ಭಾನುವಾರ, ಅಕ್ಟೋಬರ್ 2, 2022
19 °C
ಟಿ20: ಗುಲ್ಬರ್ಗಾ ಮಿಸ್ಟಿಕ್ಸ್‌ಗೆ ಮಣಿದ ಬೆಂಗಳೂರು ಬ್ಲಾಸ್ಟರ್ಸ್‌

ಮತ್ತೆ ಮಿಂಚಿದ ದೇವದತ್ತ ಪಡಿಕ್ಕಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಆಟ ಮುಂದುವರಿಸಿದ ದೇವದತ್ತ ಪಡಿಕ್ಕಲ್‌ ಅವರು ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡಕ್ಕೆ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಆರು ವಿಕೆಟ್‌ಗಳ ಜಯ ತಂದಿತ್ತರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬ್ಲಾಸ್ಟರ್ಸ್‌ 20 ಓವರ್‌ಗಳಲ್ಲಿ 9ಕ್ಕೆ 144 ರನ್‌ ಗಳಿಸಿದರೆ, ಗುಲ್ಬರ್ಗಾ ತಂಡ 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 150 ರನ್‌ ಗಳಿಸಿ ಜಯ ಸಾಧಿಸಿತು.

ಅಜೇಯ 78 ರನ್‌ ಗಳಿಸಿದ ಪಡಿಕ್ಕಲ್‌ ಹಾಗೂ ಚುರುಕಿನ ಬೌಲಿಂಗ್‌ ಪ್ರದರ್ಶನ ನೀಡಿದ ವಿದ್ವತ್‌ ಕಾವೇರಪ್ಪ (31ಕ್ಕೆ 3) ಮತ್ತು ಮನೋಜ್‌ ಭಾಂಡಗೆ (23ಕ್ಕೆ 3) ಅವರು ಗುಲ್ಬರ್ಗಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಪಡೆದ ಮಿಸ್ಟಿಕ್ಸ್‌ ತಂಡ ಎಂಟು ಪಾಯಿಂಟ್‌ಗಳೊಂದಿಗೆ ಜಂಟಿ ಎರಡನೇ ಸ್ಥಾನಕ್ಕೇರಿತು. ಸೋತರೂ ಬ್ಲಾಸ್ಟರ್ಸ್ ತಂಡ 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಸಾಧಾರಣ ಗುರಿ ಬೆನ್ನಟ್ಟಿದ ಗುಲ್ಬರ್ಗಾ ತಂಡ ರೋಹನ್‌ ಪಾಟೀಲ್‌ (1) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಪಡಿಕ್ಕಲ್‌ ಅವರು ಜೆಸ್ವಂತ್‌ ಆಚಾರ್ಯ (18), ಕೆ.ಎಲ್‌.ಶ್ರೀಜಿತ್‌ ಮತ್ತು ಮನೀಷ್‌ ಪಾಂಡೆ ನೆರವಿನಿಂದ ಇನಿಂಗ್ಸ್‌ಗೆ ಬಲ ತುಂಬಿ ಗೆಲುವಿನತ್ತ ಮುನ್ನಡೆಸಿದರು. 61 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಮತ್ತು 4 ಸಿಕ್ಸರ್‌ ಹೊಡೆದರು.

ಬ್ಯಾಟಿಂಗ್‌ ವೈಫಲ್ಯ: ಹಿಂದಿನ ಪಂದ್ಯದಲ್ಲಿ ಅಬ್ಬರದ ಆಟವಾಡಿದ್ದ ಬ್ಲಾಸ್ಟರ್ಸ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ನಾಯಕ ಮಯಂಕ್‌ ಅಗರವಾಲ್‌ (28) ‘ಟಾಪ್‌ ಸ್ಕೋರರ್‌’ ಎನಿಸಿಕೊಂಡರು.

ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಎಲ್‌.ಆರ್‌.ಚೇತನ್‌ ಕೇವಲ ಆರು ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಅನಿರುದ್ಧ ಜೋಶಿ (4) ಕೂಡಾ ಬೇಗನೇ ಔಟಾದರು.

ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಬ್ಲಾಸ್ಟರ್ಸ್‌ 20 ಓವರ್‌ಗಳಲ್ಲಿ 9ಕ್ಕೆ 144 (ಮಯಂಕ್‌ ಅಗರವಾಲ್ 28, ಕೆ.ವಿ.ಅನೀಶ್‌ 20, ಎಸ್‌.ರಕ್ಷಿತ್‌ 16, ಕ್ರಾಂತಿ ಕುಮಾರ್‌ 17, ಜೆ.ಸುಚಿತ್‌ 17, ವಿದ್ವತ್‌ ಕಾವೇರಪ್ಪ 31ಕ್ಕೆ 3, ಮನೋಜ್‌ ಭಾಂಡಗೆ 23ಕ್ಕೆ 3, ಕುಶಾಲ್‌ ವಾಧ್ವಾನಿ 17ಕ್ಕೆ 2)

ಗುಲ್ಬರ್ಗಾ ಮಿಸ್ಟಿಕ್ಸ್‌ 17.3 ಓವರ್‌ಗಳಲ್ಲಿ 4ಕ್ಕೆ 150 (ದೇವದತ್ತ ಪಡಿಕ್ಕಲ್‌ ಔಟಾಗದೆ 78, ಜೆಸ್ವಂತ್‌ ಆಚಾರ್ಯ 18, ಕೆ.ಎಲ್‌.ಶ್ರೀಜಿತ್‌ 12, ಮನೀಷ್‌ ಪಾಂಡೆ 13, ರೋನಿತ್‌ ಮೋರೆ 18ಕ್ಕೆ 1, ಕ್ರಾಂತಿ ಕುಮಾರ್ 16ಕ್ಕೆ 1) ಫಲಿತಾಂಶ: ಮಿಸ್ಟಿಕ್ಸ್‌ಗೆ ಆರು ವಿಕೆಟ್‌ ಗೆಲುವು

ಇಂದಿನ ಪಂದ್ಯಗಳು: ಹುಬ್ಬಳ್ಳಿ ಟೈಗರ್ಸ್‌– ಶಿವಮೊಗ್ಗ ಸ್ಟ್ರೈಕರ್ಸ್‌ (ಮಧ್ಯಾಹ್ನ 3)

ಮಂಗಳೂರು ಯುನೈಟೆಡ್‌– ಗುಲ್ಬರ್ಗಾ ಮಿಸ್ಟಿಕ್ಸ್‌ (ಸಂಜೆ 7)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು