ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯ; ಭಾರತ ತಂಡಕ್ಕೆ ಗೌರವ ಉಳಿಸುವ ಛಲ

ಲಿಜೆಲಿ ಲೀ, ಲೌರಾ ವೊಲ್ವರ್ಟ್‌ ಮೇಲೆ ಕಣ್ಣು
Last Updated 22 ಮಾರ್ಚ್ 2021, 13:51 IST
ಅಕ್ಷರ ಗಾತ್ರ

ಲಖನೌ: ಸರಣಿಯನ್ನು ಈಗಾಗಲೇ ಕೈಚೆಲ್ಲಿರುವ ಭಾರತ ಮಹಿಳಾ ತಂಡದವರು ದಕ್ಷಿಣ ಆಫ್ರಿಕಾ ಮಹಿಳೆಯರ ಎದುರಿನ ಟಿ20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಮಂಗಳವಾರ ಗೌರವ ಉಳಿಸಿಕೊಳ್ಳುವ ಛಲದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಏಕದಿನ ಸರಣಿಯಲ್ಲಿ ನೀರಸ ಆಟವಾಡಿದ ಭಾರತ ತಂಡ ಟಿ20 ಸರಣಿಯಲ್ಲಿ ಸವಾಲು ಎಸೆಯುವಲ್ಲಿ ಯಶಸ್ವಿಯಾಗಿದೆ. ಎರಡನೇ ಪಂದ್ಯದಲ್ಲಿ ಗೆಲುವಿನ ಸನಿಹ ತಲು‍ಪಿದ್ದ ತಂಡ ಕೊನೆಯಲ್ಲಿ ಸೋಲಿನ ದವಡೆಗೆ ಸಿಲುಕಿ ಸರಣಿಯನ್ನು ಕಳೆದುಕೊಂಡಿತ್ತು. ಏಕಾನ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ ತಂಡ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಲಿದೆ.

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯನ್ನು 1–4ರಲ್ಲಿ ಮಿಥಾಲಿ ಬಳಗ ಕಳೆದುಕೊಂಡಿತ್ತು. ಟಿ20ಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ ಆಡಲು ಸಾಧ್ಯವಾಗದೇ ಇದ್ದರೂ ಯುವ ಆಟಗಾರ್ತಿಯರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಭರ್ಜರಿ ಆಟವಾಡಿದ್ದಾರೆ. ಆದರೂ ದಕ್ಷಿಣ ಆಫ್ರಿಕಾ ಎದುರು ಮೊದಲ ಬಾರಿ ಟಿ20 ಸರಣಿ ಸೋತ ಕಳಂಕ ತಂಡಕ್ಕೆ ತಟ್ಟಿದೆ.

ಹಂಗಾಮಿ ನಾಯಕಿ ಸ್ಮೃತಿ ಮಂದಾನ ಎದುರಾಳಿಗಳನ್ನು ನಿಯಂತ್ರಿಸುವ ತಂತ್ರ ಹೆಣೆಯುವಲ್ಲಿ ವಿಫಲರಾಗಿದ್ದಾರೆ. ಕಳಪೆ ಫೀಲ್ಡಿಂಗ್‌ ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿಯರು ನಿರೀಕ್ಷಿತ ಮಟ್ಟದಲ್ಲಿ ಆಡದೇ ಇರುವುದು ತಂಡಕ್ಕೆ ತಲೆನೋವಾಗಿದೆ.

ಹರ್ಲೀನ್ ಡಿಯೋಲ್ ಮತ್ತು ಶೆಫಾಲಿ ವರ್ಮಾ ಎರಡೂ ಪಂದ್ಯಗಳಲ್ಲಿ ವೇಗವಾಗಿ ರನ್ ಕಲೆ ಹಾಕಿದ್ದಾರೆ. ಆದರೆ ಅನುಭವಿಗಳಾದ ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್‌ಗೆ ಮಿಂಚಲು ಆಗಲಿಲ್ಲ. ಬೌಲರ್‌ಗಳು ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಾಣಲಿಲ್ಲ.

ದಕ್ಷಿಣ ಆಫ್ರಿಕಾದ ಲಿಜೆಲಿ ಲೀ, ಅನೆಕಿ ಬಾಶ್‌ ಮತ್ತು ಲೌರಾ ವೊಲ್ವರ್ಟ್‌ ಅವರು ಸ್ಫೋಟಕ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು ನಾಯಕಿ ಸುನೆ ಲೂಜ್‌ ಕೂಡ ಮಿಂಚುತ್ತಿದ್ದಾರೆ. ಶಬ್ನಿಮ್ ಇಸ್ಮಾಯಿಲ್ ಅವರೊಂದಿಗೆ ಬಾಶ್‌ ಬೌಲಿಂಗ್‌ನಲ್ಲೂ ಸಾಧನೆ ಮಾಡಿದ್ದಾರೆ. ಕೊನೆಯ ಪಂದ್ಯದಲ್ಲಿ ಇವರೆಲ್ಲರನ್ನು ಭಾರತ ತಂಡ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲ ಕೆರಳಿಸಿರುವ ವಿಷಯ.

ಪಂದ್ಯ ಆರಂಭ: ಸಂಜೆ 7.00; ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT