ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ದಿನದ ಕೌತುಕ: ಜಯದ ಆಸೆ ಚಿಗುರಿಸಿದ ಅಯ್ಯರ್, ಸಹಾ

ಗ್ರೀನ್ ಪಾರ್ಕ್ ಪಿಚ್‌ನಲ್ಲಿ ಕಿವೀಸ್‌ಗೆ ಕಠಿಣ ಹಾದಿ: ಕೊನೆಯ ದಿನದ ಕೌತುಕ
Last Updated 28 ನವೆಂಬರ್ 2021, 19:26 IST
ಅಕ್ಷರ ಗಾತ್ರ

ಕಾನ್ಪುರ: ಪದಾರ್ಪಣೆಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್, ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಹೊಡೆದು ದಾಖಲೆ ಪುಟ ಸೇರಿದರು. ಅವರಿಗೆ ತಕ್ಕ ಜೊತೆ ನೀಡಿದ ವೃದ್ಧಿಮಾನ್ ಸಹಾ ಅರ್ಧಶತಕದ ಬಲದಿಂದ ಭಾರತ ತಂಡವು ನ್ಯೂಜಿಲೆಂಡ್‌ಗೆ ಕಠಿಣ ಸವಾಲೊಡ್ಡಿದೆ.

ಗ್ರೀನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ನಾಲ್ಕನೇ ದಿನ ಕಿವೀಸ್ ಬಳಗಕ್ಕೆ 284 ರನ್‌ಗಳ ಗೆಲುವಿನ ಗುರಿ ನೀಡಿದೆ. ಭಾನುವಾರ 7 ವಿಕೆಟ್‌ಗಳಿಗೆ 234 ರನ್ ಗಳಿಸಿದ ಅಜಿಂಕ್ಯ ರಹಾನೆ ಬಳಗವು ಡಿಕ್ಲೇರ್ ಮಾಡಿಕೊಂಡಿತು. ಗುರಿ ಬೆನ್ನಟ್ಟಿದ ಕೇನ್ ವಿಲಿಯಮ್ಸನ್ ಬಳಗವು ದಿನದಾಟದ ಕೊನೆಗೆ 4 ಓವರ್‌ಗಳಲ್ಲಿ 1 ವಿಕೆಟ್‌ಗೆ 4 ರನ್ ಗಳಿಸಿದೆ. ಪಿಚ್‌ನಲ್ಲಿ ಸತ್ವ ಕಡಿಮೆಯಾಗಿದ್ದು ಚೆಂಡು ತೀರಾ ಕೆಳಮಟ್ಟದಲ್ಲಿ ಚಲಿಸುತ್ತಿದೆ. ಅನಿರೀಕ್ಷಿತ ತಿರುವು ಮತ್ತು ಬೌನ್ಸ್‌ ಇರುವುದರಿಂದ ಬ್ಯಾಟಿಂಗ್ ಮಾಡುವುದು ತುಸು ಕಷ್ಟವಾಗುವ ಸಾಧ್ಯತೆ ಇದೆ. ಕೊನೆಯ ದಿನದಂದು ಭಾರತದ ಮೂವರು ಸ್ಪಿನ್ನರ್‌ಗಳನ್ನು ಎದುರಿಸಿ ನಿಂತು ಜಯ ಗಳಿಸುವುದು ಕಿವೀಸ್‌ ಮುಂದಿರುವ ಕಠಿಣ ಸವಾಲು. ಬಹಳಷ್ಟು ಸಹನೆ ಮತ್ತು ಎಚ್ಚರಿಕೆಯಿಂದ ಆಡಿದರೆ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳುವ ಅವಕಾಶವೂ ಕೇನ್ ಬಳಗಕ್ಕೆ ಇದೆ.

ಮೂರನೇ ದಿನವಾದ ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 49 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 14 ರನ್ ಗಳಿಸಿತ್ತು. ಭಾನುವಾರ ಬೆಳಿಗ್ಗೆ ಕೈಲ್ ಜೆಮಿಸನ್ ಮತ್ತು ಟಿಮ್ ಸೌಥಿ ಅವರ ಬಿರುಗಾಳಿ ವೇಗದ ಮುಂದೆ ಆತಿಥೇಯ ಬಳಗದ ವಿಕೆಟ್‌ಗಳು ಪಟಪಟನೆ ಉರುಳತೊಡಗಿದವು. 51 ರನ್‌ಗಳಾಗುವಷ್ಟರಲ್ಲಿ ಐದು ವಿಕೆಟ್‌ಗಳು ಪತನವಾಗಿದ್ದವು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಹೊಡೆದಿದ್ದ ರವೀಂದ್ರ ಜಡೇಜ ಖಾತೆಯನ್ನೇ ತೆರೆಯಲಿಲ್ಲ. ಮಯಂಕ ಅಗರವಾಲ್ (17), ಚೇತೇಶ್ವರ್ ಪೂಜಾರ (22) ಮತ್ತು ನಾಯಕ ರಹಾನೆ (4) ಅವರ ವೈಫಲ್ಯ ಮುಂದುವರಿಯಿತು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಮೂಡಿತ್ತು.

ಮುಂಬೈಕರ್ ಶ್ರೇಯಸ್ ಅಯ್ಯರ್ (65; 125ಎಸೆತ, 8ಬೌಂಡರಿ, 1ಸಿಕ್ಸರ್) ದಿಟ್ಟತನದ ಬ್ಯಾಟಿಂಗ್ ಮಾಡಿದರು. ಅವರಿಗೆ ಆರ್. ಅಶ್ವಿನ್ ಜೊತೆ ನೀಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 52 ರನ್ ಸೇರಿಸಿ ತಂಡದ ಮೊತ್ತ 100 ಗಡಿ ದಾಟುವಂತೆ ನೋಡಿಕೊಂಡರು. 40ನೇ ಓವರ್‌ನಲ್ಲಿ ಅಶ್ವಿನ್ ವಿಕೆಟ್ ಗಳಿಸಿದ ಜೆಮಿಸನ್ ಜೊತೆಯಾಟ ಮುರಿದರು. ಆದರೆ, ಕಿವೀಸ್‌ಗೆ ನಿಜವಾದ ಸವಾಲು ಎದುರಾಗಿದ್ದು ಈ ಹಂತದಲ್ಲಿಯೇ!

ಕ್ರೀಸ್‌ಗೆ ಬಂದ ವೃದ್ಧಿಮಾನ್ ಸಹಾ ಅವರು ಅಯ್ಯರ್ ಜೊತೆಗೂಡಿ ಇನಿಂಗ್ಸ್‌ಗೆ ಬಲ ತುಂಬಿದರು. ಶನಿವಾರ ಕತ್ತುನೋವಿನಿಂದಾಗಿ ವಿಕೆಟ್‌ಕೀಪಿಂಗ್ ಮಾಡದೇ ವಿಶ್ರಾಂತಿ ಪಡೆದಿದ್ದ ಸಹಾ ಸುಂದರವಾದ ಬ್ಯಾಟಿಂಗ್ ಮಾಡಿದರು. ಇನ್ನೊಂದೆಡೆ ಅಯ್ಯರ್ ಕಿವೀಸ್ ಬೌಲರ್‌ಗಳ ಅಸ್ತ್ರಗಳಿಗೆ ತಕ್ಕ ಉತ್ತರ ಕೊಟ್ಟರು. ಏಳನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ಗಳನ್ನು ಸೇರಿಸಿದರು. ಶ್ರೇಯಸ್ 109 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಚಹಾ ವಿರಾಮಕ್ಕೂ ಸ್ವಲ್ಪ ಮುಂಚೆ ಶ್ರೇಯಸ್ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದ ಸೌಥಿ ಜೊತೆಯಾಟವನ್ನು ಮುರಿದರು.

ಸಹಾ ಜೊತೆಗೂಡಿದ ಆಲ್‌ರೌಂಡರ್ ಅಕ್ಷರ್ ಪಟೇಲ್ (ಔಟಾಗದೆ 28) ಆಟದ ರಂಗು ಹೆಚ್ಚಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿ ಭಾರತದ ಮುನ್ನಡೆಗೆ ಕಾರಣರಾಗಿದ್ದ ಅಕ್ಷರ್, ಸಹಾ ಜೊತೆಗೆ 67 ರನ್‌ ಸೇರಿಸಿದರು. ಸಹಾ 115 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

* ಸ್ಪರ್ಧಾತ್ಮಕ ಮೊತ್ತ ಗಳಿಸುವುದು ನಮ್ಮ ಗುರಿಯಾಗಿತ್ತು. ಉತ್ತಮ ಮೊತ್ತ ಗಳಿಸಿದ್ದೇವೆ. ನಮ್ಮ ಸ್ಪಿನ್ನರ್‌ಗಳು ಸೋಮವಾರ ತಂಡವನ್ನು ಜಯದತ್ತ ಮುನ್ನಡೆಸುವರು

–ಶ್ರೇಯಸ್ ಅಯ್ಯರ್,ಭಾರತ ತಂಡದ ಬ್ಯಾಟ್ಸ್‌ಮನ್

ಸ್ಕೋರ್‌ ಕಾರ್ಡ್‌

ಭಾರತ ಮೊದಲ ಇನಿಂಗ್ಸ್ 345 (111.1 ಓವರ್‌)

ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್ 296 (142.3 ಓವರ್‌)

ಭಾರತ 2ನೇ ಇನಿಂಗ್ಸ್7ಕ್ಕೆ 234 ಡಿಕ್ಲೇರ್ಡ್‌ (81 ಓವರ್‌)

(ಶನಿವಾರ5 ಓವರ್‌ಗಳಲ್ಲಿ 1 ವಿಕೆಟ್‌ಗೆ 14)

ಮಯಂಕ್‌ ಸಿ ಲಥಾಮ್‌ ಬಿ ಸೌಥಿ 17 (53ಎ, 4X3), ಪೂಜಾರ ಸಿ ಬ್ಲಂಡೆಲ್‌ ಬಿ ಜೆಮಿಸನ್‌ 22 (33ಎ, 4X3), ಅಜಿಂಕ್ಯ ಎಲ್‌ಬಿಡಬ್ಲ್ಯು ಎಜಾಜ್‌ 4 (15ಎ, 4X1), ಶ್ರೇಯಸ್‌ ಸಿ ಬ್ಲಂಡೆಲ್‌ ಬಿ ಸೌಥಿ 65 (125ಎ, 4X8, 6X1), ಜಡೇಜ ಎಲ್‌ಬಿಡಬ್ಲ್ಯು ಸೌಥಿ 0 (2ಎ), ಅಶ್ವಿನ್‌ ಬಿ ಜೆಮಿಸನ್‌ 32 (62ಎ, 4X5), ಸಹಾ ಔಟಾಗದೆ 61 (126ಎ, 4X4, 6X1), ಅಕ್ಷರ್‌ ಔಟಾಗದೆ 28 (67ಎ, 4X2, 6X1) ಇತರೆ (ಬೈ 3, ಲೆಗ್‌ಬೈ 1) 4

ವಿಕೆಟ್ ಪತನ: 2-32 (ಚೇತೇಶ್ವರ್‌ ಪೂಜಾರ, 11.1), 3-41 (ಅಜಿಂಕ್ಯ ರಹಾನೆ, 14.5), 4-51 (ಮಯಂಕ್ ಅಗರವಾಲ್‌, 19.2), 5-51 (ರವೀಂದ್ರ ಜಡೇಜ, 19.4), 6-103 (ರವಿಚಂದ್ರನ್ ಅಶ್ವಿನ್‌, 39.2), 7-167 (ಶ್ರೇಯಸ್‌ ಅಯ್ಯರ್‌, 60.2)

ಬೌಲಿಂಗ್‌: ಟಿಮ್ ಸೌಥಿ 22–2–75–3, ಕೈಲ್ ಜೆಮಿಸನ್‌ 17–6–40–3, ಎಜಾಜ್ ಪಟೇಲ್‌ 17–3–60–1, ರಚಿನ್ ರವೀಂದ್ರ 9–3–17–0, ವಿಲಿಯಮ್ ಸೋಮರ್‌ವಿಲ್‌ 16–2–38–0

ನ್ಯೂಜಿಲೆಂಡ್‌ ಎರಡನೇ ಇನಿಂಗ್ಸ್ 1ಕ್ಕೆ 4 (4 ಓವರ್‌))

ಲಥಾಮ್‌ ಬ್ಯಾಟಿಂಗ್‌ 2 (13ಎ), ಯಂಗ್‌ ಎಲ್‌ಬಿಡಬ್ಲ್ಯು ಅಶ್ವಿನ್‌ 2 (6ಎ), ಸೋಮರ್‌ವಿಲ್‌ ಬ್ಯಾಟಿಂಗ್‌ 0 (5ಎ)

ವಿಕೆಟ್ ಪತನ: 1–3 (ವಿಲ್ ಯಂಗ್‌, 2.6)

ಬೌಲಿಂಗ್‌: ರವಿಚಂದ್ರನ್ ಅಶ್ವಿನ್‌ 2–0–3–1, ಅಕ್ಷರ್ ಪಟೇಲ್ 2–1–1–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT