ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಾನ್‌ ಶತಕ: ಇಂಗ್ಲೆಂಡ್‌ಗೆ ಜಯ

Last Updated 8 ನವೆಂಬರ್ 2019, 19:34 IST
ಅಕ್ಷರ ಗಾತ್ರ

ನೇಪಿಯರ್‌ (ನ್ಯೂಜಿಲೆಂಡ್‌): ಡೇವಿಡ್‌ ಮಲಾನ್‌ ಅವರ ಬಿರುಗಾಳಿ ಶತಕ ಮತ್ತು ಇಯಾನ್‌ ಮಾರ್ಗನ್‌ ಜೊತೆ ದಾಖಲೆ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್‌ ತಂಡದವರು ಶುಕ್ರವಾರ ಇಲ್ಲಿ ನಡೆದ ನಾಲ್ಕನೇ ಟಿ–20 ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 76 ರನ್‌ಗಳಿಂದ ಸೋಲಿಸಿದರು.

ಮಲಾನ್‌ ಅಜೇಯ 103 ರನ್‌ ಬಾರಿಸಿದರೆ, ಮಾರ್ಗನ್‌ ಇಂಗ್ಲೆಂಡ್‌ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 91 ರನ್‌ಗಳಿಗೆ ಔಟ್‌ ಆದರು. ಇಂಗ್ಲೆಂಡ್‌ 20 ಓವರುಗಳಲ್ಲಿ 3 ವಿಕೆಟ್‌ಗೆ 241 ರನ್‌ಗಳ ಭಾರಿ ಮೊತ್ತ ಗಳಿಸಿತು. ನ್ಯೂಜಿಲೆಂಡ್‌ 19 ಎಸೆತಗಳು ಉಳಿದಿರುವಂತೆ 165 ರನ್‌ಗಳಿಗೆ ಆಟ ಮುಗಿಸಿತು.ಐದು ಪಂದ್ಯಗಳ ಸರಣಿ 1–1ರಲ್ಲಿ ಸಮನಾಗಿದ್ದು, ಅಂತಿಮ ಪಂದ್ಯ ಭಾನುವಾರ ಆಕ್ಲೆಂಡ್‌ನಲ್ಲಿ ನಡೆಯಲಿದೆ.

ಹಲವು ದಾಖಲೆ: ಮಲಾನ್‌ 48 ಎಸೆತಗಳಲ್ಲಿ ನೂರು ಗಳಿಸಿದ್ದು, ಇಂಗ್ಲೆಂಡ್‌ ಪರ ಟಿ–20ಯಲ್ಲಿ ಅತಿ ವೇಗದ ಶತಕ ಎನಿಸಿತು. ಅವರು ಮಾರ್ಗನ್‌ ಜೊತೆ 182 ರನ್‌ ಜೊತೆಯಾಟದಲ್ಲಿ ಭಾಗಿಯಾಗಿದ್ದು, ಇಂಗ್ಲೆಂಡ್‌ ಪರ ಅತ್ಯಧಿಕ ಜೊತೆಯಾಟ ಆಯಿತು. ಇಂಗ್ಲೆಂಡ್‌ ಗಳಿಸಿದ ಮೊತ್ತವೂ ಟಿ–20ಯಲ್ಲಿ ಅದರ ಅತ್ಯಧಿಕ ಎನಿಸಿತು. ಮಾರ್ಗನ್‌ 21 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದೂ ಇಂಗ್ಲೆಂಡ್‌ ಪರ ಅತಿ ವೇಗದ ಅರ್ಧ ಶತಕವೆಂದು ದಾಖಲೆಯಾಯಿತು.

ಈ ಇಬ್ಬರು ಎಡಗೈ ಆಟಗಾರರು ಒಟ್ಟು 13 ಸಿಕ್ಸರ್‌, 16 ಬೌಂಡರಿಗಳನ್ನು ಚಚ್ಚಿದರು. ಮಿಷೆಲ್‌ ಸ್ಯಾಂಟ್ನರ್‌, ಟ್ರೆಂಟ್‌ ಬೌಲ್ಟ್‌ ಬಿಟ್ಟರೆ ಉಳಿದವರೆಲ್ಲ ಓವರ್‌ಗೆ ಸರಾಸರಿ 10ಕ್ಕಿಂತ ಹೆಚ್ಚು ರನ್ ಕೊಟ್ಟು ದುಬಾರಿಯಾದರು.

ಎದುರಾಳಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ಮಲಾನ್‌, ಟಿ–20ಯಲ್ಲಿ ಶತಕ ಗಳಿಸಿದ ಇಂಗ್ಲೆಂಡ್‌ನ ಎರಡನೇ ಆಟಗಾರ ಎನಿಸಿದರು. ಅಲೆಕ್ಸ್‌ ಹೇಲ್ಸ್‌ ಮೊದಲ ಆಟಗಾರ.

ನ್ಯೂಜಿಲೆಂಡ್‌ ಕೂಡ ಬಿರುಸಿನ ಆರಂಭ ಮಾಡಿ ಐದನೇ ಓವರ್‌ನಲ್ಲೇ 54 ರನ್‌ ಗಳಿಸಿತ್ತು. ಆದರೆ 27 ರನ್‌ ಗಳಿಸಿ ಗಪ್ಟಿಲ್‌ ನಿರ್ಗಮಿಸಿದ ನಂತರ ವಿಕೆಟ್‌ಗಳು ನಿಯಮಿತವಾಗಿ ಬೀಳತೊಡಗಿದವು.

ಟಿಮ್‌ ಸೌಥಿ (39) ಮತ್ತು ಕಾಲಿನ್‌ ಮನ್ರೊ (30) ಕೆಲಕಾಲ ಪ್ರತಿರೋಧ ತೋರಿದರು. ಲೆಗ್‌ಬ್ರೇಕ್‌ ಬೌಲರ್‌ ಮ್ಯಾಟ್‌ ಪಾರ್ಕಿನ್‌ಸನ್‌ 47 ರನ್ನಿಗೆ 4 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಸ್ಕೋರುಗಳು
ಇಂಗ್ಲೆಂಡ್‌:
20 ಓವರುಗಳಲ್ಲಿ 3 ವಿಕೆಟ್‌ಗೆ 241 (ಟಿ.ಬಂಟನ್‌ 41, ಡೇವಿಡ್‌ ಮಲಾನ್‌ 103, ಇಯಾನ್‌ ಮಾರ್ಗನ್‌ 91; ಮಿಷೆಲ್‌ ಸ್ಯಾಂಟ್ನರ್‌ 32ಕ್ಕೆ2)
ನ್ಯೂಜಿಲೆಂಡ್‌: 16.5 ಓವರುಗಳಲ್ಲಿ 165 (ಗಪ್ಟಿಲ್‌ 30, ಮನ್ರೊ 30, ಟಿಮ್‌ ಸೌಥಿ 39; ಮ್ಯಾಟ್‌ ಪಾರ್ಕಿನ್‌ಸನ್‌ 47ಕ್ಕೆ4, ಕ್ರಿಸ್‌ ಜೋರ್ಡಾನ್‌ 24ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT