ಮಂಗಳವಾರ, ನವೆಂಬರ್ 24, 2020
19 °C

IPL 2020: ಟೂರ್ನಿಯಿಂದ ಹೊರಬಿದ್ದ ಚೆನ್ನೈ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟೂರ್ನಿಯ 13ನೇ ಆವೃತ್ತಿಯಿಂದ ಹೊರಬಿತ್ತು. ಈ ಮೂಲಕ ಈ ಬಾರಿ ಪ್ಲೇ ಆಫ್‌ ಹಂತಕ್ಕೇರುವ ಹಣಾಹಣಿಯಿಂದ ಹೊರಬಿದ್ದ ಮೊದಲ ತಂಡ ಎಂದೆನಿಸಿಕೊಂಡಿತು. ಚೆನ್ನೈ ಈ ವರೆಗೆ ಆಡಿದ ಎಲ್ಲ ಆವೃತ್ತಿಯಲ್ಲೂ ಪ್ಲೇ ಆಫ್‌ಗೆ ತಲುಪಿತ್ತು.

ಭಾನುವಾರ ಮಧ್ಯಾಹ್ನ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಗಳಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಜಯಿಸುವುದರೊಂದಿಗೆ ಚೆನ್ನೈ ತಂಡದ ಕನಸು ಭಗ್ನಗೊಂಡಿತು.

ಪರಿಸರ ಸಂರಕ್ಷಣೆ ಅಭಿಯಾನದ ಅಂಗವಾಗಿ ಹಸಿರು ಜೆರ್ಸಿ ತೊಟ್ಟು ಆಡಿದ ಬೆಂಗಳೂರು ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ನಾಯಕ ವಿರಾಟ್ ಕೊಹ್ಲಿ (50; 43 ಎಸೆತ, 1 ಬೌಂಡರಿ, 1 ಸಿಕ್ಸರ್), ವಿಕೆಟ್ ಕೀಪರ್ ಎಬಿ ಡಿವಿಲಿಯರ್ಸ್ (39; 36 ಎ, 4 ಬೌಂ) ಮತ್ತು ಆರಂಭಿಕ ಜೋಡಿ ದೇವದತ್ತ ಪಡಿಕ್ಕಲ್ (22)–ಆ್ಯರನ್ ಫಿಂಚ್ (15) ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಹೆಚ್ಚು ಮಿಂಚಲು ಆಗಲಿಲ್ಲ. ಹೀಗಾಗಿ ತಂಡ ಅರು ವಿಕೆಟ್‌ಗಳಿಗೆ 145 ಮಾತ್ರ ಗಳಿಸಿತು. 

ಗುರಿ ಬೆನ್ನತ್ತಿದ ಚೆನ್ನೈಗೆ ಋತುರಾಜ್ ಗಾಯಕವಾಡ್ (ಔಟಾಗದೆ 65; 51 ಎ, 4 ಬೌಂ, 3 ಸಿ) ಮತ್ತು ಫಾಫ್ ಡು ಪ್ಲೆಸಿ (2; 13 ಎ) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 46 ರನ್ ಸೇರಿಸಿದರು. ಪ್ಲೆಸಿ ಔಟಾದ ನಂತರ ಅಂಬಟಿ ರಾಯುಡು (39; 27 ಎ, 3 ಬೌಂ, 2 ಸಿ) ಕೂಡ ಗಾಯಕವಾಡ್‌ಗೆ ಉತ್ತಮ ಬೆಂಬಲ ನೀಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 67 ಸೇರಿಸಿತು. 14ನೇ ಓವರ್‌ನಲ್ಲಿ ರಾಯುಡು ಔಟಾದಾಗ ಕ್ರೀಸ್‌ಗೆ ಬಂದ ಮಹೇಂದ್ರ ಸಿಂಗ್ ಧೋನಿ 37 ರನ್‌ಗಳ ಜೊತೆಯಾಟವಾಡಿ ಪಂದ್ಯವನ್ನು ’ಫಿನಿಷ್‘ ಮಾಡಿದರು.

ಸಂಕ್ಷಿಪ್ತ ಸ್ಕೋರು: ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 6ಕ್ಕೆ 145 (ದೇವದತ್ತ ಪಡಿಕ್ಕಲ್ 22, ಆ್ಯರನ್ ಫಿಂಚ್ 15, ವಿರಾಟ್ ಕೊಹ್ಲಿ 50, ಎಬಿ ಡಿವಿಲಿಯರ್ಸ್ 39; ದೀಪಕ್ ಚಾಹರ್ 31ಕ್ಕೆ2, ಸ್ಯಾಮ್ ಕರನ್ 19ಕ್ಕೆ3, ಮಿಷೆಲ್ ಸ್ಯಾಂಟನರ್ 23ಕ್ಕೆ1); ಚೆನ್ನೈ ಸೂಪರ್ ಕಿಂಗ್ಸ್: 18.4 ಓವರ್‌ಗಳಲ್ಲಿ 2ಕ್ಕೆ 150 (ಋತುರಾಜ್ ಗಾಯಕವಾಡ್ ಔಟಾಗದೆ 65, ಫಾಫ್ ಡು ಪ್ಲೆಸಿ 25, ಅಂಬಟಿ ರಾಯುಡು 39, ಮಹೇಂದ್ರ ಸಿಂಗ್ ಧೋನಿ 19; ಕ್ರಿಸ್ ಮೊರಿಸ್ 36ಕ್ಕೆ1, ಯಜುವೇಂದ್ರ ಚಾಹಲ್ 21ಕ್ಕೆ1). ಫಲಿತಾಂಶ: ಚೆನ್ನೈ ಸೂಪರ್ ಕಿಂಗ್ಸ್‌ಗೆ 8 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಋತುರಾಜ್ ಗಾಯಕವಾಡ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು