ಗ್ಲೌಸ್‌: ಪಟ್ಟು ಬಿಡದ ಐಸಿಸಿ

ಬುಧವಾರ, ಜೂನ್ 26, 2019
29 °C

ಗ್ಲೌಸ್‌: ಪಟ್ಟು ಬಿಡದ ಐಸಿಸಿ

Published:
Updated:
Prajavani

ಲಂಡನ್: ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಅವರು ತಮ್ಮ ಕೈಗವಸಿನ ಮೇಲೆ ಹಾಕಿಸಿ
ಕೊಂಡಿರುವ ‘ಕಠಾರಿ ಮುದ್ರೆ’ಯನ್ನು ತೆಗೆದುಹಾಕಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಟ್ಟು ಹಿಡಿದಿದೆ.

‘ವಿಶ್ವಕಪ್ ಟೂರ್ನಿಯ ಮುಂಬರುವ ಪಂದ್ಯಗಳಲ್ಲಿಯೂ ಧೋನಿ ಅದೇ ಕೈಗವಸು  ಧರಿಸಿ ಆಡಲು ಅನುಮತಿ ನೀಡಬೇಕು’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮನವಿ ಮಾಡಿತ್ತು.  ಇದಕ್ಕೆ ಪ್ರತಿಕ್ರಿಯಿಸಿರುವ ಐಸಿಸಿಯ ಮುಖ್ಯ ವ್ಯವಸ್ಥಾಪಕ ಕ್ಲೇರ್ ಫರ್ಲಾಂಗ್ ಅವರು ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಜೂನ್ ಐದರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೌತಾಂಪ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಧೋನಿ ತಾವು ಧರಿಸಿದ್ದ ಕೈಗವಸುಗಳಿಗಾಗಿ ಐಸಿಸಿಯಿಂದ ಅನುಮತಿ ಪಡೆದಿರಲಿಲ್ಲ. ಆಟಗಾರರು ವೈಯಕ್ತಿಕ ಸಂದೇಶಗಳು ಅಥವಾ ಲೋಗೊಗಳನ್ನು ತಮ್ಮ ಪೋಷಾಕು ಅಥವಾ ಆಟದ ಸಲಕರಣೆಗಳ ಮೇಲೆ ಪ್ರದರ್ಶಿಸಲು ನಿಯಮದಲ್ಲಿ ಅವಕಾಶವಿಲ್ಲ. ವಿಕೆಟ್‌ಕೀಪರ್‌ ಕೈಗವಸುಗಳಿಗೆ ಸಂಬಂಧಿಸಿದಂತೆ ಇರುವ ನಿಯಮವನ್ನು ಧೋನಿ ಉಲ್ಲಂಘಿಸಿದ್ದಾರೆ’ ಎಂದು ಫರ್ಲಾಂಗ್ ಹೇಳಿದ್ದಾರೆ.

ಆಟಗಾರರು ಯಾವುದೇ ಸಲಕರಣೆಯ ಮೇಲೆ  ಐಸಿಸಿಯಿಂದ ಅನುಮತಿ ಪಡೆದಿರುವ ಎರಡು ಲೋಗೊಗಳನ್ನು ಮಾತ್ರ ಹಾಕಬೇಕು.  ಆದರೆ, ಧೋನಿಯ ಕೈಗವಸಿನ ಮೇಲೆ ಕಠಾರಿ ಮುದ್ರೆ ಸೇರಿದಂತೆ ಮೂರು ಲೋಗೊಗಳು ಇವೆ.

ಈ ವಿವಾದದ ಕುರಿತು ಇಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ. ಶನಿವಾರ ಅವರು ಇಲ್ಲಿಗೆ ಬರಲಿದ್ದಾರೆ.

ಧೋನಿ ಕೈಗವಸುಗಳ ಮೇಲಿದ್ದ ‘ಕಠಾರಿ ಮುದ್ರೆ’ ಗಮನ ಸೆಳೆದಿತ್ತು.

ಏನಿದು ಬಲಿದಾನ ಬ್ಯಾಜ್?

ಸೇನೆಯ ಕಮಾಂಡೊಗಳು ಬಳಸುವ ಕಠಾರಿಯನ್ನು ಕೆಳಮುಖವಾಗಿ ಇರಿಸಿ, ಅದರ ಸುತ್ತ ಲೋಹದ ರೆಕ್ಕೆಗಳಿರುವಂತೆ ಮುದ್ರೆಯನ್ನು ಸಿದ್ಧಪಡಿಸಲಾಗಿದೆ. ಕಠಾರಿಯ ಮೇಲ್ಮೈನಲ್ಲಿ ‘ಬಲಿದಾನ್’ ಎಂದು ದೇವನಾಗರಿಯಲ್ಲಿ ಬರೆಯಲಾಗಿದೆ. ಬೆಳ್ಳಿಯಿಂದ ಇದನ್ನು ಸಿದ್ಧಪಡಿಸಲಾಗಿದೆ. ಪ್ಯಾರಾಮಿಲಿಟರಿ ಕಮಾಂಡೊಗಳು ಮಾತ್ರ ಇದನ್ನು ಬಳಸಲು ಅನುಮತಿ ಇದೆ.

***

ಧೋನಿ ಇಂಗ್ಲೆಂಡ್‌ಗೆ ಹೋಗಿರುವುದು ಮಹಾಭಾರತಕ್ಕಾಗಿ ಅಲ್ಲ. ಭಾರತದ ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಮೂರ್ಖತನ. ಭಾರತದ ಕೆಲವು ಮಾಧ್ಯಮಗಳು ಯುದ್ಧಕ್ಕೆ ಹಾತೊರೆಯುವಂತಿವೆ. ಅಂಥವರನ್ನು ಸಿರಿಯಾ, ಅಫ್ಗಾನಿಸ್ತಾನ ಅಥವಾ ರುವಾಂಡಕ್ಕೆ ಕೂಲಿಯಾಳುಗಳಾಗಿ ಕಳಿಸಿಕೊಡಬೇಕು.
– ಫವಾದ್ ಹುಸೇನ್ ಚೌಧರಿ, ಪಾಕಿಸ್ತಾನ ಸಚಿವ

***

ಕ್ರೀಡಾ ಆಡಳಿತದ ವಿಷಯಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ವಿಷಯವು ದೇಶದ ಜನರ ಭಾವನಾತ್ಮಕ ನಂಟು ಹೊಂದಿದೆ. ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
–ಕಿರಣ್ ರಿಜಿಜು, ಕೇಂದ್ರ ಸಚಿವ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !