆ ಬಲ ತುಂಬಿತ್ತು. ಆದರೂ ತಂಡದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಲು ಅವರಿಗೆ ಸಾಧ್ಯವಾಗಲಿಲ್ಲ. ‘ಸ್ಟಾಫ್‌ ಗ್ಯಾಪ್‌’ ಆಟಗಾರನಾಗಿಯೇ ಹೆಚ್ಚು ಆಡಿದರು. ಸಿಕ್ಕ ಅವಕಾಶಗಳಲ್ಲಿಯೇ ತಮ್ಮ ಸಾಮರ್ಥ್ಯ ಮೆರೆದರು. ಆದರೆ ದೇಶಿ ಕ್ರಿಕೆಟ್‌ನಲ್ಲಿ ಮತ್ತು ಭಾರತ ‘ಎ’ ತಂಡದಲ್ಲಿ ರನ್ ಬೇಟೆಯನ್ನು ನಿರಂತರವಾಗಿ ಮಾಡಿದರು.

2012ರಲ್ಲಿ ದ್ರಾವಿಡ್ ಮತ್ತು ಲಕ್ಷ್ಮಣ್ ಅವರು ನಿವೃತ್ತಿ ಘೋಷಿಸಿದಾಗ ಅವರ ಜಾಗ ತುಂಬುವವರ ಹುಡುಕಾಟ ಆರಂಭವಾಯಿತು. ಪೂಜಾರ ಮೇಲೆ ನಿರೀಕ್ಷೆಯ ಕಂಗಳು ನೆಟ್ಟವು. ಅವರು ನಿರಾಸೆ ಮೂಡಿಸಲಿಲ್ಲ. ಅದೇ ವರ್ಷದಲ್ಲಿ ಭರಪೂರ ಫಾರ್ಮ್‌ನಲ್ಲಿದ್ದರು. ಟೆಸ್ಟ್‌ನಲ್ಲಿ ಶತಕ, ದ್ವಿಶತಕಗಳನ್ನು ಹೊಡೆದರು. ಭಾರತ ಮತ್ತು ವಿದೇಶಿ ಪಿಚ್‌ಗಳಲ್ಲಿ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಎಲ್ಲ ಆಟಗಾರರ ಜೀವನದಲ್ಲಿ ಇರುವಂತೆ ಇವರ ವೃತ್ತಿಯಲ್ಲೂ ಏಳು–ಬೀಳುಗಳಿದ್ದವು. ಗಾಯದ ಸಮಸ್ಯೆ, ಫಾರ್ಮ್‌ ಕೊರತೆಯನ್ನು ಅನುಭವಿಸಿದರು. ಆಗ ‘ಎ’ ತಂಡದಲ್ಲಿ ಆಡಿದರು. ಅಲ್ಲಿ ರಾಹುಲ್ ನೀಡಿದ ಮಾರ್ಗದರ್ಶನ ಪೂಜಾರ ಆತ್ಮವಿಶ್ವಾಸ ಹೆಚ್ಚಿಸಿತು. ಆ ನಂತರವೇ ಅವರು ‘ಟೆಸ್ಟ್ ಪರಿಣತ’ ಬ್ಯಾಟ್ಸ್‌ಮನ್ ಆಗಿ ಬೆಳೆಯತೊಡಗಿದರು.

ಆದರೆ, ಇಂದಿನ ಕ್ರಿಕೆಟ್‌ ಭರಾಟೆಯಲ್ಲಿ ಎಲ್ಲ ಮೂರು ಮಾದರಿಗಳಲ್ಲೂ ಸಮಾನವಾಗಿ ಆಡುವವರು ಸ್ಟಾರ್ ಆಗಿ ಬೆಳೆಯುತ್ತಾರೆ. ಈ ವಿಷಯದಲ್ಲಿ ಪೂಜಾರ ಇನ್ನೂ ಹಿಂದಿದ್ದಾರೆ. ಕೇವಲ ಐದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಟ್ವೆಂಟಿ–20 ಕ್ರಿಕೆಟ್‌ಗೆ ಇನ್ನೂ ಪದಾರ್ಪಣೆಯನ್ನೇ ಮಾಡಿಲ್ಲ. ಆದ್ದರಿಂದ ‘ಮಿಲಿಯನ್ ಡಾಲರ್‌ ಬೇಬಿ’ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯ ಫ್ರ್ಯಾಂಚೈಸಿಗಳ ಗಮನವನ್ನೂ ಸೆಳೆದಿಲ್ಲ. ಆದರೆ ಇದ್ಯಾವುದಕ್ಕೂ ಅವರು ತಲೆಕೆಡಿಸಿಕೊಂಡಿಲ್ಲ. ಟೆಸ್ಟ್‌ ಗಳಲ್ಲಿ ಆಡುತ್ತಾರೆ. ಉಳಿದ ಸಮಯದಲ್ಲಿ ರಣಜಿ, ದುಲೀಪ್ ಟ್ರೋಫಿ, ಇಂಗ್ಲಿಷ್ ಕೌಂಟಿಯಲ್ಲಿ ಆಡುತ್ತ ’ವಿಂಟೇಜ್ ಕ್ರಿಕೆಟ್‌’ ಮಜಾ ಸವಿಯುತ್ತಾರೆ. ಪುಟ್ಟ ಮಗಳೊಂದಿಗೆ ಆಟವಾಡುತ್ತ ಕಾಲ ಕಳೆಯುತ್ತಾರೆ. ಕಟ್ಟಾ ದೈವಭಕ್ತರಾಗಿರುವ ಚಿಂಟೂ ಕ್ರಿಕೆಟ್‌ ಕಿಟ್‌ನಲ್ಲಿ ಯಾವಾಗಲೂ ದೇವರ ಚಿತ್ರ, ಪೂಜಾ ಸಾಮಗ್ರಿಗಳು ಇರುತ್ತವೆ. ಆವರ ಆಟದಲ್ಲಿ ಕಾಣುವ ಏಕಾಗ್ರತೆ, ಆತ್ಮವಿಶ್ವಾಸದ ಹಿಂದೆ ಶಿಸ್ತಿನ ಜೀವನದ ಗುಟ್ಟು ಇದೆ. ರಾಹುಲ್ ಅವರಲ್ಲಿರುವ ಎಲ್ಲ ಗುಣಗಳೂ ಇವರಲ್ಲಿ ಇವೆ. ಆದರೆ, ಚಿನ್ನಸ್ವಾಮಿ ಅಂಗಳದ ‘ಗೋಡೆ’ಯನ್ನು ಮೀರಿ ಬೆಳೆಯುತ್ತಾರಾ? ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT