ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಟೂರ್ನಿ ವೇಳಾಪಟ್ಟಿ: ಟಿಕೆಟ್ ಮಾರಾಟ ಗೊಂದಲಕ್ಕೆ ಅಭಿಮಾನಿಗಳ ಆಕ್ರೋಶ

ಜನ ಕ್ರೀಡಾಂಗಣಕ್ಕೆ ಬರೋದು ಬಿಟ್ಟರೆ ಬುದ್ಧಿ ಬರಬಹುದು ಎಂದು ಕಿಡಿ
Published 20 ಆಗಸ್ಟ್ 2023, 13:50 IST
Last Updated 20 ಆಗಸ್ಟ್ 2023, 13:50 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಕ್ರಿಕೆಟ್‌ ಪ್ರೇಮಿಗಳು ಸಹನಶೀಲರೆಂದೇ ಹೆಸರುವಾಸಿ. ಆದರೆ ಮುಂಬರಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವಿಷಯದಲ್ಲಿ ಮಾತ್ರ ಅಸಮಾಧಾನದಿಂದ ಕಿಡಿ ಕಾರುತ್ತಿದ್ದಾರೆ. ಅದಕ್ಕೆ ಕಾರಣ; ವೇಳಾಪಟ್ಟಿಯಲ್ಲಿ ಪದೇ ಪದೇ ಬದಲಾವಣೆ ಮತ್ತು ಟಿಕೆಟ್ ಬಿಕರಿಯಲ್ಲಿ ಅವ್ಯವಸ್ಥೆಗಳು.

ಭಾರತವೇ ಆತಿಥ್ಯ ವಹಿಸುತ್ತಿರುವ ಈ ಬಾರಿ ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನೇನು ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಅಹಮದಾಬಾದಿನಲ್ಲಿ ಅಕ್ಟೋಬರ್ 5ರಂದು ಉದ್ಘಾಟನೆ ಪಂದ್ಯಪಂದ್ಯಕ್ಕಾಗಿ ಆಗಸ್ಟ್ 25ರಂದು ಟಿಕೆಟ್ ಮಾರಾಟ ಆರಂಭವಾಗಲಿದೆ.

ಕಳೆದ ಜೂನ್‌ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ತದನಂತರ  ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗಳು ಸೇರಿ  ಒಂಬತ್ತು ಪಂದ್ಯಗಳ ದಿನಾಂಕಗಳನ್ನು ಮರುಪರಿಷ್ಕರಣೆ ಮಾಡಿದ್ದವು.

ಇದೀಗ ಮತ್ತೊಂದು ಪಂದ್ಯದ ದಿನಾಂಕ ಬದಲಾವಣೆಯಾಗುವ ಸಾಧ್ಯತೆ ಇದೆ. ಹೈದರಾಬಾದಿನಲ್ಲಿ ಅಕ್ಟೋಬರ್ 9 ಮತ್ತು 10ರಂದು ಸತತ ಎರಡು ಪಂದ್ಯಗಳು ನಡೆಯಲಿವೆ. ಅದರಿಂದಾಗಿ ಎರಡೂ ಪಂದ್ಯಗಳ ನಡುವೆ ಬಿಡುವು ಇರಬೇಕು. ಆದ್ದರಿಂದ ದಿನಾಂಕ ಮರುನಿಗದಿ ಮಾಡಬೇಕು ಎಂದು  ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಮನವಿ ಮಾಡಿದೆ.

2011ರಲ್ಲಿ ಭಾರತವು ವಿಶ್ವಕಪ್ ಟೂರ್ನಿಗೆ ಸಹ ಆತಿಥ್ಯ ವಹಿಸಿತ್ತು. ಆದರೆ ಆಗ ಇನ್ನೂ ಬಿಸಿಸಿಐ  ಆರ್ಥಿಕವಾಗಿ ಕ್ರಿಕೆಟ್ ಜಗತ್ತಿನ ‘ದೊಡ್ಡಣ್ಣ’ನಾಗಿರಲಿಲ್ಲ. ಆದರೆ ಈಗ ಸರ್ವಶಕ್ತವಾಗಿದೆ. ಅಲ್ಲದೇ ಆಗ 2010ರ ಜೂನ್‌ನಲ್ಲಿಯೇ ಟಿಕೆಟ್ ಮಾರಾಟ ಆರಂಭವಾಗಿತ್ತು. ಇದರಿಂದಾಗಿ ಅಭಿಮಾನಿಗಳು ದೇಶದ ಬೇರೆ ಬೇರೆ ತಾಣಗಳಿಗೆ ಪ್ರಯಾಣಿಸಲು ಯೋಜನೆ ಸಿದ್ಧಪಡಿಸಿಕೊಳ್ಳಲು ಅನುಕೂಲವಾಗಿತ್ತು. ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿ ವೇಳಾಪಟ್ಟಿಯನ್ನೂ 12 ತಿಂಗಳುಗಳ ಮುನ್ನವೇ ಪ್ರಕಟಿಸಲಾಗಿತ್ತು. ಇದರಿಂದಾಗಿ ಅಭಿಮಾನಿಗಳಿಗೆ ಟಿಕೆಟ್ ಖರೀದಿಸಲು ಬಹಳಷ್ಟು ಸಮಯಾವಕಾಶ ಲಭಿಸಿತ್ತು.

ದೆಹಲಿಯ ಅಥಿರವ್ ಕಪೂರ್ ಅವರು ಜೂನ್‌ನಲ್ಲಿ ವೇಳಾಪಟ್ಟಿ ಪ್ರಕಟವಾದ ಕೂಡಲೇ ಅಕ್ಟೋಬರ್ 15ರಂದು ಅಹಮದಾಬಾದಿನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ವಿಮಾನಯಾನ ಟಿಕೆಟ್ ಕಾದಿರಿಸಿದ್ದರು. ಆದರೆ ಆ ಪಂದ್ಯವನ್ನು ಈಗ ಅ.14ಕ್ಕೆ ಹಿಂದೂಡಲಾಯಿತು. ಆದರೆ ಕ್ರಿಕೆಟ್ ಪಂದ್ಯದ ಟಿಕೆಟ್ ಖರೀದಿ ಇನ್ನು ಮುಂದಷ್ಟೇ ಆಗಬೇಕಿದೆ. ಅವರು ಅದಕ್ಕಾಗಿ ಸೆ. 3ರವರೆಗೆ ಕಾಯಬೇಕಿದೆ.

‘ದೆಹಲಿಯಿಂದ ಅಹಮದಾಬಾದ್ ವಿಮಾನಕ್ಕೆ ಈಗಾಗಲೇ ₹ 40 ಸಾವಿರ ಪಾವತಿಸಿದ್ದೇನೆ. ಒಂದೊಮ್ಮೆ ಪಂದ್ಯದ ಟಿಕೆಟ್‌ ಆನ್‌ಲೈನ್ ಮೂಲಕ ಲಭಿಸಬಹುದು. ಆದರೆ ಅದರ ಪ್ರತಿಯನ್ನು ಪಡೆಯಲು ಪಂದ್ಯಕ್ಕೂ ಒಂದು ದಿನ ಮುನ್ನವೇ ಅಹಮದಾಬಾದಿನಲ್ಲಿ ನಾನಿರಬೇಕು. ಆದರೆ ಈಗಾಗಲೇ ವಿಮಾನ ಟಿಕೆಟ್‌ಗಳ ಬೆಲೆಗಳು ಗಗನಚುಂಬಿಯಾಗಿವೆ. ಆ ಟಿಕೆಟ್‌ಗಳ ದಿನಾಂಕ ಬದಲಿಸುವುದು ಕೂಡ ನನಗೆ ಅಪಾರ ನಷ್ಟಕ್ಕೆ ಕಾರಣವಾಗಲಿದೆ‘ ಎಂದು ಕಪೂರ್ ಬೇಸರ ವ್ಯಕ್ತಪಡಿಸುತ್ತಾರೆ.

‘2011ರಲ್ಲಿ ಪಂದ್ಯದ ಕೆಲವು ತಿಂಗಳುಗಳ ಮುನ್ನವೇ ಟಿಕೆಟ್‌ಗಳು ಲಭ್ಯವಾಗಿದ್ದವು. ಪಂದ್ಯ ಟಿಕೆಟ್‌ ಸಿಕ್ಕಿದ್ದರಿಂದ ಪ್ರಯಾಣದ ಯೋಜನೆ ಸಿದ್ಧಗೊಳಿಸುವುದು ಸುಲಭವಾಗಿತ್ತು. ಜಗತ್ತಿನಲ್ಲಿ ಎಲ್ಲಿಯೇ ವಿಶ್ವಕಪ್ ಟೂರ್ನಿ ನಡೆದರೂ ಲಭ್ಯವಿರುವ ಟಿಕೆಟ್‌ಗಳ ಸಂಖ್ಯೆಗಿಂತಲೂ ಹೆಚ್ಚಿನ ಬೇಡಿಕೆ ಇರುವುದು ಸಹಜ.  ಇಲ್ಲಿಯವರಿಗೇ ಇಷ್ಟು ಸಮಸ್ಯೆಯಾದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಿಂದ ಬರುವವರಿಗೆ ಇನ್ನೆಷ್ಟು ಸಮಸ್ಯೆ ಆಗಬಹುದು‘ ಎಂದು ಕಪೂರ್ ಪ್ರಶ್ನಿಸುತ್ತಾರೆ.

ಅಹಮದಾಬಾದಿನಲ್ಲಿ ಪಂದ್ಯದ ದಿನಗಳಲ್ಲಿ ಹೋಟೆಲ್‌ಗಳ ಕೋಣೆಗಳ ಬಾಡಿಗೆಯೂ ರಾತ್ರಿಯೊಂದಕ್ಕೆ ₹ 50 ಸಾವಿರ ಮುಟ್ಟಿದೆ. ಕೆಲವು ಕಟ್ಟಾ ಅಭಿಮಾನಿಗಳು ಆಸ್ಪತ್ರೆಗಳ ಹಾಸಿಗೆಗಳನ್ನೂ ಕಾಯ್ದಿರಿಸಿಕೊಂಡಿದ್ದಾರೆ.

ಸಿಂಗಪುರದಲ್ಲಿರುವ ಭಾರತೀಯ ರಿಷಭ್ ಸಿಂಘ್ವಿ ಕೂಡ ಬಿಸಿಸಿಐ ಮತ್ತು ಐಸಿಸಿಯ ನಡೆಗೆ ಹಿಡಿಶಾಪ ಹಾಕುತ್ತಾರೆ. ಭಾರತ ಆಡುವ ಮೂರ್ನಾಲ್ಕು ಪಂದ್ಯಗಳನ್ನು ವೀಕ್ಷಿಸಲು ಬರಲಿದ್ದಾರೆ. ಪ್ರಯಾಣ ಮತ್ತು ವಸತಿಗಾಗಿ ಅವರು ಸುಮಾರು ₹ 5 ಲಕ್ಷ ಖರ್ಚು ಮಾಡುತ್ತಿದ್ದಾರೆ. ಆದರೆ  ಅವರಿಗೆ ಪಂದ್ಯದ ಟಿಕೆಟ್‌ ಸಿಗುವ ಖಾತ್ರಿಯಿಲ್ಲ.

‘ಕಳೆದ ಐದು ತಿಂಗಳುಗಳಿಂದ ಇದಕ್ಕಾಗಿ ಸಿದ್ಧತೆ ನಡೆಸಿದ್ದೇನೆ. ಆದರೆ ಟಿಕೆಟ್ ಮಾರಾಟವೇ ಇನ್ನೂ ಆರಂಭವಾಗಿಲ್ಲ. ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ ಈಗಾಗಲೇ ನನ್ನ ಕುಟುಂಬವಿರುವ ಕೋಲ್ಕತ್ತದಲ್ಲಿ ನಡೆಯುವ ಪಂದ್ಯ ವೀಕ್ಷಣೆಗಾಗಿ ತೆರಳಲು ವಿಮಾನ ಟಿಕೆಟ್ ಕಾದಿರಿಸಿದ್ದೇನೆ. ನನ್ನ ಪಾಲಕರು ಮತ್ತು ತಮ್ಮನೊಂದಿಗೆ ಧರ್ಮಶಾಲಾ ಪಂದ್ಯಕ್ಕೆ ತೆರಳಲು ಕೂಡ ಯೋಚಿಸಿದ್ದೇನೆ. ಅದಕ್ಕಾಗಿ ಅಮೃತಸರಕ್ಕೆ ವಿಮಾನ ಟಿಕೆಟ್ ಖರೀದಿಸಿದ್ದೇನೆ‘ ಎಂದು ಸಿಂಘ್ವಿ ಹೇಳಿದ್ಧಾರೆ.

‘ನಾವು ವೇಳಾಪಟ್ಟಿ ಬಿಡುಗಡೆ ಮಾಡಿದ್ದೇ ನಾಲ್ಕೈದು ತಿಂಗಳು ವಿಳಂಬವಾಗಿ. ಅಭಿಮಾನಿಗಳಿಗೆ ಪ್ರಯಾಣಕ್ಕಾಗಿ ಮೊದಲೇ ಸಿದ್ಧರಾಗಲು ಕನಿಷ್ಠ ಆರೇಳು ತಿಂಗಳುಗಳ ಮುನ್ನವೇ ಟಿಕೆಟ್ ಮಾರಾಟ ಆರಂಭಿಸುವುದು ಉತ್ತಮವಾಗಿತ್ತು‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳುತ್ತಾರೆ.

ಫಿಫ್ಟಿ–50 ಕ್ರಿಕೆಟ್ ಮಾದರಿಯು ಈಗಾಗಲೇ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಆದರೆ ವಿಶ್ವಕಪ್ ಟೂರ್ನಿಯನ್ನು ಅದರ ಪುನರುತ್ಥಾನಕ್ಕೆ ಬಳಸುವ ಅವಕಾಶವಿದ್ದರೂ ಟಿಕೆಟ್ ಮತ್ತು ವೇಳಾಪಟ್ಟಿಯ ಗೊಂದಲಗಳು ಅಭಿಮಾನಿಗಳನ್ನು ಕ್ರೀಡಾಂಗಣದಿಂದ ದೂರ ಉಳಿಸುವ ಅಪಾಯವಿದೆ.

‘ಅಭಿಮಾನಿಗಳೂ ಎಲ್ಲ ಅಡೆತಡೆಗಳನ್ನು ಸಹಿಸಿಕೊಂಡು ಕ್ರೀಡಾಂಗಣಗಳಿಗೆ ಹೋಗುವವರೆಗೂ  ಏನೂ ಸುಧಾರಣೆಯಾಗುವುದಿಲ್ಲ. ಒಂದು ಸಲ ಪ್ರೇಕ್ಷಕರು ಕ್ರೀಡಾಂಗಣದಿಂದ ವಿಮುಖರಾದರೆ ಮಾತ್ರ ಆಯೋಜಕರು ಇತ್ತ ಕಾಳಜಿ ವಹಿಸಲು ಆರಂಭಿಸಬಹುದು‘ ಎಂದೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT