ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಟ್‌ ರೈಡರ್ಸ್‌ ತಂಡದ ಪ್ಲೇ ಆಫ್ ಆಸೆ ಜೀವಂತ

ದಿನೇಶ್ ಕಾರ್ತಿಕ್ ಬಳಗದ ಪ್ಲೇ ಆಫ್ ಕನಸು ಜೀವಂತ; ಕಿಂಗ್ಸ್‌ ಇಲೆವನ್‌ಗೆ ನಿರಾಸೆ
Last Updated 3 ಮೇ 2019, 20:33 IST
ಅಕ್ಷರ ಗಾತ್ರ

ಮೊಹಾಲಿ: ಯುವ ಆಟಗಾರ ಶುಭಮನ್ ಗಿಲ್ (ಅಜೇಯ 65; 49 ಎಸೆತ, 2 ಸಿಕ್ಸರ್‌, 5 ಬೌಂಡರಿ) ಮತ್ತು ಆಸ್ಟ್ರೇಲಿಯಾದ ಕ್ರಿಸ್ ಲಿನ್ (46; 22 ಎ, 3 ಸಿ, 5 ಬೌಂ) ಜೋಡಿಯ ಅಮೋಘ ಜೊತೆಯಾಟ ಕೋಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ ಸುಲಭ ಗೆಲುವು ಗಳಿಸಿಕೊಟ್ಟಿತು.

ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬಳಗದವರು ಆತಿಥೇಯ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದರು. ಇದರೊಂದಿಗೆ ನೈಟ್‌ ರೈಡರ್ಸ್‌ನ ಪ್ಲೇ ಆಫ್ ಕನಸು ಜೀವಂತವಾಗಿ ಉಳಿಯಿತು.

184 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನೈಟ್‌ ರೈಡರ್ಸ್‌ಗೆ ಗಿಲ್ ಮತ್ತು ಲಿನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ ಇವರಿಬ್ಬರು 36 ಎಸೆತಗಳಲ್ಲಿ 62 ರನ್‌ಗಳನ್ನು ಜೋಡಿಸಿದರು. ಲಿನ್ ಔಟಾದ ನಂತರವೂ ಗಿಲ್‌ ಆಟ ಮುಂದುವರಿಯಿತು. ರಾಬಿನ್ ಉತ್ತಪ್ಪ, ಆ್ಯಂಡ್ರೆ ರಸೆಲ್ ಮತ್ತು ದಿನೇಶ್ ಕಾರ್ತಿಕ್ ಅವರ ಜೊತೆಗೂಡಿ ಅವರು ತಂಡದ ಗೆಲುವು ಸುಲಭ ಮಾಡಿದರು.

ಕರನ್‌ ಮಿಂಚಿನಾಟ: ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್‌ ತಂಡ ಸ್ಯಾಮ್ ಕರನ್ ಮತ್ತು ನಿಕೊಲಸ್ ಪೂರನ್ ಅವರ ಬ್ಯಾಟಿಂಗ್ ಬಲದಿಂದ ಹೋರಾಟದ ಮೊತ್ತ ಪೇರಿಸಿತು.

ತಂಡವು ಮೂರನೇ ಓವರ್‌ನಲ್ಲಿಯೇ ಕೆ.ಎಲ್. ರಾಹುಲ್ ಅವರ ವಿಕೆಟ್‌ ಕಳೆದುಕೊಂಡಿತು. ಸಂದೀಪ್ ವಾರಿಯರ್ ಎಸೆತದಲ್ಲಿ ರಾಹುಲ್ ಅವರು ಕ್ರಿಸ್‌ ಲಿನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಐದನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಕೂಡ ಔಟಾದರು.

ಈ ಹಂತದಲ್ಲಿ ಒಂದಾದ ಕರ್ನಾಟಕದ ಮಯಂಕ್ ಅಗರವಾಲ್ (36; 26ಎ, 2ಬೌಂ, 1ಸಿ) ಮತ್ತು ವೆಸ್ಟ್‌ ಇಂಡೀಸ್‌ನ ನಿಕೊಲಸ್ ಪೂರನ್ (48; 27ಎ, 3ಬೌಂ, 4 ಸಿ) ಮೂರನೇ ವಿಕೆಟ್‌ಗೆ 69 ರನ್‌ ಸೇರಿಸಿದರು. ಪೂರನ್ ಔಟಾದ ನಂತರ ಮನದೀಪ್ ಸಿಂಗ್ ಉತ್ತಮ ಕಾಣಿಕೆ ನೀಡಿದರು. ಮಯಂಕ್ ವಿಕೆಟ್ ಕಳೆದುಕೊಂಡ ಮೇಲೆ ಬಂದ ಸ್ಯಾಮ್ ಕರನ್ ಸ್ಫೋಟಕ ಬ್ಯಾಟಿಂಗ್ ಮಾಡಿ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT