ಶನಿವಾರ, ಮೇ 21, 2022
28 °C
ಆಟಗಾರರಿಗೆ ಕೋವಿಡ್: ಪುಣೆಯಿಂದ ಪಂದ್ಯ ಸ್ಥಳಾಂತರ

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್: ರಿಷಭ್ –ಮಯಂಕ್ ಮುಖಾಮುಖಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಕೋವಿಡ್ ಪ್ರಕರಣಗಳು ವರದಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯವನ್ನು ಪುಣೆಯಿಂದ ಮುಂಬೈಗೆ ಸ್ಥಳಾಂತರಿಸಲಾಗಿದೆ. 

ಪಂದ್ಯವು ಬುಧವಾರ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಡೆಲ್ಲಿ ತಂಡದ ಆಟಗಾರ ಮಿಚೆಲ್ ಮಾರ್ಷ್, ಫಿಸಿಯೊ ಪ್ಯಾಟ್ರಿಕ್ ಫರ್ಹಾಟ್, ಮಸಾಜ್ ತಜ್ಞ ಚೇತನ್ ಕುಮಾರ್, ವೈದ್ಯ ಅಭಿಜಿತ್ ಸಾಳ್ವಿ ಮತ್ತು ಸಾಮಾಜಿಕ ಜಾಲತಾಣ ನಿರ್ವಾಹಕ ತಂಡದ ಸದಸ್ಯ ಆಕಾಶ್ ಮಾನೆ ಅವರು ಸೋಂಕಿತರಾಗಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ.

‘ಪೂರ್ವನಿರ್ಧರಿತ ವೇಳಾಪಟ್ಟಿಯ 32ನೇ ಪಂದ್ಯ ಇದಾಗಿದೆ. ಪುಣೆಯಲ್ಲಿ ನಡೆಯಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಮುಂಬೈಗೆ ಸ್ಥಳಾಂತರಿಸಲಾಗಿದೆ. ಬಸ್‌ನಲ್ಲಿ ದೀರ್ಘ ನಗರಗಳ ನಡುವಣ ಪ್ರಯಾಣದ ಸಂದರ್ಭದಲ್ಲಿ ಕೋವಿಡ್ ಪ್ರಸರಣವು ಉಲ್ಬಣಿಸದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. 

ಡೆಲ್ಲಿ ಆಟಗಾರರನ್ನು ಬುಧವಾರ ಬೆಳಿಗ್ಗೆ ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗುವುದು. ಸೋಂಕಿನಿಂದ ಮುಕ್ತರಾದರೆ ಮಾತ್ರ  ಆಡುವ ಅವಕಾಶ ಪಡೆಯುವರು. ಮಂಗಳವಾರದ ಪರೀಕ್ಷೆಗೊಳಗಾದ ಇನ್ನುಳಿದ  ಆಟಗಾರರು ಆರೋಗ್ಯವಾಗಿದ್ದಾರೆ ಎಂದು ತಿಳಿಸಲಾಗಿದೆ.  ಡೆಲ್ಲಿ ತಂಡವು ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದೆ. ಮೂರರಲ್ಲಿ ಸೋತಿದೆ.  ಪಂಜಾಬ್ ತಂಡವು 6 ಪಂದ್ಯಗಳಲ್ಲಿ ಆಡಿ 3ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಹೋದ ಪಂದ್ಯದಲ್ಲಿ ಗಾಯಗೊಂಡು ಹೊರಗುಳಿದಿದ್ದ ನಾಯಕ ಮಯಂಕ್ ಅಗರವಾಲ್ ಈ ಪಂದ್ಯಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. ‘ಪಂದ್ಯ ಆಡಲು ನಾವು ಪುಣೆಗೆ ಪಯಣಿಸಬೇಕಿತ್ತು. ಆದರೆ ಮುಂಬೈನಲ್ಲಿಯೇ ಉಳಿಯುವಂತೆ ಸೂಚನೆ ಬಂದ ಕಾರಣ ಪ್ರಯಾಣ ಮಾಡಲಿಲ್ಲ’ ಎಂದು ಪಂಜಾಬ್ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು