ಭಾನುವಾರ, ಡಿಸೆಂಬರ್ 15, 2019
25 °C
ಆತಿಥೇಯರಿಗೆ ಮತ್ತೊಂದು ಜಯದ ವಿಶ್ವಾಸ

ಕ್ರಿಕೆಟ್: ಕರ್ನಾಟಕ–ರಾಜಸ್ಥಾನ ಹಣಾಹಣಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮೊದಲ ಪಂದ್ಯದಲ್ಲಿ ಜಾರ್ಖಂಡ್ ಎದುರು ಗೆದ್ದು ವಿಶ್ವಾಸದಲ್ಲಿರುವ ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೆಟ್ ತಂಡ ಸೋಮವಾರ ಇಲ್ಲಿ ಆರಂಭವಾಗುವ ಕೂಚ್‌ ಬೆಹರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ರಾಜಸ್ಥಾನ ಎದುರು ಪೈಪೋಟಿ ನಡೆಸಲಿದೆ.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಹಿಂದಿನ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಶುಭಾಂಗ್‌ ಹೆಗ್ಡೆ, ವಿದ್ಯಾಧರ ಪಾಟೀಲ, ಎಂ. ವೆಂಕಟೇಶ, ಎಸ್‌.ಎಸ್‌.ಜಿ. ರೋಹಿತ್‌ ಚುರುಕಿನ ಬೌಲಿಂಗ್ ಮಾಡಿದ್ದರು. ಇದರಿಂದ ಜಾರ್ಖಂಡ್ ಮೊದಲ ಇನಿಂಗ್ಸ್‌ನಲ್ಲಿ 131 ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 106 ರನ್‌ಗಳಿಗೆ ಆಲೌಟ್‌ ಆಗಿತ್ತು.

ರಾಜ್ಯ ತಂಡದ ಕೆ.ವಿ. ಅನೀಶ್‌ ಜಾರ್ಖಂಡ್ ಎದುರು 171 ರನ್ ಗಳಿಸಿದ್ದರು. ಶುಭಾಂಗ್‌ ಮತ್ತು ಕೃತಿಕ್ ಕೃಷ್ಣ  ಉತ್ತಮ ಬ್ಯಾಟಿಂಗ್ ಮಾಡಿದ್ದರು. ಆದ್ದರಿಂದ ರಾಜ್ಯ ತಂಡದ ಬ್ಯಾಟಿಂಗ್ ವಿಭಾಗ ಇವರ ಮೇಲೆ ಅವಲಂಬಿತವಾಗಿದೆ.

ರಾಜಸ್ಥಾನ ತನ್ನ ಮೊದಲ ಪಂದ್ಯದಲ್ಲಿ ಹೈದರಾಬಾದ್‌ ಎದುರು ಇನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಹರಿಯಾಣ ತಂಡವನ್ನು ಮಣಿಸಿತ್ತು. ರಾಜಸ್ಥಾನ ಒಂಬತ್ತು, ಕರ್ನಾಟಕ ಏಳು ಅಂಕಗಳನ್ನು ಹೊಂದಿವೆ.

ಕರ್ನಾಟಕ ತಂಡ ಲೀಗ್ ಹಂತದಲ್ಲಿ ಎಂಟು ಪಂದ್ಯಗಳನ್ನು ಆಡಲಿದೆ. ಉಳಿದ ಪಂದ್ಯಗಳು ಕ್ರಮವಾಗಿ ಹೈದರಾಬಾದ್‌, ಬಂಗಾಳ, ಗುಜರಾತ್‌, ಪಂಜಾಬ್‌, ಹರಿಯಾಣ ಮತ್ತು ಮಧ್ಯಪ್ರದೇಶ ಎದುರು ಜರುಗಲಿವೆ.

‘ಕರ್ನಾಟಕ ಸೀನಿಯರ್‌ ತಂಡ ಮತ್ತು ಭಾರತ ತಂಡದಲ್ಲಿ ಅವಕಾಶ ಪಡೆಯಲು 19 ವರ್ಷದೊಳಗಿನವರ ಟೂರ್ನಿ ಉತ್ತಮ ವೇದಿಕೆಯಾಗಿದೆ. ಶಿವಮೊಗ್ಗದಲ್ಲಿ ನಮ್ಮ ತಂಡ ರಾಜಸ್ಥಾನ ಎದುರು ಅಭ್ಯಾಸ ಪಂದ್ಯವಾಡಿತ್ತು. ಆಗ ಆ ತಂಡದವರ ಶಕ್ತಿ ಹಾಗೂ ದೌರ್ಬಲ್ಯ ತಿಳಿದುಕೊಂಡಿದ್ದೇವೆ. 16 ವರ್ಷದ ಒಳಗಿನವರ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸ್ಮರಣ್‌ ತಂಡದಲ್ಲಿರುವುದರಿಂದ ಆತ್ಮವಿಶ್ವಾಸ ಹೆಚ್ಚಾಗಿದೆ’ ಎಂದು ಕರ್ನಾಟಕ ತಂಡದ ಕೋಚ್‌ ದೀಪಕ್‌ ಚೌಗಲೆ ಹೇಳಿದರು.

ಪಂದ್ಯ ಆರಂಭ: ಬೆಳಿಗ್ಗೆ 9.30.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು