ಸೋಮವಾರ, ಮಾರ್ಚ್ 1, 2021
28 °C

ವಿಮಾನ ನಿಲ್ದಾಣದಿಂದ ನೇರವಾಗಿ ತಂದೆಯ ಸಮಾಧಿ ಸ್ಥಳಕ್ಕೆ ತೆರಳಿದ ಮೊಹಮ್ಮದ್ ಸಿರಾಜ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಆಸ್ಟ್ರೇಲಿಯಾದಿಂದ ಇಲ್ಲಿಗೆ ಮರಳಿರುವ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ತಂದೆಯ ಸಮಾಧಿ ಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಆಸೀಸ್ ಪ್ರವಾಸದಲ್ಲಿರುವಾಗಲೇ ಮೊಹಮ್ಮದ್ ಸಿರಾಜ್ ಅವರು ತಮ್ಮ ಅಪ್ಪನನ್ನು ಕಳೆದುಕೊಂಡಿದ್ದರು. ಆದರೂ ದೇಶ ಸೇವೆಗೆ ಮೊದಲ ಆದ್ಯತೆ ನೀಡಿದ್ದ ಸಿರಾಜ್, ತಂದೆಯ ಅಗಲಿಕೆಯ ನೋವಿನಲ್ಲಿಯೂ ತಂಡದ ಜೊತೆಗಿರಲು ನಿರ್ಧರಿಸಿದ್ದರು.

ಅಪ್ಪನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿರಾಜ್, 'ತಂದೆಯ ನಿಧನ ವಾರ್ತೆಯು ನನಗೆ ಮಾನಸಿಕವಾಗಿ ಖಿನ್ನತೆಯನ್ನುಂಟು ಮಾಡಿತ್ತು. ಆದರೆ, ನನ್ನ ತಂದೆಯ ಕನಸನ್ನು ಈಡೇರಿಸಿಕೊಂಡು ಮನೆಗೆ ಮರಳುವಂತೆ ನನ್ನ ಕುಟುಂಬ ಹೇಳಿತು. ಭಾವಿ ಪತ್ನಿಯು ನನ್ನನ್ನು ಪ್ರೇರೇಪಿಸಿದಳು ಮತ್ತು ನನ್ನ ತಂಡವು ಸಹ ಬೆಂಬಲಿಸಿತು. ನಾನು ಗಳಿಸಿದ ಎಲ್ಲಾ ವಿಕೆಟ್‌ಗಳನ್ನು ಅಪ್ಪನಿಗೆ ಅರ್ಪಿಸಿದೆ' ಎಂದು ಹೇಳಿದ್ದಾರೆ.

ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲೂ ಭಾರತದ ಬೌಲಿಂಗ್ ಪಡೆಯನ್ನು ಮುನ್ನಡೆಸಿದ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದರೊಂದಿಗೆ ಗಾಬಾ ಭದ್ರಕೋಟೆಯಲ್ಲಿ 33 ವರ್ಷಗಳಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಸೋಲನುಭವಿಸಬೇಕಾಯಿತು.

ಪಿತೃ ವಿಯೋಗದ ದುಃಖದ ಸನ್ನಿವೇಶದಲ್ಲಿ ಟೀಮ್ ಇಂಡಿಯಾ ಪರ ಆಡಲು ಉತ್ಸುಕತೆ ತೋರಿದ ಸಿರಾಜ್‌ಗೆ ಜನಾಂಗೀಯ ನಿಂದನೆಯಂತಹ ಕೆಟ್ಟ ಅನುಭವ ಎದುರಾಗಿತ್ತು. ಆದರೂ ಮೆಲ್ಬರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಸಿರಾಜ್, ಬ್ರಿಸ್ಬೇರ್ನ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದರು.

ಸರಣಿಯಲ್ಲಿ ಭಾರತದ ಪರ 13 ವಿಕೆಟ್ ಕಬಳಿಸಿರುವ ಮೊಹಮ್ಮದ್ ಸಿರಾಜ್ ಕಠಿಣ ಪರಿಶ್ರಮ ಕೊನೆಗೂ ಫಲಶ್ರುತಿ ಕಂಡಿತ್ತು. ದೇಶಕ್ಕಾಗಿ ಮಗ ಕ್ರಿಕೆಟ್ ಆಡುವುದನ್ನು ನೋಡುವುದು ಸಿರಾಜ್ ತಂದೆಯ ಬಹುದೊಡ್ಡ ಕನಸಾಗಿತ್ತು. ಕೊನೆಗೂ ಅಪ್ಪನ ಕನಸು ನನಸಾಗಿಸುವಲ್ಲಿ ಸಿರಾಜ್ ಯಶಸ್ವಿಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು