ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ –ಮಾಧ್ಯಮ ಜೊತೆಯಾಟದ ಓಟ!

ಆ್ಯಂಟೆನಾದಿಂದ ಆ್ಯಪ್‌ವರೆಗೆ..
Last Updated 9 ಜೂನ್ 2019, 19:30 IST
ಅಕ್ಷರ ಗಾತ್ರ

‘ಸುಪ್ರಸಿದ್ಧವಾದ ನಾಟಕ, ಸುಂದರವಾದ ಬ್ಯಾಲೆ ಡ್ಯಾನ್ಸ್‌, ಒಪೆರಾ ಮತ್ತು ನೃತ್ಯಗಳಲ್ಲಿರುವ ಮನರಂಜನೆಯ ಸಂಗಮದಂತೆ ಕ್ರಿಕೆಟ್‌ ಕಾಣುತ್ತದೆ’ ಎಂದು 60ರ ದಶಕದಲ್ಲಿ ಲೇಖಕ ಸಿ.ಎಲ್.ಆರ್. ಜೇಮ್ಸ್‌ ಹೇಳಿದ್ದ ಮಾತು ಈಗ ಅಕ್ಷರಶಃ ನಿಜವಾಗಿದೆ.

ಕ್ರಿಕೆಟ್‌ ಬೆಳೆದು ನಿಂತ ರೀತಿ ಅಭೂತಪೂರ್ವ. ಸಾವಿರಾರು ಕೋಟಿ ರೂಪಾಯಿಗಳ ಆದಾಯ–ವ್ಯಯಗಳ ಲೆಕ್ಕಾಚಾರವು ಬೇರೆಲ್ಲ ಕ್ರೀಡೆಗಳ ಅಭಿಮಾನಿಗಳೂ, ಆಟಗಾರರು ಹೊಟ್ಟೆಕಿಚ್ಚು ಪಡುವಷ್ಟಿದೆ. ಕ್ರಿಕೆಟ್‌ನ ಈ ಯಶಸ್ಸಿನ ಹಿಂದೆ ಮಾಧ್ಯಮಗಳ ಪಾತ್ರ ದೊಡ್ಡದು. ಒಂದಕ್ಕೊಂದು ಪೂರಕವಾಗಿ ಎರಡೂ ಕ್ಷೇತ್ರಗಳು ಬೆಳೆದ ಪರಿ ರೋಚಕ.

ಟೆಸ್ಟ್ ಕ್ರಿಕೆಟ್‌ ಆರಂಭವಾದ ಸಂದರ್ಭದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ನೆವಿಲ್ ಕಾರ್ಡಸ್‌ ಅವರಂತಹ ಶ್ರೇಷ್ಠ ಲೇಖಕರು ತಮ್ಮ ಕಾವ್ಯಾತ್ಮಕ ನಿರೂಪಣೆಯ ಮೂಲಕ ಕ್ರಿಕೆಟ್‌ನ ರೋಚಕತೆ, ರಸದೌತಣಗಳನ್ನು ಉಣಬಡಿಸುತ್ತಿದ್ದರು. ಅದರಲ್ಲೂ ಇಂಗ್ಲಿಷ್‌ ಕೌಂಟಿ ಕ್ರಿಕೆಟ್ ಟೂರ್ನಿಗಳು, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಪಂದ್ಯಗಳು ಮತ್ತು ಆ್ಯಷಸ್ ಟೆಸ್ಟ್ ಸರಣಿಗಳ ಬಗ್ಗೆ ಆಂಗ್ಲಭಾಷೆಯ ಬರಹಗಾರರ ಲೇಖನಗಳು ಜನಪ್ರಿಯವಾಗಿದ್ದವು.

ಸಚಿನ್ ತೆಂಡೂಲ್ಕರ್ ಅವರು ಆಡುತ್ತಿರುವ ಪಂದ್ಯವೊಂದನ್ನು ಅವರ ಬಾಲ್ಯದ ಕೋಚ್ ರಮಾಕಾಂತ್ ಆಚ್ರೆಕರ್‌ಟಿವಿಯಲ್ಲಿ ವೀಕ್ಷಿಸುತ್ತಿರುವುದು –ಎಎಫ್‌ಪಿ ಸಂಗ್ರಹ ಚಿತ್ರ
ಸಚಿನ್ ತೆಂಡೂಲ್ಕರ್ ಅವರು ಆಡುತ್ತಿರುವ ಪಂದ್ಯವೊಂದನ್ನು ಅವರ ಬಾಲ್ಯದ ಕೋಚ್ ರಮಾಕಾಂತ್ ಆಚ್ರೆಕರ್‌ಟಿವಿಯಲ್ಲಿ ವೀಕ್ಷಿಸುತ್ತಿರುವುದು –ಎಎಫ್‌ಪಿ ಸಂಗ್ರಹ ಚಿತ್ರ

ಅಷ್ಟ್ರೇ ಏಕೆ ರೇಡಿಯೊ ಕಾಮೆಂಟ್ರಿಯು 1922ರಿಂದಲೇ ಆರಂಭವಾಗಿತ್ತು ಎಂದು ಲೇಖಕ ಮಾರ್ಟಿನ್ ವಿಲಿಯಮ್ಸನ್‌ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಆ ವರ್ಷ ಎಸ್‌ ಸಿಜಿಯಲ್ಲಿ(ಸಿಡ್ನಿ) ನಡೆದಿದ್ದ ನ್ಯೂ ಸೌತ್‌ ವೇಲ್ಸ್‌ನ ಎರಡು ತಂಡಗಳ ನಡುವಣ ಪಂದ್ಯದ ಬಗ್ಗೆ ಮೊದಲ ಬಾರಿಗೆ ಕಾಮೆಂಟ್ರಿ ಮಾಡಲಾಗಿತ್ತು. ಹಿರಿಯ ಕ್ರಿಕೆಟಿಗರಾಗಿದ್ದ ಲೆನ್ ವ್ಯಾಟ್ ಅವರಿಗೆ ಮೈಕ್ ಕೊಟ್ಟು ‘ಪಂದ್ಯದ ಬಗ್ಗೆ ಮಾತಾಡ್ತಾ ಇರಿ’ ಎಂದು ಹೇಳಲಾಗಿತ್ತಂತೆ. ಅದನ್ನು ಬಿತ್ತರಿಸಲಾಗಿತ್ತು. ನಂತರವೂ ಬಾನುಲಿ ಕಾಮೆಂಟ್ರಿಯ ಹತ್ತಾರು ಪ್ರಯತ್ನಗಳನ್ನು ಅವರು ಪಟ್ಟಿ ಮಾಡುತ್ತಾರೆ.

1934ರಲ್ಲಿ ಮೊದಲ ಬಾರಿಗೆ ಬಿಬಿಸಿಯು ಟೆಸ್ಟ್‌ಗಳ ಸಂಪೂರ್ಣ ವೀಕ್ಷಕ ವಿವರಣೆ ನೀಡುವ ಕಾರ್ಯ ಆರಂಭಿಸಿತು. 1937ರಲ್ಲಿ ದ ಓವಲ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಮಹಿಳಾ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಮರ್ಜೋರಿ ಪೊಲ್ಲಾರ್ಡ್‌ ಕಾಮೆಂಟ್ರಿ ನೀಡಿದರು. ಮೊದಲ ಮಹಿಳಾ ವೀಕ್ಷಕ ವಿವರಣೆಗಾರ್ತಿಯಾದರು. ಆದರೆ, ಕ್ರಿಕೆಟ್‌ ಪ್ರಚಾರದ ಭರಾಟೆ ಆರಂಭವಾಗಿದ್ದು ಏಕದಿನ ಕ್ರಿಕೆಟ್‌ ಬಂದ ಮೇಲೆಯೇ.

1971ರಲ್ಲಿ ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣದ ಟೆಸ್ಟ್ ಪಂದ್ಯದ ಮೊದಲ ಮೂರು ದಿನಗಳು ಮಳೆಗೆ ಆಹುತಿಯಾಗಿದ್ದವು. ಆಗ 40 ಓವರ್‌ಗಳ ಪಂದ್ಯವನ್ನು ನಿಗದಿಪಡಿಸಲಾಯಿತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತು. ಆಗ ಅದು ಜನಾಕರ್ಷಣೆಯಾಗಿ ಬೆಳೆಯತೊಡಗಿತು. ನಿಯಮಿತ ಓವರ್‌ಗಳ ಪಂದ್ಯ ನೋಡಲು ಜನರು ಹಾತೊರೆದರು. ಅದಕ್ಕಾಗಿ ಟಿವಿ ಚಾನೆಲ್‌ಗಳು ಪ್ರಸಾರಕ್ಕಾಗಿ ಮುನ್ನುಗಿದ್ದವು. 1975 ರಲ್ಲಿ ಏಕದಿನ ಕ್ರಿಕೆಟ್ ಮಾದರಿಯ ವಿಶ್ವಕಪ್ ಟೂರ್ನಿ ಆಯೋಜಿಸಲಾಯಿತು. ಪ್ರಮುಖ ತಂಡಗಳ ಹಣಾಹಣಿಯ ವೀಕ್ಷಣೆಗೆ ಭಾರೀ ಇಂಬು ದೊರೆಯಿತು.

ಆದರೆ, ಕ್ರಿಕೆಟ್ ಮತ್ತು ಮಾಧ್ಯಮಗಳೆರಡನ್ನೂ ಗಟ್ಟಿಯಾಗಿ ಬೆಸೆದು ಒಂದು ಬೃಹತ್ ವಾಣಿಜ್ಯ ಲೋಕವನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದು 1983ರ ವಿಶ್ವಕಪ್ ಟೂರ್ನಿ. ಆ ವರ್ಷ ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿದ್ದ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಭಾರತಕ್ಕೆ ಬಣ್ಣದ ಟಿವಿ ಕಾಲಿಟ್ಟು ಆಗಿನ್ನೂ ವರ್ಷ ಕಳೆದಿತ್ತು ಅಷ್ಟೇ. ಯಾರ ಮನೆಯ ಚಾವಣಿಯ ಮೇಲೆ ಅ್ಯಂಟೆನಾ ಕಾಣುತ್ತದೋ ಆ ಮನೆಯಲ್ಲಿ ಟಿವಿ ಇದೇ ಎಂದರ್ಥ. ಆ ಅ್ಯಂಟೇನಾಗೆ ಪುಟ್ಟ ಡಬ್ಬವೊಂದು ಅಳವಡಿಕೆಯಾಗಿದ್ದರೆ ಅದು ಕಲರ್ ಟಿವಿ ಎಂದರ್ಥ. ಕಪಿಲ್‌ದೇವ್ ಆಲ್‌ರೌಂಡ್ ಆಟದ ಮೂಲಕ ಭಾರತ ಫೈನಲ್ ತಲುಪಿದಾಗಲೇ ಆ್ಯಂಟೇನಾ ಇದ್ದ ಮನೆಯ ಬಾಗಿಲು ಬಡಿಯುವ ಪರಿಪಾಠ ಆರಂಭವಾಗಿತ್ತು. ಪರಿಚಯದ ಮುಖಗಳು, ಸಹೃದಯರು ಇದ್ದರೆ ಕರೆದು ಚಾಪೆ ಹಾಸಿ ಮಕ್ಕಳು, ಯುವಕರನ್ನು ಕೂರಿಸುತ್ತಿದ್ದರು. ಯಾರ ಕಾಟವೂ ಬೇಡ ಎಂದು ಮುಂಬಾಗಿಲಿಗೆ ಬೀಗ ಹಾಕಿ, ಹಿಂಬಾಗಿಲಿನಿಂದ ಮನೆ ಸೇರಿ ಪಂದ್ಯ ವೀಕ್ಷಿಸಿದವರೂ ಇದ್ದರು.

ಮಹೇಂದ್ರಸಿಂಗ್ ಧೋನಿಗೆ ಅಭಿಮಾನಿಯ ನಮನ  –ಪಿಟಿಐ ಚಿತ್ರ
ಮಹೇಂದ್ರಸಿಂಗ್ ಧೋನಿಗೆ ಅಭಿಮಾನಿಯ ನಮನ –ಪಿಟಿಐ ಚಿತ್ರ

ಟಿವಿ ಕೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಟಿವಿ ತಯಾರಿಕೆ ಕಂಪೆನಿಗಳು ದಾಂಗುಡಿಯಿಟ್ಟವು. ಕಪ್ಪು–ಬಿಳುಪು ಟಿವಿಯಾದರೂ ಮನೆಯಲ್ಲಿರಬೇಕು, ಕ್ರಿಕೆಟ್ ನೋಡಬೇಕು ಎಂಬ ಧಾವಂತ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಚ್ಚತೊಡಗಿತು. ಇದು ಪ್ರಾಯೋಜಕರನ್ನು ಸೆಳೆಯಲು ಕಾರಣವಾಯಿತು. ದೊಡ್ಡ ಜನಸಂಖ್ಯೆಯ ಬಹುಪಾಲು ಇರುವ ಮಧ್ಯಮವರ್ಗದ ಕುಟುಂಬಗಳನ್ನು ಮಾರುಕಟ್ಟೆಯತ್ತ ಸೆಳೆಯಲು ಟಿವಿ ಮಾಧ್ಯಮ ಸಜ್ಜಾಯಿತು. ಒಂದಿಡೀ ದಿನ ಟಿವಿ ಮುಂದೆ ಕುಳಿತು ಕ್ರಿಕೆಟ್ ವೀಕ್ಷಿಸುವ ಜನರ ಮನಸೆಳೆಯುವ ಕಾರ್ಯಕ್ಕೆ ಸುಲಭ ದಾರಿ ಲಭಿಸಿತು.

ಅಲ್ಲಿಯವರೆಗೆ ವೀಕ್ಷಕ ವಿವರಣೆಗಾಗಿ ಕಿವಿ ಕಚ್ಚಿಕೊಂಡಿದ್ದ ಪಾಕೆಟ್ ರೇಡಿಯೋಗಳು ಮೆಲ್ಲಗೆ ಆದ್ಯತೆ ಕಳೆದುಕೊಳ್ಳತೊಡಗಿದವು. ದೂರದರ್ಶನ ವಾಹಿನಿ (ಆಗ ಇದ್ದಿದ್ದು ಅದೊಂದೇ ಚಾನೆಲ್) ಮನೆ ಮತ್ತು ಮನಸ್ಸುಗಳಿಗೆ ಹತ್ತಿರವಾಯಿತು. ಅಗಿನ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳಿಗಿಂತಲೂ ಹೆಚ್ಚಿನ ಜನಪ್ರಿಯತೆ ಗಳಿಸಿದ್ದು ಕ್ರಿಕೆಟ್‌. ಟಿವಿ ಸೆಟ್‌ಗಳನ್ನು ಮಾರಾಟ ಮಾಡಲೂ ಎಲೆಕ್ಟ್ರಾನಿಕ್ ಅಂಗಡಿಗಳು, ಕಂಪೆನಿಗಳು ಕ್ರಿಕೆಟ್‌ ಆಟವನ್ನೇ ನೆಚ್ಚಿಕೊಂಡವು. ತಮ್ಮ ಮಳಿಗೆಗಳ ಮುಂದೆ ದೊಡ್ಡ ಗಾಜಿನ ಪೆಟ್ಟಿಗೆಗಳಲ್ಲಿ ಹತ್ತಾರು ಟಿವಿಗಳನ್ನು ಇಟ್ಟು ಕ್ರಿಕೆಟ್ ಪಂದ್ಯದ ನೇರಪ್ರಸಾರ ತೋರಿಸುತ್ತಿದ್ದರು. ಅವುಗಳ ಮುಂದೆ ನೂರಾರು ಜನರು ಮೈಮರೆತು ನಿಂತು ವೀಕ್ಷಿಸುತ್ತಿದ್ದರು. ತಂತ್ರಜ್ಞಾನ ಬೆಳೆದಂತೆ ಕಪ್ಪು–ಬಿಳುಪು ಟಿವಿಯ ದರದಲ್ಲಿ ಬಣ್ಣದ ಟಿವಿಗಳು ಸಿಗತೊಡಗಿದವು.

ಆಟಗಾರರ ಬಿಳಿ ಪೋಷಾಕುಗಳು ಟೆಸ್ಟ್‌ ಕ್ರಿಕೆಟ್‌ಗೆ ಸೀಮಿತವಾದವು. ಬಣ್ಣದ ಪೋಷಾಕುಗಳಲ್ಲಿ ಆಟಗಾರರು ಮಿಂಚಿದರು. ಅವರ ಅಂಗಿ, ಪ್ಯಾಂಟು, ಬ್ಯಾಟು, ಹ್ಯಾಟುಗಳ ಮೇಲೆ ಪ್ರಾಯೋಜಕರ ಲಾಂಛನಗಳು ವಿಜೃಂಭಿಸತೊಡಗಿದವು.

1989ರಲ್ಲಿ ಸಚಿನ್ ತೆಂಡೂಲ್ಕರ್ ಎಂಬ ಪ್ರತಿಭೆಯ ರಂಗಪ್ರವೇಶ ಮತ್ತು 1990ರಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಯುಗದ ಆರಂಭ ಕ್ರಿಕೆಟ್ ಮತ್ತು ಟಿವಿ ಮಾಧ್ಯಮದ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸಿತು. ನಂತರದ ಎರಡೂವರೆ ದಶಕ ಈ ಎರಡೂ ರಂಗಗಳಿಗೆ ನಾಗಾಲೋಟದ ಯುಗ. ಜೊತೆಗೆ ಇಂಟರ್‌ನೆಟ್, ಡಿಜಿಟಲ್ ತಂತ್ರಜ್ಞಾನದ ಆವಿಷ್ಕಾರವೂ ಸೇರಿಕೊಂಡಿತು. ಆಟಗಾರರು ತಾರೆಗಳಾದರು!

ಭಾರತದಲ್ಲಿ ದೂರದರ್ಶನದ ಸಾಂಪ್ರದಾಯಿಕ ಕಾರ್ಯಕ್ರಮಗಳು, ದಿನಕ್ಕೆ ಎರಡು ಬಾರಿ ಸುದ್ದಿ ಪ್ರಸಾರ, ಒಂದೆರಡು ಧಾರಾವಾಹಿಗಳು ಮತ್ತು ವಾರಕ್ಕೊಂದು ಚಲನಚಿತ್ರಗಳಿಗೆ ಜನರು ಒಗ್ಗಿದ್ದರು. 1990ರ ನಂತರ ಉಪಗ್ರಹ ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಯಿಂದ ರೂಪೆರ್ಟ್ ಮುರ್ಡೊಕ್ ತನ್ನ ಸ್ಟಾರ್ ವಾಹಿನಿಗಳ ಗುಚ್ಛದೊಂದಿಗೆ ಭಾರತಕ್ಕೆ ಕಾಲಿಟ್ಟ. ದೂರದರ್ಶನದ ದೇಸಿಯತೆ ಸಪ್ಪೆಯೆನಿಸತೊಡಗಿತು. ಜೀ ಟಿವಿಯ ಅಂತ್ಯಾಕ್ಷರಿ, ಸ್ಟಾರ್‌ ಟಿವಿಯ ಸಿನೆಮಾಗಳು, ವಿ ಚಾನೆಲ್, ಎಂ ಟಿವಿಯ ಪಾಶ್ಚಾತ್ಯ ಸಂಗೀತಗಳು ಹೆಚ್ಚು ಪ್ರಿಯವಾದವು. ಆದರೂ ಭಾರತದಲ್ಲಿ ಕ್ರಿಕೆಟ್‌ ಪ್ರಸಾರದ ಹಕ್ಕುಗಳನ್ನು ಪಡೆಯುವಲ್ಲಿ ದೂರದರ್ಶನ ಮುಂಚೂಣಿಯಲ್ಲಿತ್ತು. ಯಾವಾಗ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಆರಂಭವಾಯಿತೋ ದೂರದರ್ಶನಕ್ಕೆ ಪೈಪೋಟಿ ಆರಂಭವಾಯಿತು.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಈಗಂತೂ ಕ್ರಿಕೆಟ್‌ಗಾಗಿಯೇ ಸ್ಟಾರ್ ಕ್ರಿಕೆಟ್, ನಿಯೋ ಕ್ರಿಕೆಟ್, ಇಎಸ್‌ಪಿಎನ್. ಸೋನಿ ಸಿಕ್ಸ್ ಸೇರಿದಂತೆ ಕ್ರೀಡೆಗಳ ಪ್ರಸಾರಕ್ಕಾಗಿ ಸುಮಾರು 25 ಚಾನೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಎಲ್ಲ ಬೆಳವಣಿಗೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಬೆಳೆಯಿತು. ಇಡೀ ವಿಶ್ವದ ಕ್ರಿಕೆಟ್ ಮೇಲೆ ಹಿಡಿತ ಸಾಧಿಸಿತು. ಭಾರತದ ಮಾರುಕಟ್ಟೆಯಲ್ಲಿ ಉಳಿಯಲು ಕ್ರೀಡಾ ಚಾನೆಲ್‌ಗಳಿಗೆ ಕ್ರಿಕೆಟ್ ಅನಿವಾರ್ಯವಾಗಿದೆ. 2013ರಲ್ಲಿ ಪ್ರಸಾರದ ಹಕ್ಕು ಪಡೆದ ಸ್ಟಾರ್ ಸ್ಪೋರ್ಟ್ಸ್‌ನ ಆಡಳಿತ ಮಂಡಳಿಯು ಈ ಸತ್ಯವನ್ನು ಎಗ್ಗಿಲ್ಲದೇ ಹೇಳಿಕೊಂಡಿತ್ತು. ಕ್ರಿಕೆಟ್‌ ಜನಪ್ರಿಯತೆಯು ಉಳಿದೆಲ್ಲ ಕ್ರೀಡೆಗಳನ್ನು ಮಣ್ಣುಮುಕ್ಕಿಸುವ ಮಟ್ಟಿಗೆ ಬೆಳೆದಿದ್ದು, ದೃಶ್ಯಮಾಧ್ಯಮವನ್ನು ‘ಕಿಂಗ್ ಮೇಕರ್‌’ ಸ್ಥಾನಕ್ಕೆ ಏರಿಸಿತು. ಇದರಿಂದಾಗಿ ಟಿವಿ ಚಾನೆಲ್‌ಗಳು ಉಳಿದ ಕೆಲವು ಕ್ರೀಡೆಗಳನ್ನು (ವೀವರ್ ಫ್ಲೆಂಡ್ಲಿ) ರೋಚಕಗೊಳಿಸಲು ಯೋಜನೆಗಳನ್ನು ನೀಡತೊಡಗಿವೆ. ಇದರ ಫಲವಾಗಿ ಹಾಕಿ, ಕಬಡ್ಡಿ, ಕುಸ್ತಿಗಳಲ್ಲಿ ಪ್ರೀಮಿಯರ್ ಲೀಗ್, ಪ್ರೊ ಕಬಡ್ಡಿಗಳು ಆರಂಭವಾಗಿವೆ.

ಆನ್‌ಲೈನ್ ಯುಗ
ಟಿವಿ ವಾಹಿನಿಯು ಎಷ್ಟೇ ಆರ್ಥಿಕ ಲಾಭವನ್ನು ಕ್ರಿಕೆಟ್‌ನಿಂದ ಪಡೆದಿದ್ದರೂ, ಮುದ್ರಣ ಮಾಧ್ಯಮದಲ್ಲಿ ಕ್ರೀಡಾ ಬರವಣಿಗೆ ಇವತ್ತಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಇವತ್ತಿನ ಕ್ರಿಕೆಟ್‌ ಪ್ರೇಮಿಗಳು, ಆಸಕ್ತರು, ಟಿವಿಯಲ್ಲಿ ಇಡೀ ದಿನ ಪಂದ್ಯ ವೀಕ್ಷಿಸಿದರೂ ಮರುದಿನ ಪತ್ರಿಕೆ, ನಿಯತಕಾಲಿಕೆಗಳನ್ನು ಓದುವ ಆಸಕ್ತಿ ತೋರುತ್ತಾರೆ. ಅದಕ್ಕೆ ತಕ್ಕಂತೆ ಕ್ರೀಡಾ ಬರೆವಣಿಗೆಯೂ ಬದಲಾಗುತ್ತಿದೆ. ಹೆಚ್ಚು ಪ್ರಯೋಗಶೀಲತೆ, ವಿಶ್ಲೇಷಣೆಗಳು ನಡೆಯುತ್ತಿವೆ. ಇದೆಲ್ಲದರ ನಡುವೆಯೂ ಇಂಟರ್‌ನೆಟ್‌ ಅಥವಾ ವೆಬ್‌ ಮಾಧ್ಯಮವೂ ತನ್ನ ಸ್ಥಾನ ಕಂಡುಕೊಂಡಿದೆ. ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಅಸಂಖ್ಯಾತ ಜಾಲತಾಣಗಳು ಸಿಗುತ್ತವೆ. ಟ್ವಿಟರ್, ಫೇಸ್‌ಬುಕ್. ಯೂಟ್ಯೂಬ್‌ಗಳ ಮೂಲಕವೂ ಕ್ರಿಕೆಟ್‌ನ ಒಳ–ಹೊರಗಿನ ಮಾಹಿತಿಗಳು ಪ್ರಸಾರವಾಗುತ್ತಿವೆ.

ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು 200 ದೇಶಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅಷ್ಟ್ರೇನೂ ಕ್ರಿಕೆಟ್ ಪ್ರೀತಿ ಇಲ್ಲದ ಚೀನಾ, ದಕ್ಷಿಣ ಕೊರಿಯಾ, ಫಿಲಿಪೀನ್ಸ್‌, ಥಾಯ್ಲೆಂಡ್, ವಿಯೆಟ್ನಾಂ ಮತ್ತು ಅಮೆರಿಕದ ಕೆಲವು ದೇಶಗಳಳ್ಲಿಯೂ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಒಟ್ಟು 40 ವಾಹಿನಿಗಳು ಈ ಪ್ರಸಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ ಈ ಕಾರ್ಯ ಮಾಡುತ್ತಿದೆ.

ಭಾರತದಲ್ಲಿ ಒಟ್ಟು ಏಳು ಭಾಷೆಗಳಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ದೊರೆಯುತ್ತಿದೆ. ಸ್ಟಾರ್ ಸ್ಪೋರ್ಟ್ಸ್’ನ ಒಟ್ಟು 50 ವೀಕ್ಷಕ ವಿವರಣೆಗಾರರು ಹಿಂದಿ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿ ಭಾಷೆಗಳಲ್ಲಿ ಕಾಮೆಂಟ್ರಿ ನೀಡುತ್ತಿದೆ. ದಿಗ್ಗಜರಾದ ಜಿ.ಆರ್. ವಿಶ್ವನಾಥ್, ವೆಂಕಟೇಶ್ ಪ್ರಸಾದ್ ಮತ್ತಿತರರು ಕನ್ನಡ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ಧಾರೆ. ಬೇರೆ ಬೇರೆ ಸಂಸ್ಥೆಗಳು ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮಗಳೂ ಗಮನ ಸೆಳೆಯುತ್ತಿವೆ. ಟಿವಿ ವಾಹಿನಿಗಳು ಕೂಡ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಎಫ್‌ಎಂ ಮತ್ತು ವೆಬ್‌ ರೆಡಿಯೊ ಮೂಲಕ ಮತ್ತೆ ಬಾನುಲಿ ಮುಂಚೂಣಿಗೆ ಬರುತ್ತಿದೆ. ತನ್ನ ಅಸ್ತಿತ್ವವನ್ನು ಮರಳಿ ಗಳಿಸುತ್ತಿದೆ.

1996ರ ವಿಶ್ವಕಪ್ ಟೂರ್ನಿ ಸಂದರ್ಭದಲ್ಲಿ ನಡೆದ ಮ್ಯಾಚ್‌ ಫಿಕ್ಸಿಂಗ್ ಹಗರಣ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸ್ಪಾಟ್‌ ಫಿಕ್ಸಿಂಗ್‌ ಹಗರಣಗಳು ಅಪ್ಪಟ ಕ್ರಿಕೆಟ್‌ಪ್ರಿಯರ ಮನಸ್ಸಿಗೆ ನೋವುಂಟು ಮಾಡಿದೆ. ಅದರೆ ಹುಚ್ಚುಪ್ರೀತಿಯ ಹರಿವು ಮಾತ್ರ ಕಡಿಮೆಯಾಗಿಲ್ಲ. ಇದರ ಲಾಭ ಪಡೆಯುವಲ್ಲಿ ಟಿವಿ ವಾಹಿನಿಗಳೂ ಹಿಂದೆ ಬಿದ್ದಿಲ್ಲ. ಆ್ಯಂಟೆನಾದಿಂದ ಆ್ಯಪ್‌ನವರೆಗೆ, ಪಾಕೆಟ್ ರೆಡಿಯೊದಿಂದ ಎಫ್‌ಎಂ ವಾಹಿನಿಯವರೆಗೆ ಕ್ರಿಕೆಟ್‌ ನಲಿಯುತ್ತಿದೆ.

ಹಣದ ಹೊಳೆ ಹರಿಸಿದ ಪ್ರಸಾರ ಹಕ್ಕು ಖರೀದಿ
1992ರಲ್ಲಿ ವರ್ಲ್ಡ್‌ ಟೆಲಿವಿಷನ್‌ ₹78.66 ಕೋಟಿ ನೀಡಿ ವಿಶ್ವಕಪ್‌ ಪ್ರಸಾರದ ಹಕ್ಕು ಖರೀದಿಸಿತ್ತು. 1999ರ ವೇಳೆಗೆ ಈ ಮೊತ್ತ ₹161 ಕೋಟಿ ತಲುಪಿತ್ತು. ಇದು ಹೀಗೆಯೇ ಮುಂದುವರಿಯಿತು.

2003ರಲ್ಲಿ ಗ್ಲೋಬಲ್‌ ಕ್ರಿಕೆಟ್‌ ಕಾರ್ಪೊರೇಷನ್‌ (ಜಿಸಿಸಿ) ಸಂಸ್ಥೆಯು ಎರಡು ವಿಶ್ವಕಪ್‌ಗಳ (2003 ಮತ್ತು 2007) ಪ್ರಾಯೋಜಕತ್ವ ಪಡೆದಿತ್ತು. ಆ ಒಪ್ಪಂದದ ಅನ್ವಯ ಐಸಿಸಿ ಖಜಾನೆಗೆ ದಾಖಲಾಗಿದ್ದು ₹2,530 ಕೋಟಿ. ಇಎಸ್‌ಪಿಎನ್‌ ಸಂಸ್ಥೆಯು ₹16,400 ಕೋಟಿ ನೀಡಿ 2011ರ ವಿಶ್ವಕಪ್‌ ಪ್ರಸಾರದ ಹಕ್ಕು ಖರೀದಿಸಿತ್ತು.

ಆಗ 220 ದೇಶಗಳಲ್ಲಿ ಪಂದ್ಯಗಳನ್ನು ನೇರ ಪ್ರಸಾರ ಮಾಡಿದ್ದು ದಾಖಲೆಯ ಪುಟ ಸೇರಿತ್ತು. ಆ ಟೂರ್ನಿಯ ಪಂದ್ಯಗಳನ್ನು ವಿಶ್ವದಾದ್ಯಂತ ಒಟ್ಟು 220 ಕೋಟಿ ಮಂದಿ ವೀಕ್ಷಿಸಿದ್ದರು. ಹೀಗಾಗಿ 2015ರ ವಿಶ್ವಕಪ್‌ನ ಪ್ರಾಯೋಜಕತ್ವಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆಗಲೂ ಇಎಸ್‌ಪಿಎನ್‌ ಸಂಸ್ಥೆಯ ಕೈ ಮೇಲಾಗಿತ್ತು.

ಈಗ ಇಂಗ್ಲೆಂಡ್‌ನಲ್ಲಿ ಮತ್ತೆ ವಿಶ್ವಕಪ್ ಕಲರವ ಶುರುವಾಗಿದೆ. ಈ ಬಾರಿ ಮಾಧ್ಯಮ ಹಕ್ಕುಗಳಿಂದಲೇ ಐಸಿಸಿಗೆ ₹1,200 ಕೋಟಿಯಿಂದ ₹1,500 ಕೋಟಿ ಆದಾಯ ಸಿಗುವ ನಿರೀಕ್ಷೆ ಇದೆ. ಆಯಾ ದೇಶದ ಕ್ರಿಕೆಟ್ ಸಂಸ್ಥೆಗಳು ಪಡೆಯುವ ಆದಾಯದ ಲೆಕ್ಕಾಚಾರ ಬೇರೆಯೇ ಇದೆ!

ತಾರೆ–ಅಭಿಮಾನಿಯ ಸೇತು!
ಈಗಿನ ಪ್ರಮುಖ ಬೆಳವಣಿಗೆಯೆಂದರೆ ಸಾಮಾಜಿಕ ಜಾಲತಾಣಗಳು. ಕ್ರಿಕೆಟ್‌ ತಾರೆಗಳು ಮತ್ತು ಅಭಿಮಾನಿಗಳನ್ನು ಬೆಸೆಯುತ್ತಿರುವ ಈ ತಾಣಗಳ ಮೂಲಕ ದ್ವಿಮುಖ ಸಂವಹನ ಸಾಧ್ಯವಾಗಿದೆ. ವೆಬ್‌ಸೈಟ್‌ಗಳು, ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ ಗಳ ಮೂಲಕ ಪರಸ್ಪರ ಸಂವಹನ ಕಾರ್ಯಕ್ರಮಗಳೂ ನಡೆಯುತ್ತಿವೆ.

ಅಷ್ಟೇ ಏಕೆ , ಜನಪ್ರಿಯ ಆಟಗಾರರ ಚಿತ್ರಗಳು, ವಿಡಿಯೋಗಳಿಂದ ಹೆಚ್ಚು ಹಿಟ್ಸ್‌ ಪಡೆಯುವ ತಾಣಗಳು ತಮ್ಮ ಲಾಭಾಂಶದಲ್ಲಿ ಆಟಗಾರರಿಗೂ ಪಾಲು ನೀಡುತ್ತಿವೆ. ಈಚೆಗೆ ವಿರಾಟ್ ಕೊಹ್ಲಿ ಅವರಿಗೆ ಇನ್ಸ್ಟಾ ಗ್ರಾಮ್‌ ದಾಖಲೆ ಮೊತ್ತದ ರೌತವ ಧನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT