ಭಾನುವಾರ, ಮೇ 29, 2022
24 °C
ರಿಷಭ್ ಪಂತ್, ರಾಹುಲ್ ಅರ್ಧಶತಕ ವ್ಯರ್ಥ

ಮಲಾನ್, ಕ್ವಿಂಟನ್ ಮಿಂಚು: ಸರಣಿ ಕೈವಶಪಡಿಸಿಕೊಂಡ ದಕ್ಷಿಣ ಆಫ್ರಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರ್ಲ್(ಪಿಟಿಐ/ಎಪಿ): ಜಾನೆಮನ್ ಮಲಾನ್ ಮತ್ತು ಕ್ವಿಂಟನ್ ಡಿ ಕಾಕ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಭಾರತ ಎದುರಿನ ಏಕದಿನ ಕ್ರಿಕೆಟ್ ಸರಣಿಯನ್ನು ಕೈವಶ ಮಾಡಿಕೊಂಡಿತು.

ಬೊಲ್ಯಾಂಡ್ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ  7 ವಿಕೆಟ್‌ಗಳಿಂದ ಜಯಿಸಿದ ಆತಿಥೇಯ ಬಳಗವು 2–0ಯಿಂದ ಜಯಿಸಿತು.

ಟಾಸ್ ಗೆದ್ದ ಬ್ಯಾಟಿಂಗ್  ಆಯ್ಕೆ ಮಾಡಿಕೊಂಡ ಭಾರತ ತಂಡವು ನಾಯಕ ಕೆ.ಎಲ್. ರಾಹುಲ್ (55; 79ಎ) ಮತ್ತು ರಿಷಭ್ ಪಂತ್ (85; 71ಎ) ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 287 ರನ್‌ ಗಳಿಸಿತು. ಆದರೆ, ಜಸ್‌ಪ್ರೀತ್ ಬೂಮ್ರಾ ಮತ್ತು ಯಜುವೇಂದ್ರ ಚಾಹಲ್ ಬಿಟ್ಟರೆ ಉಳಿದ ಬೌಲರ್‌ಗಳಿಂದ  ಉತ್ತಮ ದಾಳಿ ಕಂಡುಬರಲಿಲ್ಲ. ಭುವನೇಶ್ವರ್ ಕುಮಾರ್ ದುಬಾರಿಯೂ ಆದರು.

ಇದರಿಂದಾಗಿ ಹೋರಾಟದ ಮೊತ್ತ ಗಳಿಸಿದರೂ ಭಾರತಕ್ಕೆ ಜಯಿಸಲು ಸಾಧ್ಯವಾಗಲಿಲ್ಲ. ದುರ್ಬಲ ಬೌಲಿಂಗ್‌ನ ಲಾಭ ಪಡೆದ   ಆತಿಥೇಯ ತಂಡದ ಆರಂಭಿಕ ಜೋಡಿ ಮಲಾನ್ (91; 108ಎ) ಮತ್ತು ಕ್ವಿಂಟನ್ (78; 66ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ  132 ರನ್‌ ಗಳಿಸಿ ಭದ್ರ ಅಡಿಪಾಯ ಹಾಕಿದರು.  ಇದರಿಂದಾಗಿ ತಂಡವು 48.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 288 ರನ್ ಗಳಿಸಿತು.  ಸರಣಿಯಲ್ಲಿ ಇನ್ನೊಂದು ಪಂದ್ಯ ಉಳಿದಿದೆ.

ರೋಹಿತ್ ಶರ್ಮಾ ಗಾಯಗೊಂಡು ಹೊರಗುಳಿದ ಕಾರಣ ನಾಯಕತ್ವ ವಹಿಸಿರುವ ರಾಹುಲ್ ಪ್ರಥಮ ಸರಣಿಯಲ್ಲಿಯೇ ನಿರಾಶೆ ಅನುಭವಿಸಿದರು. ಆದರೆ, ಅವರು ಬ್ಯಾಟಿಂಗ್‌ನಲ್ಲಿ ಮಿಂಚಿದರು.

ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಿದ ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ63 ರನ್ ಸೇರಿಸಲು ಕಾರಣರಾದರು. ಆದರೆ 12ನೇ ಓವರ್‌ನಲ್ಲಿ ಏಡನ್ ಮಾರ್ಕರಂ ಬೌಲಿಂಗ್‌ನಲ್ಲಿ ಧವನ್ ಔಟಾಗುವುದರೊಂದಿಗೆ ಈ ಜೊತೆಯಾಟವೂ ಮುರಿದುಬಿತ್ತು.

ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ಐದು ಎಸೆತಗಳನ್ನು ಆಡಿ ಸೊನ್ನೆ ಸುತ್ತಿದರು. ಅವರು ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ದಾಖಲಿಸಿದ್ದರು.  ಆದರೆ ಇಲ್ಲಿ ಅವರು ಖಾತೆ ತೆರೆಯಲಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಮಿಂಚಿದ್ದ ರಿಷಭ್ ಪಂತ್ ಇಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಿಭೆ ಮೆರೆದರು. ರಾಹುಲ್ ಜೊತೆಗೂಡಿದ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ  115 ಸೇರಿಸಿದರು. ಪಂತ್  ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಉತ್ತಮ ಮೊತ್ತ ಕಲೆಹಾಕಿದ ಸಾಧನೆ ಮಾಡಿದರು.

ಆದರೆ ತಂಡದ ಮೊತ್ತವು ಇನ್ನೂರರ ಗಡಿ ದಾಟುವ ಮುನ್ನವೇ ಇಬ್ಬರೂ ಔಟಾದರು. ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮಿಂಚಿದ ಶಾರ್ದೂಲ್ ಠಾಕೂರ್ (ಔಟಾಗದೆ 40) ಮತ್ತು ಅಶ್ವಿನ್ (ಔಟಾಗದೆ 25) ತಂಡದ ಮೊತ್ತ ಹೆಚ್ಚಿಸಿದರು. 

ಆದರೆ ಇವರ ಶ್ರಮಕ್ಕೆ ದಕ್ಷಿಣ ಆಫ್ರಿಕಾದ ಆತ್ಮವಿಶ್ವಾಸ ಭರಿತ ಬ್ಯಾಟಿಂಗ್ ಪಡೆಯು ನೀರು ಸುರಿಯಿತು. ಆರಂಭಿಕ ಜೋಡಿಯು ಹಾಕಿದ ಉತ್ತಮ ಅಡಿಪಾಯದ ಮೇಲೆ ನಾಯಕ ತೆಂಬಾ ಬವುಮಾ, ಏಡನ್ ಮಾರ್ಕರಮ್ ಮತ್ತು ರಸಿ ವ್ಯಾನ್ ಡರ್ ಡಸೆನ್ ಗೆಲುವಿನ ಸೌಧ ಕಟ್ಟಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು