ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣ: ದಿಗ್ಗಜ ಕ್ರಿಕೆಟಿಗರ ಹೆಸರಿಡಲು CM ಸಿದ್ದರಾಮಯ್ಯ ಮನವಿ

Published 8 ಏಪ್ರಿಲ್ 2024, 16:08 IST
Last Updated 8 ಏಪ್ರಿಲ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಮತ್ತು ಬಿ.ಎಸ್. ಚಂದ್ರಶೇಖರ್ ಅವರ ಹೆಸರುಗಳನ್ನು ಇಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಸೋಮವಾರ ಪತ್ರ ಬರೆದಿರುವ ಸಿದ್ಧರಾಮಯ್ಯ,
ಈ ವಿಷಯದ ಕುರಿತು ಲೇಖಕ ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಅವರು ಮಾರ್ಚ್ 29ರಂದು ತಮಗೆ ಬರೆದಿದ್ದ ಪತ್ರದ ಕುರಿತು ಉಲ್ಲೇಖಿಸಿದ್ದಾರೆ.

‘ರಾಮಚಂದ್ರ ಗುಹಾ ಅವರು ಮಾಡಿರುವ ಮನವಿಯಲ್ಲಿ ಶ್ರೇಷ್ಠ ಅಂಶಗಳಿವೆ. ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಹಾಗೂ ಬಿ.ಎಸ್‌. ಚಂದ್ರಶೇಖರ್ ಅವರ ಹೆಸರುಗಳನ್ನು ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಬೇಕೆಂದು ಮನವಿ ಮಾಡುತ್ತೇನೆ. ಇದರಿಂದ ಮುಂದಿನ ಪೀಳಿಗೆಯ ಆಟಗಾರರಿಗೆ ಪ್ರೇರಣೆ ಲಭಿಸುತ್ತದೆ’ ಎಂದು ಸಿದ್ಧರಾಮಯ್ಯ  ಉಲ್ಲೇಖಿಸಿದ್ದಾರೆ.

‘1974ರಲ್ಲಿ ಕರ್ನಾಟಕ ತಂಡವು ಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿತ್ತು. ಸತತ 15 ಬಾರಿ ರಣಜಿ ಚಾಂಪಿಯನ್ ಆಗಿದ್ದ ಮುಂಬೈ ತಂಡದ ಪಾರಮ್ಯಕ್ಕೆ ಕರ್ನಾಟಕ ತಡೆಯೊಡ್ಡಿದ್ದು ಐತಿಹಾಸಿಕ ಸಾಧನೆ. ಆ ವಿಜಯಕ್ಕೆ ಈಗ 50 ವರ್ಷಗಳು ತುಂಬಿರುವ ಸಂಭ್ರಮ.  ಶ್ರೇಷ್ಠ ಬ್ಯಾಟರ್ ವಿಶ್ವನಾಥ್, ಸ್ಪಿನ್ ಅವಳಿಗಳಾದ ಪ್ರಸನ್ನ ಮತ್ತು ಚಂದ್ರಶೇಖರ್ ರಾಜ್ಯ ಮತ್ತು ದೇಶದ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅಮೋಘವಾದದ್ದು. ಅವರ ಹೆಸರುಗಳನ್ನು ಸ್ಟ್ಯಾಂಡ್‌ಗಳಿಗೆ ಇಡಲು ಕ್ರಮ ಕೈಗೊಳ್ಳಬೇಕು’ ಎಂದು ಗುಹಾ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.

ಈಚೆಗೆ ಕೆಎಸ್‌ಎಲ್‌ಟಿಎನಲ್ಲಿ ನಡೆದಿದ್ದ 1974ರ ರಣಜಿ ಟ್ರೋಫಿ ವಿಜೇತ ತಂಡದ ಆಟಗಾರರನ್ನು ಸನ್ಮಾನಿಸುವ ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರೂ ತಮ್ಮ ವಿಡಿಯೊ ಸಂದೇಶದಲ್ಲಿ ಇದೇ ಮಾತನ್ನು ಹೇಳಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ರದ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ‘ಈ ವಿಷಯದ ಕುರಿತು ಪರಿಶೀಲಿಸಲಾಗುವುದು. ಪದಾಧಿಕಾರಿಗಳು, ಸದಸ್ಯರೊಂದಿಗೆ ಸಭೆಯಲ್ಲಿ ವಿಷಯ ಚರ್ಚೆಯಾಗಬೇಕು. ಸದ್ಯ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಆಯೋಜನೆಯಲ್ಲಿ ಎಲ್ಲರೂ ತೊಡಗಿಕೊಂಡಿದ್ದಾರೆ’ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯವು ಏ. 15ರಂದು ನಡೆಯಲಿದೆ.

ಕರ್ನಾಟಕ ಕ್ರಿಕೆಟ್‌ ಪ್ರೇಮಿಗಳ ಬೇಡಿಕೆ ಇದು: ಗುಹಾ

ರಾಮಚಂದ್ರ ಗುಹಾ

ರಾಮಚಂದ್ರ ಗುಹಾ

ಈ ಬೇಡಿಕೆಯು ನನ್ನೊಬ್ಬನದಷ್ಟೇ ಅಲ್ಲ. ಕರ್ನಾಟಕದ ಸಮಸ್ತ ಕ್ರಿಕೆಟ್ ಅಭಿಮಾನಿಗಳ ಬಹುದಿನಗಳ ಬೇಡಿಕೆ ಇದಾಗಿದೆ. ಮುಂಬೈನಲ್ಲಿ ಗಾವಸ್ಕರ್ ತೆಂಡೂಲ್ಕರ್ ದೆಹಲಿ್ಯಲ್ಲಿ ಮೊಹಿಂದರ್ ಅಮರನಾಥ್  ಸೆಹ್ವಾಗ್ ಬೇಡಿ ಕೋಲ್ಕತ್ತದಲ್ಲಿ ಗಂಗೂಲಿ ಅವರ ಹೆಸರಿನ ಸ್ಟ್ಯಾಂಡ್‌ಗಳಿವೆ. ಆದರೆ ಕರ್ನಾಟಕದಲ್ಲಿ ಈ ರೀತಿ ಮಾಡದಿರುವುದು ದುರದೃಷ್ಟಕರ. ಇದನ್ನೇ ಪತ್ರದಲ್ಲಿ ಬರೆದಿದ್ದೆ. ಇದಕ್ಕೆ ಸೂಕ್ತ ಸ್ಪಂದನೆ ನೀಡಿ ಕೆಎಸ್‌ಸಿಎಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳು.

ಕಳೆದ ವಾರ ಸುನಿಲ್ ಗಾವಸ್ಕರ್ ಅವರೂ  ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು.  ಕರ್ನಾಟಕವು ಮೊಟ್ಟಮೊದಲ ರಣಜಿ ಟ್ರೋಫಿ ಜಯಿಸಿ ಈಗ 50 ವರ್ಷ ತುಂಬಿದೆ. ಆದ್ದರಿಂದ ಮೊದಲಿಗೆ  ವಿಶ್ವನಾಥ್ ಪ್ರಸನ್ನ ಮತ್ತು ಚಂದ್ರಶೇಖರ್ ಅವರ ಹೆಸರುಗಳನ್ನು ಇಡಲು ಆದ್ಯತೆ ನೀಡಬೇಕು. ನಂತರದಲ್ಲಿ ಸೈಯದ್ ಕಿರ್ಮಾನಿ ಅನಿಲ್ ಕುಂಬ್ಳೆ ರಾಹುಲ್ ದ್ರಾವಿಡ್  ಭಾರತ ಮಹಿಳಾ ತಂಡದ ನಾಯಕಿಯಾಗಿದ್ದ ಶಾಂತಾ ರಂಗಸ್ವಾಮಿ ಅವರಂತಹ ಮಹನೀಯರ ಹೆಸರುಗಳನ್ನು ಸ್ಯ್ಯಾಂಡ್‌ಗಳಿಗೆ ಇಡಲು ಕ್ರಮ ವಹಿಸಬೇಕು ಎಂದು ರಾಮಚಂದ್ರ ಗುಹಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT