ಬೆಂಗಳೂರು: ಮಿಂಚಿನ ಬ್ಯಾಟಿಂಗ್ ಮಾಡಿದ ಎಲ್.ಆರ್. ಚೇತನ್ ಅವರಿಂದಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಎದುರು ಜಯಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 56 ರನ್‌ಗಳಿಂದ ಜಯಿಸಿದ ಬೆಂಗಳೂರು ತಂಡವು ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಒಟ್ಟು ಏಳು ಪಂದ್ಯಗಳನ್ನು ಆಡಿರುವ ತಂಡವು ಐದರಲ್ಲಿ ಜಯಿಸಿದೆ. 2ರಲ್ಲಿ ಸೋತಿದೆ.
ಟಾಸ್ ಗೆದ್ದ ಮೈಸೂರು ವಾರಿಯರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಬೌಲರ್ ಸಿ.ಎ. ಕಾರ್ತಿಕ್ (33ಕ್ಕೆ3) ಮತ್ತು ಅನುಭವಿ ಸ್ಪಿನ್ನರ್ ಕೆ. ಗೌತಮ್ (27ಕ್ಕೆ2) ಉತ್ತಮ ಬೌಲಿಂಗ್ ಮಾಡಿದರು. ಆದರೆ ಅವರ ಪ್ರಯತ್ನಕ್ಕೆ ಚೇತನ್ (88; 53ಎ) ಅಡ್ಡಿಯಾದರು. 9 ಬೌಂಡರಿ, 5 ಸಿಕ್ಸರ್ ಸಿಡಿಸಿದ ಚೇತನ್ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಿಂದ ಪಾರು ಮಾಡಿದರು.
ನಿಶ್ಚಲ್ ಮತ್ತು ನಿರಂಜನ್ ನಾಯಕ ಅವರು ವೈಫಲ್ಯ ಅನುಭವಿಸಿದರು. ಚೇತನ್ ಅವರಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶಿವಕುಮಾರ್ ರಕ್ಷಿತ್ (29; 28ಎ) ಮತ್ತು ಸೂರಜ್ ಅಹುಜಾ (32; 16ಎ) ಅವರು ಉತ್ತಮ ಜೊತೆ ನೀಡಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 189 ರನ್ ಗಳಿಸಲು ಸಾಧ್ಯವಾಯಿತು.
ಗುರಿ ಬೆನ್ನಟ್ಟಿದ ಮೈಸೂರು ತಂಡವನ್ನು 133 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಶುಭಾಂಗ್ (28ಕ್ಕೆ3) ಮತ್ತು ಕ್ರಾಂತಿ ಕುಮಾರ್ (18ಕ್ಕೆ3) ಯಶಸ್ವಿಯಾದರು. ನಾಯಕ ಕರುಣ್ (13 ರನ್)ಮತ್ತು ಸಮಿತ್ ದ್ರಾವಿಡ್ (5 ರನ್) ಅವರೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಸಂಕ್ಷಿಪ್ತ ಸ್ಕೋರು: ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 189 (ಎಲ್.ಆರ್. ಚೇತನ್ 88, ಶಿವಕುಮಾರ್ ರಕ್ಷಿತ್ 29, ಸೂರಜ್ ಅಹುಜಾ 32, ಸಿ.ಎ. ಕಾರ್ತಿಕ್ 33ಕ್ಕೆ3, ಕೆ. ಗೌತಮ್ 27ಕ್ಕೆ2) ಮೈಸೂರು ವಾರಿಯರ್ಸ್: 17.5 ಓವರ್‌ಗಳಲ್ಲಿ 133 (ಎಸ್.ಯು. ಕಾರ್ತಿಕ್ 26, ಹರ್ಷಿಲ್ ಧರ್ಮಾನಿ 20, ಸುಮಿತ್ ಕುಮಾರ್ ಔಟಾಗದೆ 18, ಜೆ. ಸುಚಿತ್ 16, ಲವಿಶ್ ಕೌಶಲ್ 10ಕ್ಕೆ2, ಶುಭಾಂಗ್ ಹೆಗಡೆ 28ಕ್ಕೆ3, ಕ್ರಾಂತಿಕುಮಾರ್ 18ಕ್ಕೆ3, ಅನಿರುದ್ಧ ಜೋಶಿ 10ಕ್ಕೆ2) ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ 56 ರನ್‌ಗಳ ಜಯ. ಪಂದ್ಯದ ಆಟಗಾರ: ಎಲ್.ಆರ್. ಚೇತನ್.
ಇಂದಿನ ಪಂದ್ಯಗಳು
ಮಂಗಳೂರು ಡ್ರ್ಯಾಗನ್ಸ್–ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3)
ಬೆಂಗಳೂರು ಬ್ಲಾಸ್ಟರ್ಸ್–ಗುಲ್ಬರ್ಗ ಮಿಸ್ಟಿಕ್ಸ್ (ರಾತ್ರಿ 7)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.