ಗುರುವಾರ , ಫೆಬ್ರವರಿ 25, 2021
23 °C

ಕ್ರಿಕೆಟ್‌: ಜೆಂಟಲ್‌ಮನ್‌ ಆಟವಾಗಿ ಉಳಿದಿಲ್ಲವೇ?

ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಅದೊಂದು ಅಂಗವಿಕಲ ವಿದ್ಯಾರ್ಥಿಗಳ ಶಾಲೆ. ಅಲ್ಲಿದ್ದವರೆಲ್ಲಾ ಏಳೆಂಟು ವರ್ಷದ ಮಕ್ಕಳು. ಶಿಕ್ಷಕರು 100 ಮೀಟರ್‌ ಓಟದ ಸ್ಪರ್ಧೆ ಆಯೋಜಿಸುತ್ತಾರೆ. ಮಕ್ಕಳ ಓಟ ನೋಡಲು ಹೆತ್ತವರು ಬಂದಿರುತ್ತಾರೆ. ನಮ್ಮ ಮಗುವೇ ಗೆಲ್ಲುವುದು ನೋಡಿ ಎಂದು ಸವಾಲು ಹಾಕುತ್ತಿರುತ್ತಾರೆ. ಮೊದಲು ಬಂದವರಿಗೆ ಸಾವಿರ ರೂಪಾಯಿ ಎಂದು ಟೀಚರ್‌ ಪ್ರಕಟಿಸುತ್ತಾರೆ.

ಓಟ ಶುರು. ಊರುಗೋಲು ಸಹಾಯದಿಂದ ಮಕ್ಕಳು ಕುಂಟುತ್ತಾ ಓಡುತ್ತಾರೆ. ಗುರಿ ತಲುಪಲು ಸ್ವಲ್ಪ ದೂರವಿದ್ದಾಗ ಒಂದು ಮಗು ಎಡವಿ ಬಿದ್ದುಬಿಡುತ್ತದೆ. ಮುಂದೆ ಓಡುತ್ತಿದ್ದ ಮಕ್ಕಳೆಲ್ಲಾ ಓಟ ನಿಲ್ಲಿಸಿ ಆ ಮಗುವನ್ನು ಎತ್ತಲು ಮುಂದಾಗುತ್ತಾರೆ!

ಅಲ್ಲೊಂದು ಕ್ಷಣ ಮೌನ. ಕೆನ್ನೆಯ ಮೇಲೆ ಜಾರಿ ಬೀಳುತ್ತಿದ್ದ ಕಣ್ಣೀರನ್ನು ಪೋಷಕರು ಪರಸ್ಪರ ನೋಡಿಕೊಳ್ಳುತ್ತಾರೆ. ತಕ್ಷಣವೇ ಜೋರು ಚಪ್ಪಾಳೆ. ಅಂಗಳದೊಳಗೆ ನುಗ್ಗಿ ಮಕ್ಕಳನ್ನು ಮುದ್ದಾಡುತ್ತಾರೆ. ಶಿಕ್ಷಕರು ಎಲ್ಲಾ ಮಕ್ಕಳಿಗೂ ಬಹುಮಾನ ನೀಡುತ್ತಾರೆ.

***

ಅದು 1992ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯ. ಗೆಲ್ಲಲು ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ 2 ರನ್‌ ಬೇಕಿತ್ತು. ಬೌಲಿಂಗ್‌ ತುದಿಯಲ್ಲಿದ್ದ (ನಾನ್‌–ಸ್ಟ್ರೈಕ್‌) ಆ ತಂಡದ ಬ್ಯಾಟ್ಸ್‌ಮನ್‌ ಸಲೀಂ ಜಾಫರ್‌, ವೆಸ್ಟ್‌ಇಂಡೀಸ್‌ನ ವೇಗಿ ಕರ್ಟ್ನಿ ವಾಲ್ಷ್‌ ಬೌಲಿಂಗ್‌ ಮಾಡುವ ಮುನ್ನವೇ ಜಾಫರ್ ಕ್ರೀಸ್‌ ಬಿಟ್ಟು ಮುಂದೆ ಹೋಗಿದ್ದರು. ರನ್‌ ಔಟ್‌ ಮಾಡುವ ಅವಕಾಶವಿದ್ದರೂ ವಾಲ್ಷ್‌ ಸುಮ್ಮನಾದರು. ಬ್ಯಾಟಿಂಗ್‌ ಮಾಡುತ್ತಿದ್ದ ಅಬ್ದುಲ್‌ ಖಾದಿರ್‌ ಕೊನೆಯ ಎಸೆತದಲ್ಲಿ 2 ರನ್‌ ಗಳಿಸಿದರು. ಆ ವಿಶ್ವಕಪ್‌ನಲ್ಲಿ ಪಾಕ್‌ ಟ್ರೋಫಿ ಎತ್ತಿ ಹಿಡಿದಿದ್ದು ಬೇರೆ ಮಾತು. ಆದರೆ, ಹೀರೊ ಎನಿಸಿಕೊಂಡಿದ್ದು ವಾಲ್ಷ್‌.

***

ಮುಂಬೈನಲ್ಲಿ 1980ರಲ್ಲಿ ನಡೆದ ಟೆಸ್ಟ್‌ ಪಂದ್ಯವದು. ಇಂಗ್ಲೆಂಡ್‌ನ ಬಾಬ್‌ ಟೇಲರ್‌ ಔಟಾಗದಿದ್ದರೂ ಅಂಪೈರ್‌ ಹನುಮಂತರಾವ್‌ ಕೈ ಎತ್ತಿಬಿಡುತ್ತಾರೆ. ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟಿದ್ದ ಆ ಬ್ಯಾಟ್ಸ್‌ಮನ್‌ ಬಳಿ ತೆರಳುವ ನಮ್ಮವರೇ ಆದ ಜಿ.ಆರ್‌. ವಿಶ್ವನಾಥ್‌ ‘ನೀನು ಔಟ್‌ ಆಗಿಲ್ಲ. ಮತ್ತೆ ಆಡು’ ಎಂದುಬಿಡುತ್ತಾರೆ. ಕ್ರೀಡಾಂಗಣದಲ್ಲಿ ಆಗ ಗಪ್‌ಚುಪ್‌. ಆ ಪಂದ್ಯದಲ್ಲಿ ಭಾರತದವರು ಸೋಲುತ್ತಾರೆ. ಆದರೆ, ಜಿಆರ್‌ವಿ ಅಲಿಯಾಸ್‌ ಗುಂಡಪ್ಪ ವಿಶ್ವನಾಥ್‌ ಕ್ರೀಡಾಲೋಕದ ಹೃದಯ ಗೆಲ್ಲುತ್ತಾರೆ.

ಆ ಪಂದ್ಯದ ಫಲಿತಾಂಶ ಏನಾಯಿತು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ, ಜಿಆರ್‌ವಿ ಕ್ರೀಡಾ ಸ್ಫೂರ್ತಿ ಇಂದಿಗೂ ನೆನಪಿದೆ.

***

2009ರಲ್ಲಿ ಉತ್ತರ ಪ್ರದೇಶ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ರಣಜಿ ಫೈನಲ್‌ ಪಂದ್ಯವದು. ‘ಕ್ರಿಕೆಟ್‌ ದೇವರು’ ಎಂದೇ ಹೆಸರು ಮಾಡಿರುವ ಸಚಿನ್‌ ತೆಂಡೂಲ್ಕರ್‌ ಆ ಪಂದ್ಯದಲ್ಲಿ ಆಡುತ್ತಿದ್ದರು. ಬ್ಯಾಟಿಂಗ್‌ ಮಾಡುತ್ತಿದ್ದ ಎದುರಾಳಿಯ ಬ್ಯಾಟ್ಸ್‌ಮನ್‌ನ ಷೂ ಲೇಸ್‌ ಬಿಚ್ಚಿಹೋಯಿತು. ಸನಿಹದಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಮುಂಬೈ ಆಟಗಾರರತ್ತ ಆ ಬ್ಯಾಟ್ಸ್‌ಮನ್ ಸನ್ನೆ ಮಾಡಿ ಲೇಸ್‌ ಕಟ್ಟುವಂತೆ ಕೋರಿದರು. ಆದರೂ, ಯಾರೂ ಸಹಾಯಕ್ಕೆ ಮುಂದಾಗಲಿಲ್ಲ. ಆಗ ಮಿಡ್‌ಆನ್‌ನಿಂದ ಓಡೋಡಿ ಬಂದ ಸಚಿನ್‌ ಆ ಆಟಗಾರನ ಷೂ ಲೇಸ್‌ ಕಟ್ಟಿದರು. ಉಳಿದ ಆಟಗಾರರು ತಬ್ಬಿಬ್ಬಾದರು. ಆ ಬ್ಯಾಟ್ಸ್‌ಮನ್‌ ಆಗಷ್ಟೇ ರಣಜಿಗೆ ಪದಾರ್ಪಣೆ ಮಾಡಿದ್ದರು. ಆದರೆ, ಮೂರು ದಶಕಗಳಿಂದ ಕ್ರಿಕೆಟ್‌ ಆಡುತ್ತಾ ಶ್ರೇಷ್ಠ ಆಟಗಾರ ಎನಿಸಿದ್ದ ಸಚಿನ್‌ ಸಹಾಯಕ್ಕೆ ಮುಂದಾದರು. ದಟ್‌ ಇಸ್‌ ಸಚಿನ್‌!

***

ಮೇಲಿನ ಪ್ರಸಂಗಗಳಲ್ಲಿನ ಹೂರಣವನ್ನು ಏನೆಂದು ಹೆಸರಿಡಬಹುದು – ಕ್ರೀಡಾ ಸ್ಫೂರ್ತಿಯೋ? ಸ್ವಚ್ಛಂದ ಆಟವೋ? ಕ್ರೀಡಾ ಪ್ರೀತಿಯೋ? ಕ್ರೀಡಾ ಹಿರಿಮೆಯೋ? ಇಂಗ್ಲಿಷ್‌ನಲ್ಲಿ ಹೇಳುವಂತೆ ಫೇರ್‌ ಪ್ಲೇ ಇರಬಹುದಾ? ಆಟಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶವೋ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ರಣಜಿ ಸೆಮಿಫೈನಲ್‌ ಪಂದ್ಯದಲ್ಲಿ ಚೇತೇಶ್ವರ ಪೂಜಾರ ನಡವಳಿಕೆ ಕಂಡಾಗ ಮೇಲಿನ ಪ್ರಸಂಗಗಳು ನೆನಪಾದವು. ಪೂಜಾರ ಎರಡೂ ಇನಿಂಗ್ಸ್‌ಗಳಲ್ಲಿ ಔಟ್‌ ಆಗಿದ್ದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಅಂಗಳದಲ್ಲಿದ್ದ ಬೆರಳೆಣಿಕೆ ಪ್ರೇಕ್ಷಕರಿಗೂ ಅದು ಗೊತ್ತಾಗಿ ‘ಚೀಟರ್‌ ಚೀಟರ್‌’ ಎಂದು ಕೂಗಿದರು. ಆದರೆ, ಪ್ರತಿಭಾವಂತ ಆಟಗಾರ ಚೇತೇಶ್ವರ ಮಾತ್ರ ಆಟ ಮುಂದುವರಿಸಿದರು. ಅಂದು ಬೆಂಗಳೂರಿನಲ್ಲಿ ಜಿಆರ್‌ವಿ ಇದ್ದರೋ ಇಲ್ಲವೋ ಗೊತ್ತಿಲ್ಲ. ಎಲ್ಲೇ ಇದ್ದರೂ ವಿಷಯ ತಿಳಿದು ಖಂಡಿತ ನೊಂದುಕೊಂಡಿರುತ್ತಾರೆ.

ಈಗಿನ ಕಾಲದ ಆಟಗಾರರೇ ಹೀಗೆ. ಹಾರ್ದಿಕ್‌ ಪಾಂಡ್ಯ, ಕೆ.ಎಲ್‌. ರಾಹುಲ್‌ ಅವರಂಥವರೇ ತುಂಬಿಕೊಂಡಿದ್ದಾರೆ. ತಮ್ಮನ್ನು ಟೀಕಿಸಿದರೆಂದು ವಿರಾಟ್‌ ಕೊಹ್ಲಿ ಈಚೆಗೆ ಪ್ರೇಕ್ಷಕರ ವಿರುದ್ಧ ಗರಂ ಆಗಿದ್ದು ಗೊತ್ತೇ ಇದೆ. ‘ಬೇರೆ ದೇಶದ ಆಟಗಾರರನ್ನು ಪ್ರೀತಿಸುವುದಾದರೆ ಭಾರತದಲ್ಲಿ ಇರಬೇಡಿ’ ಎಂದು ಕ್ರಿಕೆಟ್ ಅಭಿಮಾನಿಗೆ ಎಚ್ಚರಿಕೆ ನೀಡಿದರು. ನಿಜ, ಕೊಹ್ಲಿ ದಾಖಲೆಗಳ ಮೇಲೆ ದಾಖಲೆಗಳ ಮಹಲ್ ಕಟ್ಟುತ್ತಿದ್ದಾರೆ. ಅವರೊಬ್ಬ ಪ್ರತಿಭಾವಂತ, ಆಕ್ರಮಣಕಾರಿ ಆಟಗಾರ. ಯಶಸ್ಸಿನ ಸಮುದ್ರದಲ್ಲಿ ತೇಲುತ್ತಿದ್ದಾರೆ. ಸಚಿನ್‌ ನಿರ್ಮಿಸಿದ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಅವರ ಎಲ್ಲಾ ದಾಖಲೆಯೂ ಅಳಿಸಿ ಹೋಗಬಹುದು. ಆದರೆ, ಸಚಿನ್‌ ವ್ಯಕ್ತಿತ್ವದ ಸರಿಸಮಾನಕ್ಕೆ ಕೊಹ್ಲಿ ನಿಲ್ಲರಾರರು.

ನಿಜ, ಔಟ್‌ ಆದೆ ಎಂದು ಎಲ್ಲರೂ ಕ್ರೀಸ್‌ ತೊರೆದು ಪೆವಿಲಿಯನ್‌ನತ್ತ ಹೆಜ್ಜೆ ಇಡುವ ಸೌಜನ್ಯ ಬೆಳೆಸಿಕೊಂಡರೆ ಅಂಪೈರ್‌ಗಳ ಅಗತ್ಯವೇ ಇರುತ್ತಿರಲಿಲ್ಲ. ಪೂಜಾರ ಕೂಡ ಅಂಪೈರ್‌ ತೀರ್ಪಿಗೆ ಕೆಲ ನಿಮಿಷ ಕಾದರು. ‘ಔಟ್‌ ಅಲ್ಲ’ ಎಂದು ಕೈಯಾಡಿಸಿದಾಗ ಆಟ ಮುಂದುವರಿಸಿದರು. ದೇಶಿ ಕ್ರಿಕೆಟ್‌ನಲ್ಲೂ ಅಂಪೈರ್‌ ತೀರ್ಪು ಪುನರ್‌ ಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್‌) ಇದ್ದಿದ್ದರೆ ಎಡವಟ್ಟು ತಪ್ಪಿಸಬಹುದಿತ್ತು. ಜೊತೆಗೆ ಗುಣಮಟ್ಟದ ಅಂಪೈರ್‌ಗಳನ್ನು ನಿಯೋಜಿಸುವುದು ಬಿಸಿಸಿಐ ಕರ್ತವ್ಯ.

ಪೂಜಾರ ಶತಕದ ನೆರವಿನಿಂದ ಸೌರಾಷ್ಟ್ರ ತಂಡ ಫೈನಲ್ ಪ್ರವೇಶಿಸಿದೆ. ಈ ಬಾರಿ ರಣಜಿ ಟ್ರೋಫಿಯನ್ನೂ ಅವರು ಗೆಲ್ಲಬಹುದು. ಆದರೆ, ಪೂಜಾರ ಮೇಲಿನ ಕಳಂಕ ಅಳಿಯದು. ಅಕಸ್ಮಾತ್‌ ಔಟ್‌ ಆಗಿರುವುದು ನಿಜವೆಂದು ನಡೆದು ಹೋಗಿದ್ದರೆ ಪೂಜಾರ ಎಲ್ಲರ ಹೃದಯದಲ್ಲಿ ಮನೆ ಮಾಡುತ್ತಿದ್ದರು. ವ್ಯತ್ಯಾಸ ಇಷ್ಟೇ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು