ನವದೆಹಲಿ: ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕ್ರಮವಾಗಿ ನಾಯಕ ಹಾಗೂ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಹೋದ ಬಾರಿಯ ಟೂರ್ನಿಯಲ್ಲಿ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರು ಈ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ. ಅವರು ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ಗುಣಮುಖರಾಗುತ್ತಿದ್ದು ಆರೈಕೆ ಪಡೆಯುತ್ತಿದ್ದಾರೆ.
ಆದ್ದರಿಂದ ವಾರ್ನರ್ ಅವರಿಗೆ ನಾಯಕಪಟ್ಟ ನೀಡಲಾಗಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಉಪನಾಯಕರಾಗಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಡೆಲ್ಲಿ ಫ್ರ್ಯಾಂಚೈಸಿಯ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. 2019ರಲ್ಲಿ ಅವರು ಡೆಲ್ಲಿ ತಂಡಕ್ಕೆ ಮೆಂಟರ್ ಆಗಿದ್ದರು.
‘ಡೆಲ್ಲಿ ತಂಡಕ್ಕೆ ರಿಷಭ್ ಪಂತ್ ಬಹಳ ಸಮರ್ಥ ನಾಯಕರಾಗಿದ್ದರು. ಅವರು ಈ ಬಾರಿ ಕಣಕ್ಕಿಳಿಯುವುದು ಸಾಧ್ಯವಾಗದೇ ಇರುವುದು ನಮಗೆಲ್ಲರಿಗೂ ಬೇಸರ ಮೂಡಿಸಿದೆ. ನನ್ನ ಮೇಲೆ ತಂಡದ ವ್ಯವಸ್ಥಾಪನ ಮಂಡಳಿಯು ವಿಶ್ವಾಸವಿಟ್ಟು ಹೊಣೆ ನೀಡಿದೆ. ಉತ್ತಮವಾಗಿ ನಿರ್ವಹಿಸುತ್ತೇನೆ’ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.