ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಮರಳಿ ಅರಳಿದ ಭುವಿ ಬೆಡಗು

Last Updated 30 ಮಾರ್ಚ್ 2021, 9:23 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಮೀರಠ್ ನಗರವೆಂದರೆ ’ಚೆಂಡುಗಳ ಊರು‘ ಎಂದೇ ಖ್ಯಾತಿ ಪಡೆದಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಳಕೆಯಾಗುವ ಎಸ್‌.ಜಿ. ಚೆಂಡಿನ ಕಾರ್ಖಾನೆ ಇರುವುದು ಇದೇ ಊರಲ್ಲಿ.ಅದರ ಪ್ರಭಾವವೋ ಏನೋ ಗೊತ್ತಿಲ್ಲ. ವಿಶ್ವದ ಗಮನ ಸೆಳೆಯುವ ಕ್ರಿಕೆಟ್ ಮಧ್ಯಮವೇಗಿಗಳೂ ಈ ಊರಿಂದ ಬರುತ್ತಿದ್ದಾರೆ.

ಅದರಲ್ಲಿ ಪ್ರಮುಖ ಹೆಸರುಗಳೆಂದರೆ ಪ್ರವೀಣಕುಮಾರ್ ಮತ್ತು ಭುವನೇಶ್ವರ್ ಕುಮಾರ್ ಅವರದ್ದು. ಗಾಯದ ಸಮಸ್ಯೆಯಿಂದಾಗಿ ಪ್ರವೀಣಕುಮಾರ್ ರಾಷ್ಟ್ರೀಯ ತಂಡದಿಂದ ದೂರವಾಗುತ್ತ ಹೋದಂತೆ ಅವರ ಸ್ಥಾನ ತುಂಬಿದವರು ಭುವಿ. ಅಷ್ಟೇ ಅಲ್ಲ. ಪ್ರವೀಣನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಪದೇ ಪದೇ ಕಾಡುವ ಗಾಯದ ಸಮಸ್ಯೆಯನ್ನು ಮೆಟ್ಟಿ ನಿಲ್ಲುತ್ತ, ತಂಡಕ್ಕೆ ಮರಳಿ ಬಂದಾಗಲೆಲ್ಲಾ ತಮ್ಮ ಸ್ವಿಂಗ್ ಕೌಶಲದ ಸೊಬಗು ತೋರಿಸುತ್ತಾರೆ. ಅದು ಯಾವುದೇ ಮಾದರಿಯಾಗಿರಲಿ, ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕುವತ್ತ ಚಿತ್ತ ನೆಟ್ಟಿರುತ್ತಾರೆ.

ಇದೀಗ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನೇ ನೋಡಿ. ಮೂರು ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವು ಒಟ್ಟು 910 ರನ್‌ಗಳನ್ನು ಗಳಿಸಿತು. ಅದರಲ್ಲಿ ಭುವಿ ಬೌಲಿಂಗ್‌ನಲ್ಲಿ ಗಳಿಸಿದ್ದು 135 ರನ್‌ಗಳನ್ನು ಮಾತ್ರ. ಈ ಸರಣಿಯಲ್ಲಿ 29 ಓವರ್‌ಗಳನ್ನು ಬೌಲಿಂಗ್ ಮಾಡಿದ್ದ ಭುವಿ, ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ. 22.50ರ ಸರಾಸರಿ ಹೊಂದಿದ್ದಾರೆ. ಇದೇನೂ ಕಡಿಮೆ ಸಾಧನೆಯಲ್ಲ. ಏಕೆಂದರೆ, ಈ ಸರಣಿಗೂ ಮುನ್ನ ಅವರು ಗಾಯದ ನೋವು ಅನುಭವಿಸಿದ್ದರು. ಯುಎಇಯಲ್ಲಿ ಐಪಿಎಲ್ ನಡೆದ ಸಂದರ್ಭದಲ್ಲಿ ಗಾಯಗೊಂಡು ಹೊರಬಿದ್ದಿದ್ದ ಅವರು ಅಸ್ಟ್ರೇಲಿಯಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಗಾಯದಿಂದ ಚೇತರಿಸಿಕೊಂಡ ನಂತರ ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದ್ದರು. ಆದರೂ ಅವರಿಗೆ ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಗೆ ಅವಕಾಶ ಲಭಿಸಿರಲಿಲ್ಲ. ಟಿ20 ಸರಣಿಗೆ ಮರಳಿದರು. ಐದು ಪಂದ್ಯಗಳಲ್ಲಿ ಗಳಿಸಿದ್ದು ನಾಲ್ಕೇ ವಿಕೆಟ್. ಆದರೂ ತಮ್ಮ ಲೈನ್ ಮತ್ತು ಲೆಂಗ್ತ್‌ ನಿರ್ವಹಿಸಿದ ಅವರಿಗೆ ಏಕದಿನ ಸರಣಿಯಲ್ಲಿಯೂ ಅವಕಾಶ ಸಿಕ್ಕಿತು. ಇಲ್ಲಿ ತಮ್ಮ ಆಫ್‌ಬ್ರೇಕ್, ಇನ್‌ಸ್ವಿಂಗರ್‌ಗಳ ವೈಭವನ್ನು ಮರಳಿ ತೋರಿಸಿದರು.

ಜೊತೆಗೆ ಎರಡು ಕಠಿಣ ಸ್ಪರ್ಧೆಗಳಲ್ಲಿಯೂ ಅವರು ಗೆದ್ದರು. ಒಂದು; ಏಕದಿನ ಕ್ರಿಕೆಟ್‌ ವಿಶ್ವಕಪ್ ವಿಜೇತ ಇಂಗ್ಲೆಂಡ್‌ ತಂಡದ ಸ್ಪೋಟಕ ಶೈಲಿಯ ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಗೆ ತಡೆಹಾಕಿದರು. ಎರಡನೆಯದಾಗಿ, ತಮ್ಮ ತಂಡದಲ್ಲಿಯೇ ಇರುವ ಪೈಪೋಟಿಯನ್ನು ಮೀರಿ ನಿಂತರು. ಆಸ್ಟ್ರೇಲಿಯಾದ ಐತಿಹಾಸಿಕ ಟೆಸ್ಟ್ ಪಂದ್ಯದ ಜಯದಲ್ಲಿ ಮಿಂಚಿದ್ದ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ಎದುರಿನ ಸರಣಿಯಲ್ಲಿಯೂ ಮಿಂಚಿದರು. ವಿಕೆಟ್‌ ಗಳಿಕೆಯ ಕೌಶಲವೇ ಭುವಿಗೆ ಪ್ರಮುಖ ಪೈಪೋಟಿಯಾಗಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಇವರಿಬ್ಬರ ಸಾಮರ್ಥ್ಯವನ್ನು ಹದವಾಗಿ ಬಳಸಿಕೊಂಡಿದ್ದು ತಂಡದ ಯಶಸ್ಸಿಗೆ ಕಾರಣವಾಯಿತು. ಹೊಸ ಚೆಂಡಿನಲ್ಲಿ ಮತ್ತು ಅಂತಿಮ ಘಟ್ಟದ ಓವರ್‌ಗಳಲ್ಲಿ ಭುವಿ ಕೈಚಳಕ ಮೆರೆದರು. ಮಧ್ಯಭಾಗದ ಓವರ್‌ಗಳಲ್ಲಿ ಪ್ರಮುಖ ಪಾಲುದಾರಿಕೆಗಳನ್ನು ಮುರಿಯುವಲ್ಲಿ ಶಾರ್ದೂಲ್ ಯಶಸ್ವಿಯಾಗಿದ್ದರು.

ಭುವಿ ಈ ಹಿಂದೆಯೂ ಹಲವು ಬಾರಿ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಮಧ್ಯಮವೇಗದ ಬೌಲರ್‌ಗಳಿಗೆ ಗಾಯದ ಸಮಸ್ಯೆ ಹೊಸದೇನಲ್ಲ. ಆದರೂ ತಂಡಕ್ಕೆ ಮರಳಿ ಬಂದಾಗಲೆಲ್ಲ ಹೊಸ ರೀತಿಯ ಪೈಪೋಟಿಯನ್ನೇ ಎದುರಿಸಿದ್ದಾರೆ. ಅದರ ನಡುವೆಯೂ ಪುಟಿದೆದ್ದು ನಿಂತಿದ್ದಾರೆ.

ಮೂರನೇ ಪಂದ್ಯದಲ್ಲಿ ಭುವಿ ಹಾಕಿದ ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಹೊಡೆದಿದ್ದ ಜೇಸನ್ ರಾಯ್ ವಿಕೆಟ್ ಎಗರಿಸಿದ ರೀತಿಯನ್ನು ಕ್ರಿಕೆಟ್‌ಪ್ರಿಯರು ಮರೆಯುವುದಿಲ್ಲ. ಆ ಓವರ್‌ನ ಕೊನೆಯ ಎಸೆತದಲ್ಲಿ ಆಫ್‌ಸ್ಟಂಪ್ ಎಗರಿಸುವ ಮುನ್ನ ಎಸೆತವು ಸಾಗಿದ ರೀತಿಯನ್ನು ಅಂದಾಜಿಸಲೂ ಜೇಸನ್‌ಗೆ ಸಾಧ್ಯವಾಗಿರಲಿಲ್ಲ. ತಮ್ಮ ನಂತರದ ಇನ್ನೊಂದು ಓವರ್‌ನಲ್ಲಿ ಜೋಸ್ ಬಟ್ಲರ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಎಸೆತವೂ ಭುವಿಯ ಉತ್ಕೃಷ್ಠತೆಯ ಪ್ರತೀಕವಾಗಿತ್ತು.

‘ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಲಯ ಕಂಡುಕೊಂಡಿದ್ದೇನೆ. ಈಗ ನನ್ನ ಗಮನ ಏನಿದ್ದರೂ ಟೆಸ್ಟ್ ಕ್ರಿಕೆಟ್‌ನತ್ತ. ದೀರ್ಘ ಮಾದರಿಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಇದೆ. ಅವಕಶ ಸಿಕ್ಕಾಗ ಸಾಮರ್ಥ್ಯ ಸಾಬೀತುಮಾಡುತ್ತೇನೆ. ನನ್ನ ಆಟದಿಂದ ತಂಡ ಗೆದ್ದರೆ ಅದರಿಂದ ಸಿಗುವ ಸಂತೃಪ್ತಿ ಅಮೂಲ್ಯ’ ಎಂದು ಭುವನೇಶ್ವರ್ ಹೇಳುತ್ತಾರೆ.

2012ರಲ್ಲಿ ಭಾರತಕ್ಕೆ ತಂಡಕ್ಕೆ ಕಾಲಿಟ್ಟಿರುವ ಭುವಿ, ಮೊಹಮ್ಮದ್ ಶಮಿ ಜೊತೆಗೂಡಿ ಭಾರತ ತಂಡಕ್ಕೆ ಹಲವು ಪಂದ್ಯಗಳಲ್ಲಿ ಜಯದ ಕಿರೀಟ ತೊಡಿಸಿದ್ದಾರೆ. ಜಸ್‌ಪ್ರೀತ್ ಬೂಮ್ರಾ ಸೇರ್ಪಡೆಯಾದ ಮೇಲಂತೂ ಈ ತ್ರಿವಳಿ ಮಧ್ಯಮವೇಗಿಗಳು ವಿಶ್ವದರ್ಜೆಯ ಎಲ್ಲ ಬ್ಯಾಟ್ಸ್‌ಮನ್‌ಗಳಿಗೂ ಸಿಂಹಸ್ವಪ್ನರಾಗಿದ್ದಾರೆ. ಮುಂದಿನ ಜೂನ್‌ನವರೆಗೂ ಇವರು ಫಿಟ್‌ ಆಗಿ ಉಳಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿಕೆಟ್‌ ಗಳಿಸುವಷ್ಟೇ ಮಹತ್ವದ್ದು ಡಾಟ್ ಬಾಲ್ ಪ್ರಯೋಗ. ಬಿಳಿ ಚೆಂಡು ಹಳೆಯದಾದಂತೆ ಸ್ವಿಂಗ್ ಮಾಡುವುದು ಕಷ್ಟ. ಆ ಸಂದರ್ಭದಲ್ಲಿ ನಿಧಾನಗತಿಯ ಕಟರ್‌ ಎಸೆತಗಳನ್ನು ಪ್ರಯೋಗಿಸುವ ಕಲೆಯನ್ನು ಭುವಿ ಕರಗತ ಮಾಡಿಕೊಂಡಿದ್ದರೆ. ಆದರೊಂದಿಗೆ ರಿವರ್ಸ್‌ ಸ್ವಿಂಗ್ ಮತ್ತು ಆಗಾಗ ಯಾರ್ಕರ್‌ಗಳನ್ನೂ ಪ್ರಯೋಗಿಸುತ್ತಾರೆ. ಹೊಡಿ ಬಡಿ ಆಟದ ಐಪಿಎಲ್‌ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿದ ಶ್ರೇಯ ಅವರದ್ದು. ಇಷ್ಟು ವರ್ಷಗಳಲ್ಲಿ ಅವರು ಸುಮಾರು 1,200 ಡಾಟ್ ಬಾಲ್ ಹಾಕಿದ್ದಾರೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿಯೂ ಒಟ್ಟು 37 ಎಸೆತಗಳನ್ನು ಡಾಟ್ ಮಾಡಿರುವುದು ಅವರ ಚಾಕಚಕ್ಯತೆಗೆ ಸಾಕ್ಷಿ.

ಭುವಿ ತಮ್ಮನ್ನು ಕೇವಲ ಬೌಲಿಂಗ್‌ಗೆ ಸೀಮಿತಗೊಳಿಸಿಕೊಂಡಿಲ್ಲ. ಬ್ಯಾಟಿಂಗ್‌ನಲ್ಲಿಯೂ ಒಂದಿಷ್ಟು ಅಮೂಲ್ಯ ಕೊಡುಗೆಗಳನ್ನೂ ನೀಡಿರುವ ಅವರು ಆಲ್‌ರೌಂಡರ್ ಯಾದಿಯಲ್ಲಿ ಹೆಜ್ಜೆ ಗುರುತು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಕೊರೊನಾ ಕಾಲಘಟ್ಟದ ಬಯೋಬಬಲ್ ವ್ಯವಸ್ಥೆಯಲ್ಲಿ ತಮ್ಮನ್ನು ಫಿಟ್‌ ಇಟ್ಟುಕೊಂಡು ಬೌಲಿಂಗ್‌ನಲ್ಲಿ ಹೆಚ್ಚು ದುಬಾರಿಯಾಗದೇ ವಿಕೆಟ್‌ ಗಳಿಸಿಕೊಳ್ಳುವ ಒತ್ತಡದಲ್ಲಿ ಬೌಲರ್‌ಗಳಿದ್ದಾರೆ. ಭುವಿಯಂತಹ ಅನುಭವಿ ಬೌಲರ್‌ಗಳಿಗೆ ಯುವಪೀಳಿಗೆಯ ಪೈಪೋಟಿಯು ಇದೆ. ಇದೆಲ್ಲವನ್ನೂ ಮೀರಿ ಸಾಧನೆ ಮಾಡಲು ಭುವಿ ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT