ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಶಿವಕುಮಾರ್‌ ಶತಕ, ಕರ್ನಾಟಕಕ್ಕೆ ಭರ್ಜರಿ ಜಯ

Last Updated 8 ಜನವರಿ 2020, 12:39 IST
ಅಕ್ಷರ ಗಾತ್ರ

ಬೆಳಗಾವಿ: ಶಿವಕುಮಾರ್‌ ಬಿ.ಯು. ಶತಕ (111; 145ಎ, 15ಬೌಂ) ಮತ್ತು ಎನ್‌. ಜಯೇಶ್‌ ಅರ್ಧಶತಕದ (ಔಟಾಗದೇ 57; 122ಎ, 5ಬೌಂ) ಬಲದಿಂದ ಕರ್ನಾಟಕ ತಂಡವು 23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಂಧ್ರ ವಿರುದ್ಧ ಗೆಲುವಿನ ‘ಕುಂದಾ’ ಸವಿಯಿತು.

‌ಇಲ್ಲಿನ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕೊನೆಯ ಹಾಗೂ 4ನೇ ದಿನದಾಟದಲ್ಲಿ ರಾಜ್ಯ ತಂಡ ಬೌಲಿಂಗ್‌ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಮಿಂಚಿತು. ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಕರ್ನಾಟಕ, ದ್ವಿತೀಯ ಇನಿಂಗ್ಸ್‌ನಲ್ಲಿ ಪುಟಿದೆದ್ದು 7 ವಿಕೆಟ್‌ಗಳಿಂದ ಜಯ ಗಳಿಸುವುದರೊಂದಿಗೆ 6 ಅಂಕಗಳನ್ನು ತನ್ನದಾಗಿಸಿಕೊಂಡಿತು. 60.5 ಓವರ್‌ಗಳಲ್ಲಿ 247 ರನ್‌ ಕಲೆ ಹಾಕಿ ಸಾಧನೆ ತೋರಿತು.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಕುಂದಾನಗರಿಯ ಪ್ರತಿಭೆ, ಉಪನಾಯಕನೂ ಆಗಿರುವ ಸುಜಯ್‌ ಸಾತೇರಿ 23 ಎಸೆತಗಳಲ್ಲಿ ಔಟಾಗದೇ 39 ರನ್‌ ಗಳಿಸಿ ಮಿಂಚಿದರು. 4 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಮಂಗಳವಾರದ ಅಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 174 ರನ್‌ ಕಲೆ ಹಾಕಿದ್ದ ಪ್ರವಾಸಿ ತಂಡವನ್ನು ಬುಧವಾರ ವಿಜಯಕುಮಾರ್‌ ವೈಶಾಖ್‌ ಕಾಡಿದರು. ಗಿರಿನಾಥ್‌ ರೆಡ್ಡಿ ಹಾಗೂ ಯು. ವರ್ಮಾ ವಿಕೆಟ್‌ ಕೆಡವಿ ರನ್‌ ಗಳಿಕೆಯ ವೇಗಕ್ಕೆ ಕಡಿವಾಣ ಹಾಕಿದರು. 5 ವಿಕೆಟ್‌ ಪಡೆದಿದ್ದ ಕಿಶನ್‌ ಎಸ್.ಬೇದರೆ ಮತ್ತೊಂದು ವಿಕೆಟ್‌ ಕಬಳಿಸಿ ಮಿಂಚಿದರು. ಪರಿಣಾಮ, ಆಂಧ್ರ 87.5 ಓವರ್‌ಗಳಲ್ಲಿ 228 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.

241 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಲುವನೀತ್‌ ಸಿಸೋಡಿಯಾ ನೇತೃತ್ವದ ರಾಜ್ಯ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿವಕುಮಾರ್‌ ಮತ್ತು ಅಂಕಿತ್ ಉಡುಪ ಭರವಸೆ ತುಂಬಿದರು. ಅಂಕಿತ್ ಬಳಿಕ ಶಿವಕುಮಾರ್‌ಗೆ ಜೊತೆಯಾದ ಜಯೇಶ್‌ ಜವಾಬ್ದಾರಿಯುತ ಆಟವಾಡಿದರು. ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಶಿವಮೊಗ್ಗದಲ್ಲಿ ಈಚೆಗೆ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಇನಿಂಗ್ಸ್‌ ಮತ್ತು 66 ರನ್‌ಗಳ ಗೆಲುವು ಸಾಧಿಸಿದ್ದ ಕರ್ನಾಟಕ, ಬಳಿಕ ಗುಜರಾತ್ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು. ‘ಎ’ ಗುಂಪಿನ ಅಂಕಪಟ್ಟಿಯಲ್ಲಿ 8 ಅಂಕಗಳನ್ನು ಗಳಿಸಿತ್ತು. ಮುಂದಿನ ಪಂದ್ಯಗಳಲ್ಲಿ ಕರ್ನಾಟಕವು ಕ್ರಮವಾಗಿ ಪಂಜಾಬ್‌, ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ತಾನ ತಂಡಗಳ ಎದುರು ಸೆಣೆಸಲಿದೆ.

ಈ ಬಾರಿಯ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಪರಾಭವ ಕಂಡಿರುವ ಆಂಧ್ರ, ಅಂಕಗಳ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಸಂಕ್ಷಿಪ್ತ ಸ್ಕೋರು: ಆಂಧ್ರ ಮೊದಲ ಇನಿಂಗ್ಸ್ 281 ಹಾಗೂ ದ್ವಿತೀಯ ಇನಿಂಗ್ಸ್ 228 (ಗಿರಿನಾಥ್‌ ರೆಡ್ಡಿ 48, ಯು. ವರ್ಮಾ 30, ವೇಣು ವಿನುಕೊಂಡ ಔಟಾಗದೇ 19; ಕಿಶನ್ ಎಸ್. ಬೆದರೆ 64ಕ್ಕೆ 6, ವೈಶಾಕ್ ವಿಜಯಕುಮಾರ್‌ 45ಕ್ಕೆ 3, ಅಭಿಲಾಷ್ ಶೆಟ್ಟಿ 55ಕ್ಕೆ 1). ಕರ್ನಾಟಕ ಮೊದಲ ಇನಿಂಗ್ಸ್ 268 ಹಾಗೂ ದ್ವಿತೀಯ ಇನಿಂಗ್ಸ್‌ 3 ವಿಕೆಟ್ ನಷ್ಟಕ್ಕೆ 60.5 ಓವರ್‌ಗಳಲ್ಲಿ 247 (ಶಿವಕುಮಾರ್‌ ಬಿ.ಯು. 111, ಅಂಕಿತ್ ಉಡುಪ 24, ಎನ್. ಜಯೇಶ್ ಔಟಾಗದೆ 57, ಸುಜಯ್‌ ಸಾತೇರಿ ಔಟಾಗದೆ 39; ಎ. ಪ್ರಣಯ್‌ಕುಮಾರ್‌ 30ಕ್ಕೆ 2, ಕೆ. ಮಹೀಪ್‌ಕುಮಾರ್‌ 16ಕ್ಕ 1).

ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್‌ಗಳಿಂದ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT