ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ದಿನದಲ್ಲಿ ಮುಗಿದ ಇಂದೋರ್ ಟೆಸ್ಟ್: ಪಿಚ್‌ಗೆ 'ಕಳ‍ಪೆ' ರೇಟಿಂಗ್ ನೀಡಿದ ಐಸಿಸಿ

Last Updated 3 ಮಾರ್ಚ್ 2023, 14:37 IST
ಅಕ್ಷರ ಗಾತ್ರ

ಇಂದೋರ್‌: ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಟೆಸ್ಟ್‌ ಕ್ರಿಕೆಟ್‌ ಪಂದ್ಯವು ಕೇವಲ ಮೂರೇ ದಿನಗಳಲ್ಲಿ ಮುಕ್ತಾಯವಾಗಿದ್ದು, ಈ ಪಿಚ್‌ ಕಳಪೆ ಗುಣಮಟ್ಟದ್ದಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಹೇಳಿದೆ.

ಬಾರ್ಡರ್‌–ಗಾವಸ್ಕರ್‌ ಟೆಸ್ಟ್‌ ಸರಣಿಯ ಮೂರನೇ ಪಂದ್ಯವು ಬುಧವಾರವಷ್ಟೇ ಆರಂಭವಾಗಿತ್ತು.

ಟಾಸ್‌ ಗೆದ್ದ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 109 ರನ್‌ಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ 197 ರನ್‌ ಗಳಿಸಿತ್ತು. 88 ರನ್‌ಗಳ ಹಿನ್ನಡೆಯೊಂದಿಗೆ ಮತ್ತೆ ಬ್ಯಾಟಿಂಗ್ ಮಾಡಿದ ಭಾರತ, 163ರನ್‌ ಗಳಿಗೆ ಸರ್ವಪತನ ಕಂಡಿತ್ತು. ಹೀಗಾಗಿ, 76 ರನ್‌ಗಳ ಸುಲಭ ಗುರಿ ಪಡೆದ ಪ್ರವಾಸಿ ಪಡೆ ಕೇವಲ 1 ವಿಕೆಟ್‌ ಕಳೆದುಕೊಂಡು ಜಯದ ನಗೆ ಬೀರಿತು.

ಪಂದ್ಯದಲ್ಲಿ ಒಟ್ಟಾರೆ 1,135 ಎಸೆತಗಳ ಆಟವಷ್ಟೇ ನಡೆಯಿತು. ಇದು ಭಾರತ ತಂಡವು ತವರಿನಲ್ಲಿ ಸೋಲು ಕಂಡ 'ಕಡಿಮೆ ಎಸೆತಗಳ' ಪಂದ್ಯ ಎನಿಸಿತು. ಇದಕ್ಕೂ ಮುನ್ನ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 1951–52ರಲ್ಲಿ ಕಾನ್ಪುರದಲ್ಲಿ ನಡೆದ 'ಕಡಿಮೆ ಎಸೆತಗಳ' ಪಂದ್ಯದಲ್ಲಿ ಸೋತಿತ್ತು. ಆ ಪಂದ್ಯದಲ್ಲಿ ಕೇವಲ 1,459 ಎಸೆತಗಳ ಆಟ ನಡೆದಿತ್ತು.

ಹೋಳ್ಕರ್‌ ಪಿಚ್‌ ‘ಕಳ‍ಪೆ’ ಗುಣಮಟ್ಟದ್ದಾಗಿದೆ ಎಂದು ರೇಟಿಂಗ್‌ ನೀಡಿರುವ ಪಂದ್ಯದ ರೆಫರಿಗಳು, ಮೂರು ಡಿಮೆರಿಟ್‌ ಅಂಕಗಳನ್ನೂ ನೀಡಿದ್ದಾರೆ.

'ಪಂದ್ಯದ ಅಂಪೈರ್‌ಗಳು ಮತ್ತು ಎರಡೂ ತಂಡಗಳ ನಾಯಕರ ಜತೆ ಸಮಾಲೋಚನೆ ನಡೆಸಿದ ಐಸಿಸಿ ಮ್ಯಾಚ್ ರೆಫರಿ ಕ್ರಿಸ್‌ ಬ್ರಾಡ್‌ ಅವರು ಪಿಚ್‌ನ ಗುಣಮಟ್ಟದ ಕುರಿತು ವರದಿ ಸಲ್ಲಿಸಿದ್ದಾರೆ. ಅವರ ವರದಿಯ ಆಧಾರದಲ್ಲಿ ಮೂರು ಡಿಮೆರಿಟ್‌ ಅಂಕಗಳನ್ನು ನೀಡಲಾಗಿದೆ' ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ಮ್ಯಾಚ್‌ ರೆಫರಿಯ ವರದಿಯನ್ನು ಬಿಸಿಸಿಐಗೂ ನೀಡಲಾಗಿದ್ದು, ಐಸಿಸಿಯ ರೇಂಟಿಂಗ್‌ನ ವಿರುದ್ಧ ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶ ಇದೆ.

ಮೊದಲ ಎರಡು ಪಂದ್ಯಗಳು ನಡೆದಿದ್ದ ನಾಗಪುರದ ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಹಾಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್‌ಗಳು ಸಾಧಾರಣ ಗುಣಮಟ್ಟದ್ದಾಗಿವೆ ಎಂದು ಐಸಿಸಿ ಪಂದ್ಯ ರೆಫರಿ ರೇಟಿಂಗ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT