ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ ತಜ್ಞರ ನೇಮಿಸಲಿರುವ ಕ್ರಿಕೆಟ್‌ ಆಸ್ಟ್ರೇಲಿಯಾ

Last Updated 14 ಜುಲೈ 2020, 15:44 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಕ್ರಿಕೆಟ್‌ ಆಸ್ಟ್ರೇಲಿಯಾವು ತನ್ನ ಆಟಗಾರರ ಹಿತದೃಷ್ಟಿಯಿಂದ, ಮೊದಲ ಬಾರಿಗೆ ಮಾನಸಿಕ ಆರೋಗ್ಯ ತಜ್ಞರನ್ನು ನೇಮಿಸಲು ಮುಂದಾಗಿದೆ. ಹೋದ ವರ್ಷ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸೇರಿದಂತೆ ತಂಡದ ಮೂವರು ಆಟಗಾರರು, ಹೇಳಿಕೊಳ್ಳಲಾಗದ ಮಾನಸಿಕ ಸಮಸ್ಯೆಯ ಕಾರಣ ಕ್ರಿಕೆಟ್‌ನಿಂದ ವಿರಾಮ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ತಜ್ಞರ ನೇಮಿಸುವ ನಿರ್ಧಾರಕ್ಕೆ ಬಂದಿದೆ.

‘ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ’ ಪರಿಣತರ ಹುದ್ದೆಗಾಗಿ ಹೋದ ವಾರ ಸಿಎ ಜಾಹೀರಾತು ನೀಡಿತ್ತು. ಆಸಕ್ತರು ಮಂಡಳಿಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಅಲೆಕ್ಸ್‌ ಕೌಂಟೊರಿಸ್‌ ಅವರಲ್ಲಿ ವರದಿ ಮಾಡಿಕೊಳ್ಳಬೇಕೆಂದು ಹೇಳಿತ್ತು.

‘ಹೊಸದಾಗಿ ನೇಮಕಗೊಳ್ಳುವ ಪರಿಣತರು, ಆಟಗಾರರ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಮುತುವರ್ಜಿ ವಹಿಸಲಿದ್ದಾರೆ. ನಿರ್ದಿಷ್ಟವಾಗಿ ಇದೇ ಕಾರ್ಯಕ್ಕಾಗಿ ಅವರ ನೇಮಕ ನಡೆಯುತ್ತಿದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಹೈ ಪರ್ಫಾರ್ಮನ್ಸ್‌ ಮುಖ್ಯಸ್ಥ ಡ್ರೆವ್‌‌ ಗಿನ್‌ ಅವರು ಇಎಸ್‌ಪಿಎನ್‌ಕ್ರಿಕ್‌ಇನ್ಫೊಗೆ ತಿಳಿಸಿದ್ದಾರೆ.

ಸದ್ಯ ಮಂಡಳಿಯಲ್ಲಿ ಇಬ್ಬರು ಕ್ರೀಡಾ ಮನೋವೈದ್ಯರು ಕೆಲಸ ಮಾಡುತ್ತಿದ್ದಾರೆ. ಮೈಕೆಲ್‌ ಲಾಯ್ಡ್‌ ಅವರು ಪುರುಷರ ತಂಡ ಮತ್ತು ಪೀಟರ್ ಕ್ಲಾರ್ಕ್‌ ಅವರು ಮಹಿಳಾ ತಂಡದ ಹೊಣೆ ವಹಿಸಿಕೊಂಡಿದ್ದಾರೆ.

‘ಸಿಎ ಗುತ್ತಿಗೆ ಪಡೆದ ಆಟಗಾರರು ಇದರ ಅನುಕೂಲ ಪಡೆಯಲಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಇದೊಂದು ಉತ್ತಮ ಅವಕಾಶ. ಸದ್ಯ ತಂಡದಲ್ಲಿರುವ ಮನೋವೈದ್ಯರ ಜೊತೆಯಾಗಿ ಪರಿಣತರು ಕಾರ್ಯನಿರ್ವಹಿಸಲಿದ್ದಾರೆ’ ಎಂದು ಗಿನ್‌ ಹೇಳಿದರು.

ಮಾನಸಿಕ ಆರೋಗ್ಯ ತಜ್ಞರ ಪಾತ್ರ ಮೊದಲಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ. ಎಲೀಟ್‌ ಕ್ರಿಕೆಟ್‌ನ ಒತ್ತಡ, ಕೋವಿಡ್‌–19 ಪಿಡುಗಿನಂತಹ ಸಮಸ್ಯೆಗಳು ಆರೋಗ್ಯ ತಜ್ಞರ ಬೇಡಿಕೆಗೆ ಕಾರಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT