ಭಾನುವಾರ, ಮಾರ್ಚ್ 26, 2023
23 °C
ಎರಡು ಪಂದ್ಯಗಳ ಟಿಕೆಟ್‌ ಬಿಕರಿ?

ಐಪಿಎಲ್‌ ಟಿಕೆಟ್‌ಗೆ ಭಾರಿ ಬೇಡಿಕೆ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನಜಂಗುಳಿ;

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೂರು ವರ್ಷಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳು ನಡೆಯಲಿವೆ. ಅದರಿಂದಾಗಿ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಕುದುರಿದೆ.

ಕಳೆದ ಎರಡು ದಿನಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರದಿಂದ ಆನ್‌ಲೈನ್ (www.royalchallengers.com) ಮೂಲಕ ಟಿಕೆಟ್ ಮಾರಾಟ ಆರಂಭಿಸಿದೆ. ಶನಿವಾರ ಬಾಕ್ಸ್‌ ಆಫೀಸ್ (ಗೇಟ್ 2 ಮತ್ತು 18ರ ಕೌಂಟರ್‌ಗಳು) ಮಾರಾಟ ಕೂಡ ಆರಂಭವಾಯಿತು. ಬೆಳಿಗ್ಗೆ 8ರಿಂದಲೇ ಕ್ರೀಡಾಂಗಣದ ಹೊರಗೆ ಜನರು ಸೇರಿದ್ದರು. ಮಧ್ಯಾಹ್ನದವರೆಗೂ ಬಿಸಿಲಿನಲ್ಲಿಯೇ ನಿಂತು ಟಿಕೆಟ್ ಖರೀದಿಸಿದರು. ಜನದಟ್ಟಣೆ ನಿರ್ವಹಿಸಲು ಪೊಲೀಸರು ಶ್ರಮಿಸಬೇಕಾಯಿತು.

2019ರಲ್ಲಿ ಇಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದವು. ಆದರೆ ಕೋವಿಡ್‌ನಿಂದಾಗಿ ಕಳೆದ ಮೂರು ಆವೃತ್ತಿಗಳ ಪಂದ್ಯಗಳು ಇಲ್ಲಿ ಆಯೋಜನೆಗೊಂಡಿರಲಿಲ್ಲ. ಸದ್ಯ ಕೆಲವು ಶಾಲೆ, ಕಾಲೇಜುಗಳಲ್ಲಿ ಪರೀಕ್ಷೆಗಳೂ ಮುಗಿದಿದ್ದು ಯುವ ಅಭಿಮಾನಿಗಳು ಕ್ರೀಡಾಂಗಣದತ್ತ ಮುಖ ಮಾಡಿದ್ದಾರೆ.

‘ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಅದರಲ್ಲೂ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದ್ದರಿಂದ ಅವರ ಆಟವನ್ನು ನೋಡುವ ಅವಕಾಶ ಈಗ ಇದೆ. ಅದಕ್ಕಾಗಿಯೇ ಸ್ನೇಹಿತರೊಂದಿಗೆ ವೀಕ್ಷಿಸಲು ಐದು ವಿಕೆಟ್ ತೆಗೆದುಕೊಂಡಿರುವೆ’ ಎಂದು ನಗರದ ಕಾಲೇಜೊಂದರ ವಿದ್ಯಾರ್ಥಿ ಮುಕುಂದ್ ಹೇಳಿದರು.

ಬೆಂಗಳೂರಿನಲ್ಲಿ ಒಟ್ಟು ಏಳು ಪಂದ್ಯಗಳು ನಡೆಯಲಿವೆ. ಏಪ್ರಿಲ್ 2ರಂದು ನಡೆಯುವ ಮೊದಲ ಪಂದ್ಯದಲ್ಲಿ ಆರ್‌ಸಿಬಿಯು ಮುಂಬೈ ಇಂಡಿಯನ್ಸ್‌ ಬಳಗವನ್ನು ಎದುರಿಸಲಿದೆ. ಏ. 10ರಂದು ನಡೆಯುವ ಪಂದ್ಯದಲ್ಲಿ ಆರ್‌ಸಿಬಿಯು ಲಖನೌ ಸೂಪರ್ ಜೈಂಟ್ಸ್‌ ತಂಡದ ವಿರುದ್ಧ ಆಡಲಿದೆ.

‘ಆನ್‌ಲೈನ್‌ನಲ್ಲಿ ಟಿಕೆಟ್‌ಗಳು ಭರದಿಂದ ಮಾರಾಟವಾಗುತ್ತಿವೆ. ಬಾಕ್ಸ್‌ ಆಫೀಸ್‌ನಲ್ಲಿಯೂ ಜನರು ಮುಗಿಬಿದ್ದಿದ್ದರು. ಮೊದಲ ಎರಡು ಪಂದ್ಯಗಳಿಗೆ ಮಾತ್ರ ಟಿಕೆಟ್ ಮಾರಾಟವಾಗಿವೆ’ ಎಂದು ಆರ್‌ಸಿಬಿ ಮೂಲಗಳು ತಿಳಿಸಿವೆ.

ಕ್ರೀಡಾಂಗಣದ ವಿವಿಧ ಗ್ಯಾಲರಿಗಳ ಟಿಕೆಟ್‌ ದರ ₹ 1,655 ರಿಂದ (ಜಿಎಸ್‌ಟಿ ಹೊರತುಪಡಿಸಿ) ಆರಂಭಗೊಂಡು ₹ 33,086ರ ವರೆಗೆ ಇರಲಿದೆ. ವಿವಿಧ ಪಂದ್ಯಗಳಿಗೆ ಬೇರೆ ಬೇರೆ ಟಿಕೆಟ್‌ ದರವನ್ನು ನಿಗದಿಗೊಳಿಸಲಾಗಿದೆ ಎಂದೂ ಫ್ರ್ಯಾಂಚೈಸಿ ತಿಳಿಸಿದೆ.

ಇದುವರೆಗೆ ಆನ್‌ಲೈನ್ ಹಾಗೂ ಕೌಂಟರ್‌ಗಳಲ್ಲಿ ಮಾರಾಟವಾದ ಟಿಕೆಟ್‌ಗಳ ಸಂಖ್ಯೆಯ ಮಾಹಿತಿಯನ್ನು ಫ್ರ್ಯಾಂಚೈಸಿ ಬಹಿರಂಗಗೊಳಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು