ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುಷ್ಕೋನ ಕ್ರಿಕೆಟ್: ಫೈನಲ್‌ಗೆ ಭಾರತ ಬಿ –ಆಸ್ಟ್ರೇಲಿಯಾ ಎ

Last Updated 27 ಆಗಸ್ಟ್ 2018, 18:05 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಬಿ ಮತ್ತು ಆಸ್ಟ್ರೇಲಿಯಾ ತಂಡಗಳು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಸೋಮವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡವು 5 ವಿಕೆಟ್‌ಗಳಿಂದ ಭಾರತ ‘ಬಿ’ ತಂಡವನ್ನು ಸೋಲಿಸಿತು. ಒಟ್ಟು 12 ಪಾಯಿಂಟ್ಸ್‌ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಉಸ್ಮಾನ್ ಖ್ವಾಜಾ ( ಔಟಾಗದೆ 101; 93ಎಸೆತ, 10ಬೌಂಡರಿ,1ಸಿಕ್ಸರ್) ಅವರ ಶತಕ ಗಳಿಸಿ ತಂಡದ ಗೆಲುವಿನ ರೂವಾರಿಯಾದರು.

ಇದರಿಂದಾಗಿ ‘ಬಿ’ ತಂಡದ ನಾಯಕ ಮನೀಷ್ ಪಾಂಡೆ ಗಳಿಸಿದ್ದ (117; 109ಎಸೆತ, 7ಬೌಂಡರಿ, 3ಸಿಕ್ಸರ್) ಶತಕ ವ್ಯರ್ಥವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಿ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 276 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 24.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 132 ರನ್‌ ಗಳಿಸಿದ್ದಾಗ ಮಳೆ ಸುರಿಯಿತು.

ಸುಮಾರು 40 ನಿಮಿಷಗಳವರೆಗೆ ಆಟ ಸ್ಥಗಿತವಾಯಿತು. ಆದ್ದರಿಂದ ಡಕ್ವರ್ಥ್‌ ಲೂಯಿಸ್‌ ನಿಯಮದಡಿಯಲ್ಲಿ ಒಟ್ಟು 40 ಓವರ್‌ಗಳಲ್ಲಿ 248 ರನ್‌ ಗಳ ಗೆಲುವಿನ ಗುರಿಯನ್ನು ನಿಗದಿ ಮಾಡಲಾಯಿತು. ಆದರಲ್ಲಿ 16.4 ಓವರ್‌ಗಳಲ್ಲಿ 116 ರನ್‌ಗಳನ್ನು ಗಳಿಸಬೇಕಾಯಿತು. ಉಸ್ಮಾನ್ ಮತ್ತು ಜ್ಯಾಕ್ ವೈಲ್ಡ್‌ಮುತ್ (ಔಟಾಗದೆ 62; 42ಎಸೆತ, 5ಬೌಂಡರಿ, 3ಸಿಕ್ಸರ್) ಬೀಸಾಟವಾಡಿದರು. ಅಕ್ಷರಶಃ ಟ್ವೆಂಟಿ–20 ಕ್ರಿಕೆಟ್‌ ಮಾದರಿಯಲ್ಲಿ ಆಡಿದ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ ‘ಎ’ ತಂಡಕ್ಕೆ ಸೋಲು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಭಾರತ ಎ ತಂಡವನ್ನು 4 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ಎ ತಂಡವು ಸೋಲಿಸಿತು. ಫೈನಲ್‌ ಪ್ರವೇಶಿಸಲು ಭಾರತ ಎ ತಂಡಕ್ಕೆ ಗೆಲುವಿನ ಅವಶ್ಯಕತೆ ಇತ್ತು.

ಆದರೆ ಆದರೆ ಬೆಳಿಗ್ಗೆ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಬಳಗದ ವೇಗಿ ಡೇನ್ ಪ್ಯಾಟರ್ಸನ್‌ (19ಕ್ಕೆ5) ಶ್ರೇಯಸ್ ಅಯ್ಯರ್ ಬಳಗದ ಕನಸನ್ನು ಭಗ್ನಗೊಳಿಸಿದರು.

ಹಸಿರು ಗರಿಕೆಗಳು ತುಂಬಿರುವ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಪರದಾಡಿದ ಭಾರತ ಎ ತಂಡವು 37.3 ಓವರ್‌ಗಳಲ್ಲಿ 157 ರನ್‌ ಗಳಿಸಿ ಆಲೌಟ್ ಆಯಿತು.

ಹೋದ ಎರಡೂ ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್ ಚೆನ್ನಾಗಿರಲಿಲ್ಲ. ಈ ಸಲವೂ ಎದುರಾಳಿ ಬೌಲರ್‌ಗಳ ಸ್ವಿಂಗ್‌ ಅಸ್ತ್ರಗಳನ್ನು ಎದುರಿಸಿ ನಿಲ್ಲುವಲ್ಲಿ ವಿಫಲರಾದರು. ಇದರಿಂದಾಗಿ 76 ರನ್‌ಗಳಿಗೆ 6 ವಿಕೆಟ್‌ಗಳು ಪತನವಾಗಿದ್ದವು.

ಈ ಹಂತದಲ್ಲಿ ಜೊತೆಗೂಡಿದ ಸಂಜು ಸ್ಯಾಮ್ಸನ್ (36; 42ಎಸೆತ, 2ಬೌಂಡರಿ,) ಮತ್ತು ದೀಪಕ್ ಚಹಾರ್ (38; 42ಎ, 3ಬೌಂಡರಿ, 3 ಸಿಕ್ಸರ್) ಏಳನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಗಳಿಸಿದರು. ಇದರಿಂದಾಗ ತಂಡವು 157 ರನ್ ಗಳಿಸಲು ಸಾಧ್ಯವಾಯಿತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎ ಬಳಗವು 37.4 ಓವರ್‌ಗಳಲ್ಲಿ6 ವಿಕೆಟ್‌ಗಳಿಗೆ 159 ರನ್ ಗಳಿಸಿ ಗೆದ್ದಿತು.

ಸಂಕ್ಷಿಪ್ತ ಸ್ಕೋರ್:
ಭಾರತ ‘ಎ’: 37.3 ಓವರ್‌ಗಳಲ್ಲಿ 157 (ಅಂಬಟಿ ರಾಯುಡು 11, ನಿತೀಶ್ ರಾಣಾ 19, ಸಂಜು ಸ್ಯಾಮ್ಸನ್ 36, ದೀಪಕ್ ಚಹಾರ್ 38, ಡೇನ್ ಪ್ಯಾಟರ್ಸನ್ 19ಕ್ಕೆ5, ರಾಬರ್ಟ್ ಫ್ರೈಲಿಂಕ್ 36ಕ್ಕೆ2, ಸಿಸಾಂಡ ಮೇಗಲಾ 46ಕ್ಕೆ2),

ದಕ್ಷಿಣಆಫ್ರಿಕಾ ‘ಎ’: 37.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 (ಜಿಹಾನ್ ಕ್ಲೋಟ್ 24, ಪೀಟರ್ ಮಲಾನ್ 47, ಸೆರೆಲ್ ಎರ್ವಿ 20, ಡೇನ್ ಪ್ಯಾಟರ್ಸನ್ 12, ಸೆನುರನ್ ಮುತುಸಾಮಿ 16, ಫರ್ಹಾನ್ ಔಟಾಗದೆ 18, ಖಲೀಲ್ ಅಹಮದ್ 45ಕ್ಕೆ3, ಕೃಣಾಲ್ ಪಾಂಡ್ಯ 37ಕ್ಕೆ2),

ಫಲಿತಾಂಶ: ದಕ್ಷಿಣ ಆಫ್ರಿಕಾ ‘ಎ’ ತಂಡಕ್ಕೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT